Header Ads Widget

ಮತ್ತೆ ಬಂದಿದೆ ನವರಾತ್ರಿ :ನಮ್ಮ ಬದುಕಿನ ವಿಜಯದ ಹಬ್ಬವಾಗಲಿ~ ರಾಘವೇಂದ್ರ ಪ್ರಭು, ಕವಾ೯ಲು


ಕೆಡುಕಿನ ವಿರುದ್ಧ ಒಳಿತಿನ ವಿಜಯವನ್ನು ನಾವು ನವರಾತ್ರಿ ಹಬ್ಬದ ಮೂಲಕ ಸ್ಮರಿಸುತ್ತೇವೆ. ನವರಾತ್ರಿಯು ದುರ್ಗಾ ದೇವಿಗೆ ಸಮರ್ಪಿತವಾದ ಮಂಗಳಕರ ಹಬ್ಬವಾಗಿದೆ. ಒಂಬತ್ತು ರಾತ್ರಿಗಳ ಸಾಂಕೇತಿಕ ಆಚರಣೆ ಯಾಗಿರುವ ಈ ಹಬ್ಬಉತ್ತರ ಮತ್ತು ಪೂರ್ವ ಭಾರತದಾದ್ಯಂತ ಬಹಳ ಉತ್ಸಾಹದಿಂದ ಆಚರಿಸಲಾಗುತ್ತದೆ. ಈ ಆಚರಣೆಯು ಹಲವಾರು ನೃತ್ಯ ಪ್ರದರ್ಶನಗಳನ್ನು, ವಿವಿಧ ವಿಶೇಷ ಪಾಕವಿಧಾನಗಳನ್ನು ಮತ್ತು ದುರ್ಗಾ ದೇವಿಗೆ ಸಲ್ಲಿಸುವ ಪ್ರಾರ್ಥನೆಗಳನ್ನು ಒಳಗೊಂಡಿರುತ್ತದೆ.

ಶಾರದೀಯ ನವರಾತ್ರಿಯನ್ನೇಕೆ ಆಚರಿಸಲಾಗುತ್ತದೆ..? ;  ಹಿಂದೂ ಧಾರ್ಮಿಕ ಗ್ರಂಥಗಳಲ್ಲಿ ವಿವರಿಸಿದ ಕಥೆಗಳ ಪ್ರಕಾರ, ಶಕ್ತಿಯ ಅಧಿದೇವತೆಯಾದ ದುರ್ಗಾ ದೇವಿಯು ಮಹಿಷಾಸುರನನ್ನು ಕೊಂದು ರಾಕ್ಷಸ ಶಕ್ತಿಯನ್ನು ನಾಶ ಪಡಿಸಿದಳು ಮತ್ತು ಬ್ರಹ್ಮಾಂಡದ ಒಳಿತನ್ನು ರಕ್ಷಿಸಿದ್ದಾಳೆ. ದುರ್ಗಾ ದೇವಿಯು ಮಹಿಷಾಸುರನ ಮೇಲೆ ದಾಳಿ ಮಾಡಿ ಒಂಬತ್ತು ದಿನಗಳ ಕಾಲ ಅವನೊಂದಿಗೆ ಹೋರಾಡಿ ಹತ್ತನೇ ದಿನ ಅವನನ್ನು ಹತ್ಯೆಗೈದ ಸಮಯವು ಅಶ್ವಿನ ಮಾಸವಾಗಿತ್ತು. 

ಆದ್ದರಿಂದ, ಅಶ್ವಿನ ಮಾಸದ ಈ ಒಂಬತ್ತು ದಿನಗಳು ಶಕ್ತಿಯ ಆರಾಧನೆಗೆ ಮೀಸಲಾಗಿವೆ. ಪಂಚಾಂಗದ ಪ್ರಕಾರ, ಶರತ್ಕಾಲವು ಅಶ್ವಿನ ಮಾಸದಲ್ಲಿ ಪ್ರಾರಂಭವಾಗುತ್ತದೆ, ಆದ್ದರಿಂದ ಇದನ್ನು ಶಾರದೀಯ ನವರಾತ್ರಿ ಎಂದು ಕರೆಯಲಾಗುತ್ತದೆ. ಶಾರದೀಯ ನವರಾತ್ರಿಯ 10 ನೇ ದಿನವನ್ನು ವಿಜಯದಶಮಿ ಎಂದು ಆಚರಿಸಲಾಗುತ್ತದೆ.


