ನವರಾತ್ರಿಯ ಮೊದಲನೆ ದಿನ ಶೈಲಪುತ್ರಿ ದೇವಿಯನ್ನು ಆರಾಧಿಸುತ್ತಾರೆ. ಪರ್ವತ ರಾಜ ಹಿಮವಂತನ ಪುತ್ರಿಯೇ ಶೈಲಪುತ್ರಿ. ಈ ದೇವಿಯನ್ನು ಆರಾಧಿಸಲು ಒಂದು ಕಥೆಯಿದೆ. ಪ್ರಜಾಪತಿ ಬಹ್ಮನ ಮಗನಾದ ದಕ್ಷ ತನ್ನ 27 ಮಂದಿ ಪುತ್ರಿಯರನ್ನು ಚಂದ್ರನಿಗೆ ಮದುವೆ ಮಾಡಿ ಕೊಟ್ಟಿದ್ದ. ಉಳಿದವರಲ್ಲಿ ಒಬ್ಬಳಾದ ದಾಕ್ಷಾಯಿಣಿ ಶಿವನನ್ನು ವರಿಸಿದ್ದಳು.
ದಕ್ಷ ಮಹಾರಾಜನಿಗೆ ಅಳಿಯ ಶಿವನನ್ನು ಕಂಡರೆ ಆಗುತ್ತಿರಲಿಲ್ಲ. ಹಿಮಾವೃತವಾಗಿರುವ ಕೈಲಾಸ ಅಥವಾ ಸ್ಮಶಾನದಲ್ಲಿ ವಾಸ, ಕುತ್ತಿಗೆಗೆ ನಾಗರಹಾವು ಇರುವ ಶಿವನಿಗಿಂತ ನನ್ನ ಚೆಲುವೆಯಾಗಿರುವ ಮಗಳಿಗೆ ಉತ್ತಮನಾಗಿ ರುವ ವರ ಸಿಗುತ್ತಿದ್ದ ಎಂದು ಹೇಳಿಕೊಳ್ಳುತ್ತಿದ್ದ. ಶಿವನ ವಿಚಾರದಲ್ಲಿ ಅಸಮಾಧಾನವನ್ನು ಹೊರಹಾಕುತ್ತಿದ್ದ ದಕ್ಷ ಒಂದು ದೊಡ್ಡ ಯಜ್ಞವನ್ನು ಆಯೋಜಿಸಿದ್ದ. ಈ ಯಜ್ಞಕ್ಕೆ ಆಗಮಿಸುವಂತೆ ಎಲ್ಲ ಮಕ್ಕಳಿಗೆ, ಬಂಧು ಮಿತ್ರರಿಗೆ ಆಹ್ವಾನ ನೀಡಿದ್ದ. ಈ ಸಮಾರಂಭಕ್ಕೆ ದಕ್ಷ ಪ್ರವೇಶಿಸುತ್ತಿದ್ದಂತೆ ಬ್ರಹ್ಮ ಮತ್ತು ಶಿವ ಬಿಟ್ಟು ಉಳಿದ ಎಲ್ಲರೂ ಎದ್ದು ನಿಂತು ಗೌರವ ಸೂಚಿಸಿದರು. ಈ ವೇಳೆ ದಕ್ಷ, “ಶಿವ ದೇವರು ಆಗಿರಬಹುದು. ಆದರೆ ಅವನಿಗೆ ನಾನು ಮಾವ. ಸಂಬಂಧದಲ್ಲಿ ನಾನು ಆತನಿಗಿಂತ ದೊಡ್ಡವ. ಶಿವ ಎದ್ದು ನಿಂತು ನನಗೆ ಗೌರವ ನೀಡಬಹುದಿತ್ತು. ಈ ರೀತಿ ಅಗೌರವ ಸಲ್ಲಿಸಿದ್ದು ಸರಿಯಲ್ಲ” ಎಂದು ಮನಸ್ಸಿನಲ್ಲೇ ಕಹಿಯನ್ನು ಅನುಭವಿಸಿದ.
