Header Ads Widget

ಕಲಾ ತಪಸ್ಸ್ ಲಾಂಚನ ಅನಾವರಣ

ಕಳೆದೊಂದು ವರ್ಷಗಳಿಂದ ಇಂದ್ರಾಳಿಯಲ್ಲಿ  ಅಸಕ್ತರಿಗೆ ಸಂಗೀತ ಶಿಕ್ಷಣ ನೀಡುತ್ತಿರುವ ಕುಮಾರಿ ಶ್ರಾವ್ಯ ಎಸ್ ಬಾಸ್ರಿಯವರ ಸಂಗೀತ ಶಾಲೆಯ ಹೆಸರು ಮತ್ತು ಲಾಂಚನ ಅನಾವರಣ, ಸರಸ್ವತಿ ಪೂಜೆ ಮತ್ತು ವಿದ್ಯಾರ್ಥಿಗಳಿಂದ ಗಾನಾರ್ಪಣೆ ಕಾರ್ಯ ಕ್ರಮವು ಇಂದ್ರಾಳಿಯ ಶ್ರೀಸವಾಸ್ಯಂ ನಲ್ಲಿ ವೈಭವದಿಂದ ಜರಗಿತು.

 ಸಭಾಧ್ಯಕ್ಷತೆ ವಹಿಸಿ, ಲಾಂಛನ ಅನಾವರಣಗೊಳಿಸಿ   ಮಾತನಾಡಿದ ಮಾಹೆಯ ಗಾಂಧಿಯನ್ ಸೆಂಟರ್ ನಿರ್ದೇಶಕರಾದ ಪ್ರೊ ವರದೇಶ್ ಹಿರೇ ಗಂಗೆಯವರು, ನವರಸಗಳನ್ನು ವಿಷದೀಕರಿಸುತ್ತಾ ಹೋದಾಗ ನಮ್ಮೊಳಗೆ ರಸೋತ್ಪತ್ತಿ ಮತ್ತು ರಸಾಸ್ವಾದದ ಅನುಭವಗಳು ಮನಸ್ಸಿಗೆ ಆನಂದದ ಅನುಭೂತಿಯನ್ನು  ನೀಡುತ್ತದೆ.  ಕಲೆಯೆಂದರೆ ಸಂಗೀತವೋ ನಾಟ್ಯವೋ ಮಾತ್ರವಲ್ಲ. 


ಅದಕ್ಕೆ ವಿಶೇಷವಾದ ಹಾಗೂ ವಿಶಾಲವಾದ ಅರ್ಥವ್ಯಾಪ್ತಿ ಇದೆ. ಅಂತಹ ಕಲೆಗಳನ್ನು ಕರಗತ ಮಾಡಿಕೊಳ್ಳುವುದು ಸುಲಭದ ಮಾತಲ್ಲ. ಸಂಗೀತವೆ ಮೊದಲಾದ ಶಾಸ್ತ್ರೀಯ ಪರಂಪರೆಯ ಕಲೆಗಳನ್ನು ಮೈಗೂಡಿಸಿಕೊಳ್ಳಬೇಕಾದಲ್ಲಿ ಏಕಾಗ್ರತೆ, ಅಚಲವಾದ ಶ್ರದ್ಧೆ ಮತ್ತು ಶಿಸ್ತಿನಿಂದ ತಪಸ್ಸಿನಂತೆ ಸಿದ್ಧಿಸಿಕೊಳ್ಳುವುದು ಅತ್ಯಗತ್ಯ . ಈ ನೆಲೆಯಲ್ಲಿ ಶ್ರಾವ್ಯಳ ಸಂಗೀತ ಶಾಲೆಗೆ ಆಯ್ದುಕೊಂಡ ಹೆಸರು - ಕಲಾ ತಪಸ್ಸ್  ಮತ್ತು ಅದಕ್ಕೆ ಪೂರಕವಾಗಿ ರಚಿಸಿದ ಲಾಂಛನವು ಅತ್ಯಂತ ಅರ್ಥಪೂರ್ಣವಾಗಿದೆ ಎಂದು ಹೇಳಿದರು. 


ಕಲಾ ತಪಸ್ಸ್  ಹೆಸರು ಮತ್ತು ಲಾಂಚನವನ್ನು ಹೆಮ್ಮೆಯಿಂದ ಅನಾವರಣ ಗೊಳಿಸುತ್ತಾ ಈ ಸಂಸ್ಥೆಯು ಶಾಶ್ವತವಾದ ಕೀರ್ತಿಯನ್ನು ಪಡೆಯಲಿ ಎಂದು ಪ್ರೊ ವರದೇಶ ಹಿರೇಗಂಗೆ ಹೇಳಿದರು. ಇನ್ನೊಬ್ಬರಿಗೆ ಕಲಿಸುವುದರಿಂದ ದ್ವಿಮುಖ ಲಾಭವಿದೆ. ದೀಪದಿಂದ ದೀಪಗಳು ಬೆಳಗಿದಂತೆ , ಜ್ಞಾನದಾನದಿಂದ ಜ್ಞಾನವೂ ಇಮ್ಮಡಿಗೊಳ್ಳುತ್ತದೆ, ಪಸರಿಸುತ್ತಲೂ ಹೋಗುತ್ತದೆ. ಕಲಿಸುವುದರಿಂದ ಸ್ವಂತ ಕಲಿಕೆಯಲ್ಲಿಯೂ ನಿರಂತರತೆಯನ್ನು ಕಾಯ್ದುಕೊಳ್ಳುತ್ತಾ ಅಪಾರ ಪಾಂಡಿತ್ಯವನ್ನು ಗಳಿಸಬಹುದಾಗಿದೆ. ಇಂತಹ ಜ್ಞಾನಾರ್ಜನೆಯ ಯಜ್ಞ ಸದಾ ಮುಂದುವರಿಯಲಿ ಎಂದು ಪ್ರೊ ಹಿರೇಗಂಗೆ ಆಶಿಸಿದರು.