 ನವರಾತ್ರಿ ಹಬ್ಬದ ಇತಿಹಾಸ: ನವರಾತ್ರಿ ಆಚರಣೆಯ ಹಿಂದೆ ಹಲವು ಐತಿಹ್ಯಗಳಿವೆ. ದಂತಕಥೆಯ ಪ್ರಕಾರ, ದುರ್ಗಾ ದೇವಿಯು ಮಹಿಷಾಸುರ ಎಂಬ ರಾಕ್ಷಸನೊಂದಿಗೆ ಒಂಬತ್ತು ದಿನಗಳ ಕಾಲ ಹೋರಾಡಿದಳು ಮತ್ತು ನಂತರ ನವಮಿಯ ರಾತ್ರಿ ಅವನನ್ನು ಕೊಂದಳು ಎಂದು ಕಥೆಯಲ್ಲಿ ಹೇಳಲಾಗಿದೆ. ಅಂದಿನಿಂದ ದೇವಿಯನ್ನು 'ಮಹಿಷಾಸುರಮರ್ದಿನಿ' ಎಂದು ಕರೆಯುತ್ತಾರೆ. ಅಂದಿನಿಂದ, ತಾಯಿ ದುರ್ಗೆಯ ಶಕ್ತಿಗೆ ಸಮರ್ಪಿತವಾದ ನವರಾತ್ರಿಯ ಉಪವಾಸವನ್ನು ಆಚರಿಸುವಾಗ ಅವಳ 9 ರೂಪಗಳನ್ನು ಪೂಜಿಸಲಾಗುತ್ತದೆ.

ಇನ್ನೊಂದು ದಂತಕಥೆಯ ಪ್ರಕಾರ, ಭಗವಾನ್ ಶ್ರೀರಾಮನು ದುಷ್ಟ ರಾವಣನನ್ನು ಕೊಂದು ಒಳಿತನ್ನು ವಿನಾಶ ದಿಂದ ರಕ್ಷಿಸಿದನು. ಈ ಉದ್ದೇಶವನ್ನು ಸಾಧಿಸಲು, ನಾರದನು ನವರಾತ್ರಿಯ ವ್ರತದ ಆಚರಣೆಗಳನ್ನು ಮಾಡಲು ಶ್ರೀರಾಮನನ್ನು ವಿನಂತಿಸಿದನು. ಆಗ ಭಗವಾನ್ ಶ್ರೀರಾಮನು ಉಪವಾಸವನ್ನು ಮುಗಿಸಿದ ನಂತರ ಲಂಕೆಯ ಮೇಲೆ ದಾಳಿ ಮಾಡಿ ರಾವಣನನ್ನು ಕೊಂದನು. ಅಂದಿನಿಂದ ನವರಾತ್ರಿಯ ವ್ರತ ಸಾಧನೆಗಾಗಿ ಮಾಡಲಾಗುತ್ತಿದೆ.

ಕೆಟ್ಟದ್ದರ ಮೇಲೆ ಒಳಿತಿನ ವಿಜಯವನ್ನು ಹೇಗೆ ನವರಾತ್ರಿಯು ಸೂಚಿಸುತ್ತದೆಯೋ ಹಾಗೇ ನಮ್ಮ ಕೆಟ್ಟ ಆಲೋ ಚನೆ, ಅಹಿತಕರ ಘಟನೆಗಳು, ನಕಾರಾತ್ಮಕ ಶಕ್ತಿಗಳ ಆರ್ಭಟವನ್ನು ಸಂಹಾರ ಮಾಡಲು ನವರಾತ್ರಿ ಹಬ್ಬವನ್ನು ಆಚರಿಸಲಾಗುತ್ತದೆ. ಈ ಹಬ್ಬವನ್ನು ಪ್ರಧಾನಿಯವರು ಕೂಡ ಉಪವಾಸವಿದ್ದು ಆಚರಣೆ ಮಾಡುತ್ತಾರೆ. ಈ ಹಬ್ಬ ನಮ್ಮ ಬದುಕಿನ ಹೊಸ ಮನ್ವಂತಕ್ಕೆ ಸಾಕ್ಷಿಯಾಗಲಿ' ~   ರಾಘವೇಂದ್ರ ಪ್ರಭು, ಕವಾ೯ಲು