ಕೆಲ ಸಮಯದ ಬಳಿಕ ದಕ್ಷ ಮತ್ತೊಂದು ಯಜ್ಞವನ್ನು ಆಯೋಜಿಸಿದ. ಈ ಬಾರಿ ಮಗಳು ದಾಕ್ಷಾಯಿಣಿ ಮತ್ತು ಶಿವನಿಗೆ ಆಹ್ವಾನ ನೀಡದೇ ಎಲ್ಲ ಮಕ್ಕಳಿಗೆ ಆಹ್ವಾನ ನೀಡಿದ್ದ. ತಂದೆ ಯಾಗವನ್ನು ಆಯೋಜಿಸಿದ ವಿಚಾರ ತಿಳಿದು ಮಗಳು ಶಿವನ ಜೊತೆ,”ನಾವು ಈ ಕಾರ್ಯಕ್ರಮದಲ್ಲಿ ಭಾಗಿಯಾಗೋಣವೇ” ಎಂದು ಕೇಳುತ್ತಾಳೆ. ಇದಕ್ಕೆ ಶಿವ,”ಯಾವುದೇ ಶುಭ ಸಮಾರಂಭಕ್ಕೆ ಆಹ್ವಾನ ಇಲ್ಲದೇ ಹೋಗಬಾರದು. ತವರು ಮನೆ ಸೇರಿದಂತೆ ಎಲ್ಲಿಗೂ ಹೋಗಬಾರದು” ಎಂದು ತಿಳಿ ಹೇಳುತ್ತಾನೆ. ಇದಕ್ಕೆ ದಾಕ್ಷಾಯಿಣಿ,”ಕೆಲಸದ ಒತ್ತಡದಲ್ಲಿ ಯಾವುದೋ ಅನಿವಾರ್ಯ ಕಾರಣದಿಂದಾಗಿ ತಂದೆಗೆ ಮರೆತುಹೋಗಿರ ಬಹುದು. ತಂದೆ ಮನೆಗೆ ಹೋಗಲು ಮಗಳಿಗೆ ಆಹ್ವಾನ ಯಾಕೆ ಬೇಕು”ಎಂದು ಪ್ರಶ್ನಿಸುತ್ತಾಳೆ. ತೆರಳುವುದು ಬೇಡ ಎಂದು ಹೇಳಿದರೂ ಪತ್ನಿಯ ಹಠಕ್ಕೆ ಕರಗಿ ಶಿವ ತಂದೆಯ ಮನೆಗೆ ಹೋಗಲು ಅನುಮತಿ ನೀಡುತ್ತಾನೆ.
ಪತಿಯಿಂದ ಅನುಮತಿ ಸಿಕ್ಕಿದ್ದೆ ತಡ ದಾಕ್ಷಾಯಿಣಿ ಶಿವನ ವಾಹನ ನಂದಿಯನ್ನೇರಿ, ಕೈಗೆ ಸಿಕ್ಕ ಉಡುಗೊರೆಯನ್ನು ಹಿಡಿದುಕೊಂಡು ತಂದೆಯ ಯಜ್ಞ ಸಮಾರಂಭಕ್ಕೆ ತೆರಳುತ್ತಾಳೆ. ಮಗಳನ್ನು ನೋಡಿದ ಕೂಡಲೇ ದಕ್ಷ,”ನಾನು ನಿನಗೆ ಆಹ್ವಾನ ನೀಡಿಲ್ಲ. ಬಂದಿದ್ದು ಯಾಕೆ? ನಿನ್ನ ಪತಿಯನ್ನೂ ಕರೆದುಕೊಂಡು ಬಂದಿ ದ್ದೀಯಾ” ಎಂದು ಪ್ರಶ್ನೆ ಮಾಡುತ್ತಾನೆ. ತಂದೆ ಮನ ನೋಯಿಸಿದರೂ ಆ ನೋವನ್ನು ತಡೆದುಕೊಳ್ಳುತ್ತಾಳೆ. ಯಜ್ಞ ಆರಂಭವಾದ ಬಳಿಕವೂ ದಕ್ಷ ಮತ್ತೆ ಶಿವನ ವಿರುದ್ಧ ಕಿಡಿಕಾರುತ್ತಾನೆ.”