ಮುಖ್ಯ ಅತಿಥಿಗಳಾಗಿ ಭಾಗವಹಿಸಿದ ಸಂಗೀತ ಗುರು ವಿದ್ವಾನ್ ಮಧೂರು ಬಾಲಸುಬ್ರಹ್ಮಣ್ಯಂರವರು ಜ್ಯೋತಿ ಬೆಳಗಿಸಿ ಮಾತನಾಡಿ ಸಂಗೀತ ಕಲಿಕೆಯ ಮಹತ್ವವನ್ನು ಸಾದ್ಯಂತವಾಗಿ ವಿವರಿಸಿ ವಿದ್ಯಾರ್ಥಿಗಳನ್ನು ಹರಸಿದರು. ಇನ್ನೋರ್ವ ಅತಿಥಿ ಡಾ ಕಲ್ಯಾ ಸುರೇಶ ಶೆಣೈಯವರು ಶುಭಾಶಂನೆಗೈದರು.


ಅರ್ಥಪೂರ್ಣ ಲಾಂಚನವನ್ನು ಸಂಸ್ಥೆಗಾಗಿ ವಿನ್ಯಾಸಗೊಳಿಸಿದ ಖ್ಯಾತ ವೆಬ್ ಡಿಸೈನರ್ ಶಶಿಕಾಂತ ಶೆಟ್ಟಿಯವರನ್ನು ಈ ಸಂದರ್ಭದಲ್ಲಿ ಸಗೌರವ ಪೂರ್ವಕ ಅಭಿನಂದಿಸಲಾಯಿತು. ಸಂಗೀತ ಶಿಕ್ಷಕಿ ಶ್ರಾವ್ಯ ಎಸ್ ಬಾಸ್ರಿ ಪ್ರಾಸ್ತಾವಿಕವಾಗಿ ಮಾತನಾಡಿ ಸಂಸ್ಥೆಗೆ ಕಲಾ ತಪಸ್ಸ್ ಹೆಸರನ್ನು ಆಯ್ಕೆ ಮಾಡಿದ ಹಿನ್ನಲೆಯನ್ನು ಪ್ರಚುರಪಡಿಸಿದರು. 


ಶ್ರವಣ್ ಎಸ್ ಬಾಸ್ರಿ ಸಂಸ್ಥೆಯ ಮುಂದಿನ ಯೋಚನೆ ಯೋಜನೆ, ಸಾಮಾಜಿಕ ಜಾಲತಾಣದ ನಿರ್ವಹಣೆ ಮುಂತಾದವುಗಳ ಕುರಿತು ಮಾಹಿತಿ ನೀಡಿದರು. ವಿದ್ವಾನ್ ಮಧೂರು ಬಾಲಸುಬ್ರಹ್ಮಣ್ಯಂ ದಂಪತಿಗಳಿಗೆ ಶಿಷ್ಯೆ ಶ್ರಾವ್ಯ ಗುರುವಂದನೆ ಸಲ್ಲಿಸಿದರು.


ವಿದ್ಯಾರ್ಥಿಗಳಾದಶ್ರೀಪಾದ, ಸುಧಶ್ರೀ ಮತ್ತು ಸಂಜನಾ   ಪ್ರಾರ್ಥಿಸಿದರು, ವಿದ್ಯಾರ್ಥಿ ಶ್ರೀಮತಿ ಲಕ್ಷ್ಮೀ ಪುರಾಣಿಕ್  ಸ್ವಾಗತಿ ಸಿದರು. ಸುಬ್ರಹ್ಮಣ್ಯ ಬಾಸ್ರಿಯವರು ನಿರೂಪಿಸಿದ ಕಾರ್ಯಕ್ರಮದ ಕೊನೆಯಲ್ಲಿ ವಿದ್ಯಾರ್ಥಿ ಶ್ರೀಮತಿ ದಿವ್ಯಾ ಯೋಗೀಶ್ ವಂದಿಸಿದರು. ಸಂಸ್ಥೆಯ ಸಂಗೀತ ವಿದ್ಯಾರ್ಥಿಗಳಿಗೆ ವಿಶೇಷ ಸಂಗೀತ ತರಗತಿ, ಸಂಗೀತ ಗುರು ವಿದ್ವಾನ್ ಮಧೂರು ಬಾಲಸುಬ್ರಹ್ಮಣ್ಯಂರವರಿಂದ ವಿದ್ಯಾರ್ಥಿಗಳಿಗೆ ಆಶೀರ್ವಾದಪೂರ್ವಕ ಸಂಗೀತ ಪಾಠಗೀತ ಸಂವಾದ,  ಮತ್ತು  ವಿವಿಧ ಸಂಗೀತ ಸಂಬಂಧೀ ವಿನೋದದಾಟಗಳನ್ನು ನೆರವೇರಿಸಲಾಯಿತು.