Header Ads Widget

ವರಂಗ ಗದ್ದೆಯಲ್ಲಿ ಬೆಂಗಳೂರು ವಿದ್ಯಾರ್ಥಿಗಳಿಂದ ನಾಟಿ!

ಬೆಂಗಳೂರಿನಿಂದ ಬಂದ 150ಕ್ಕೂ ಅಧಿಕ ವಿದ್ಯಾರ್ಥಿಗಳು ಜಿಲ್ಲೆಯ ಗ್ರಾಮೀಣ ಭಾಗದಲ್ಲಿ ಕೃಷಿ ಕಾರ್ಯದಲ್ಲಿ ತಲ್ಲೀನರಾಗಿ ಸಂಭ್ರಮಿಸಿದರು. ಶೈಕ್ಷಣಿಕ ಮತ್ತು ಆಧುನಿಕ ಜೀವನದ ಇಂದಿನ ಒತ್ತಡ ಮತ್ತು ವೇಗದ ಜಗತ್ತಿನ ನಡುವೆಯೂ ಬೆಂಗಳೂರಿನ ವಿದ್ಯಾರ್ಥಿಗಳು ಕಾರ್ಕಳದ ಹಳ್ಳಿಯೊಂದಕ್ಕೆ ಬಂದು ನಾಟಿ ಮಾಡುವ ಮೂಲಕ ಜನರ ಮನಗೆದ್ದಿದ್ದಾರೆ.


ರಾಜ್ಯ ಮತ್ತು ಜಿಲ್ಲಾ ಸೌಟ್ಸ್ ಗೈಡ್ಸ್ ಕಾರ್ಯಕ್ರಮ ಆಯೋಜಿಸಿದ್ದು, ಹೆಬ್ರಿ ತಾಲೂಕಿನ ವರಂಗ ಮಾತಿಬೆಟ್ಟು ಪೆರ್ಮಾನ್ ಬಾಕ್ಯಾರ್ ಗದ್ದೆಯಲ್ಲಿ ಕೃಷಿ ಕಾರ್ಯದಲ್ಲಿ ತೊಡಗಿಸಿಕೊಂಡ ವಿದ್ಯಾರ್ಥಿಗಳು ಕೃಷಿ ಮಾಹಿತಿ ಪಡೆದರು. ಬೆಂಗಳೂರು ಆರ್ಟ್ಸ್ ಕಾಲೇಜು, ಕಾಮರ್ಸ್ ಕಾಲೇಜು ಹಾಗೂ ವಿಜ್ಞಾನ ಕಾಲೇಜು, ಜಿಆಫ್‌ಜಿಸಿ ಪೀಣ್ಯ, ಮಹಾರಾಣಿ ಲಕ್ಷ್ಮೀ ಅಮ್ಮಣ್ಣಿ ಕಾಲೇಜು, ಆರ್.ಸಿ. ಕಾಲೇಜು, ಎಂಇಎಸ್ ಕಾಲೇಜು ಮಲ್ಲೇಶ್ವರಂ, ನೃಪತುಂಗ ಯುನಿವರ್ಸಿಟಿ, ಸರಕಾರಿ ಪಿಯು ಕಾಲೇಜು, ಹೆಬ್ಬಾಳದ ಸರಕಾರಿ ಪದವಿ ಕಾಲೇಜು, ಎಂಇಎಸ್, ಕಿಶೋರ ಕೇಂದ್ರ, ಶೇಷಾದ್ರಿಪುರಂ ಮೈನ್ ಕಾಲೇಜು, ಮಹಾರಾಣಿ ಕಾಲೇಜು ಸಹಿತ 15ಕ್ಕೂ ಹೆಚ್ಚಿನ ಕಾಲೇಜಿನ ಭಾರತ್ ಸೈಟ್ಸ್ ಗೈಡ್ಸ್ ಕರ್ನಾಟಕದ ಬೆಂಗಳೂರಿನ ಉತ್ತರ ಜಿಲ್ಲೆಯ ಒಟ್ಟು 150 ವಿದ್ಯಾರ್ಥಿಗಳು ಸೇರಿ ಸುಮಾರು ನಾಲ್ಕು ಎಕ್ರೆ ಗದ್ದೆಗಳಲ್ಲಿ ನಾಟಿ ಕಾರ್ಯ ಮಾಡಿದರು.


ಬಹುತೇಕ ಪದವಿ ಹಾಗೂ ಪಿಯುಸಿ ವಿದ್ಯಾರ್ಥಿಗಳಾಗಿರುವ ಇವರು ತುಳು ನಾಡಿನ ಸಂಸ್ಕೃತಿ, ಕೃಷಿ ಪರಂಪರೆ, ಇಲ್ಲಿನ ಪಾರ್ದನದ ಬಗ್ಗೆ ತಿಳಿದುಕೊಂಡರು. ಹಲಸಿನ ಸೊಳೆ ಸುಕ್ಕ, ಪತ್ತೊಡೆ, ಹುರುಳಿ ಚಟ್ಟಿ ಕುಚ್ಚಲಕ್ಕಿ, ಬೆಳ್ಳಿಗೆ, ಸಾರು, ಪಲ್ಯವನ್ನು ಭೋಜನಕ್ಕೆ ಉಣಪಡಿಸಲಾಯಿತು.


ಸ್ಕೌಟ್ ಗೈಡ್ಸ್ ರಾಜ್ಯ ಮುಖ್ಯ ಆಯುಕ್ತ ಪಿ.ಜಿ.ಆರ್. ಸಿಂಧಿಯಾ, ಬೆಂಗಳೂರಿನ ಉತ್ತರ ಜಿಲ್ಲೆ ಮುಖ್ಯ ಆಯುಕ್ತ ಪ್ರಸನ್ನ ಕುಮಾರ್, ಜಿಲ್ಲಾ ಕಾರ್ಯದರ್ಶಿ ಬಿ.ಕೆ. ಶೆಷಾದ್ರಿ, ಜಿಲ್ಲೆಯ ಮುಖ್ಯ ಆಯುಕ್ತ ಜಯಕರ ಶೆಟ್ಟಿ ಇಂದ್ರಾಳಿ, ಆಯುಕ್ತ ಜನಾರ್ದನ್ ಕೊಡವೂರು, ಗೈಡ್ ಆಯುಕ್ತ ಜ್ಯೋತಿ ಜೆ. ಪೈ, ಮುನಿಯಾಲು ಸ. ಪ. ಕಾಲೇಜಿನ ಪ್ರಾಂಶುಪಾಲ ಸುಧಾಕರ ಕೆ ಜೆ., ಉಪನ್ಯಾಸಕ ಮಂಜುನಾಥ್, ಸುಭಾಷ್, ಶೋಭಾ ಮತ್ತು ಪ್ರಮುಖರಾದ ಲೀಲಾ, ಸುಬ್ರಹ್ಮಣ್ಯ, ನಿತಿನ್ ಅಮೀನ್, ವಿತೇಶ್ ಕಾಂಚನ್, ಶರತ್, ಸಿದ್ಧಾಂತ್, ಸುಶಾಂತ್ ಕೆರೆಮಠ, ರತ್ನಾಕ‌ರ್ ಉಪಸ್ಥಿತರಿದ್ದರು.