ನೀನು ಪತಿಯನ್ನು ಸೇರು. ಇಲ್ಲಿಂದ ಹೊರಟು ಹೋಗು” ಎಂದು ಅವಮಾನಿಸುತ್ತಾನೆ. ಈ ಎಲ್ಲರ ಮುಂದೆ ಆದ ಅವಮಾನವನ್ನು ಸಹಿಸದ ದಾಕ್ಷಾಯಿಣಿ ಶಿವನನ್ನು ಧ್ಯಾನಿಸುತ್ತಾ,”ಪತಿಯೇ ನಾನು ನಿಮ್ಮ ಮಾತನ್ನು ಕೇಳಿ ಇಲ್ಲಿಗೆ ಬಾರಬಾರದಿತ್ತು. ತಂದೆ ನಿಮಗೆ ಮಾಡಿದ ಈ ಅವಮಾನವನ್ನು ನಾನು ಸಹಿಸಲಾರೆ” ಎಂದು ಪ್ರಾರ್ಥಿಸಿ ಮುಂದಿ ದ್ದ ಯಜ್ಞ ಕುಂಡಕ್ಕೆ ಹಾರಿ ಪ್ರಾಣತ್ಯಾಗ ಮಾಡು ತ್ತಾಳೆ.
ಪತಿಯನ್ನು ಅವಮಾನಿಸಿದ್ದನ್ನು ಸಹಿಸದೆ ಯಜ್ಞ ಕುಂಡಕ್ಕೆ ಹಾರಿಕೊಂಡಿದ್ದ ದಾಕ್ಷಾಯಿಣಿಗೆ ಅಂದಿನಿಂದ `ಸತಿ’ ಎಂಬ ಹೆಸರು ಬಂತು. ಸತಿ ಮುಂದಿನ ಜನ್ಮದಲ್ಲಿ ಹಿಮವಂತನ ಪುತ್ರಿಯಾಗಿ ಜನಿಸಿ ‘ಶೈಲಪುತ್ರಿ’ ಎಂದು ಹೆಸರುವಾಸಿ ಯಾಗುತ್ತಾಳೆ. ಮತ್ತೆ ಶಿವನ ಮಡದಿ ಯಾಗುತ್ತಾಳೆ. ಮದುವೆಯಾದ ಬಳಿಕ ಶಿವ ಪತ್ನಿಗೆ ವರ್ಷದಲ್ಲಿ 10 ದಿನ ಮಾತ್ರ ತವರು ಮನೆಗೆ ತೆರಳಲು ಅನುಮತಿ ನೀಡುತ್ತಾನೆ. ಅದರ ಸೂಚನೆ ಏನೋ ಎಂಬಂತೆ ಈಗಲೂ ದಸರಾ ಸಮಯದಲ್ಲಿ ಮದುವೆಯಾದ ಹೆಣ್ಣು ಮಕ್ಕಳನ್ನು ತವರಿಗೆ ಆಮಂತ್ರಿಸಿ ಗೌರವಿಸುವ ಸಂಪ್ರದಾಯ ನಡೆಯುತ್ತದೆ. ಶೈಲಪುತ್ರಿ ವೃಷಭ ವಾಹನದ ಮೇಲೆ ಕುಳಿತು, ಬಲಗೈಯಲ್ಲಿ ತ್ರಿಶೂಲ ಮತ್ತು ಎಡಗೈಯಲ್ಲಿ ಕಮಲಪುಷ್ಪ ಹಿಡಿದುಕೊಂಡಿರುತ್ತಾಳೆ.
(ಸಂಗ್ರಹ: ಸುಶಾಂತ್ ಕೆರೆಮಠ)