Header Ads Widget

ಕಾವಿ ಕಲೆಯ ಏಕವ್ಯಕ್ತಿ ಚಿತ್ರಕಲಾ ಪ್ರದರ್ಶನ “ಕಾವಿ ಕೆಲಿಡೋಸ್ಕೋಪ್”

ಕಾವಿ ಆರ್ಟ್ ಫೌಂಡೇಶನ್ ಹಾಗೂ ಭಾಸ ಗ್ಯಾಲರಿ ಮತ್ತು ಸ್ಟುಡಿಯೋ ಸಂಯೋಜಿಸಿದ ಕಲಾವಿದ ಜನಾರ್ದನ ರಾವ್ ಹಾವಂಜೆಯವರ ಕಾವಿ ಕಲೆಯ ಏಕವ್ಯಕ್ತಿ ಚಿತ್ರಕಲಾ ಪ್ರದರ್ಶನ “ಕಾವಿ ಕೆಲಿಡೋಸ್ಕೋಪ್” ಕರ್ನಾಟಕ ಲಲಿತಕಲಾ ಅಕಾಡೆಮಿಯ ಅಧ್ಯಕ್ಷರಾದ ಪ.ಸ. ಕುಮಾರ್‌ರವರಿಂದ ಚಿತ್ರಕಲಾ ಪರಿಷತ್ತಿನ ಗ್ಯಾಲರಿಯಲ್ಲಿ ಉದ್ಘಾಟನೆಗೊಂಡಿತು.

“ದೇಶೀಯ ಪಾರಂಪರಿಕ ಕಾವಿ ಕಲೆಯ ಹೂರಣವನ್ನು ಹಾವಂಜೆಯವರು ಈ ಪ್ರದರ್ಶನದಲ್ಲಿ ಕಲಾ ರಸಿಕರಿಗೆ ಉಣಬಡಿಸಿದ್ದಾರೆ. ಕರ್ನಾಟಕದ ಕರಾವಳಿಯ ಭಾಗದ ಈ ಅನೂಹ್ಯ ಕಲೆಯನ್ನು ಕನ್ನಡಿಗರಾದ ನಾವು ಉಳಿಸಿ ಬೆಳೆಸಬೇಕಾದುದು ನಮ್ಮ ಕರ್ತವ್ಯ. ಈ ಕಲೆಗೆ ಆದಷ್ಟು ಶೀಘ್ರದಲ್ಲಿ ಕರ್ನಾಟಕಕ್ಕೆ ಜಿ.ಐ. ಟ್ಯಾಗ್ ದೊರಕಲಿ. ಅಕಾಡೆಮಿಯಿಂದ ಈ ಕಲೆಯ ಬೆಳೆಸುವಿಕೆಗಾಗಿ ಪೂರಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುವುದು. ” ಎಂಬುದಾಗಿ ತಿಳಿಸಿದರು.

ಹಿರಿಯ ಕಲಾವಿದರಾದ ಗುರುದಾಸ್ ಶೆಣೈ “ ಅಧ್ಯಯನಶೀಲ ಸಮಕಾಲೀನ ಕಲಾವಿದನೋರ್ವನ ಕೈಯಲ್ಲಿ ಪ್ರಾಂತೀಯ ಕಲೆಯೊಂದು ದೊರೆತಾಗ ಅದು ಹೊರ ಹೊಮ್ಮಿಸುವ ರೂಪಗಳಿಗೆ ಈ ಕಲಾಪ್ರದರ್ಶನವೇ ಸಾಕ್ಷಿ” ಎಂಬುದಾಗಿ ಅಭಿಪ್ರಾಯವಿತ್ತರು. ಅತಿಥಿಗಳಾದ ಲಹರಿ ಗ್ರೂಪ್‌ನ ರೂಪಾ ಹರಿಪ್ರಸಾದ್, ಹಲವು ಹಿರಿಯ ಕಲಾವಿದರು, ಆರ್ಕಿಟೆಕ್ಟ್÷್ಸ ಸಮಾರಂಭದಲ್ಲಿದ್ದರು.

ಕಲಾವಿದ ಡಾ. ಜನಾರ್ದನ ಹಾವಂಜೆ ಕಟ್ಟಡಗಳ ಮೇಲೆ ಕೆಮ್ಮಣ್ಣಿನ ಮೇಲೆ ಗೀರಿ ರಚಿಸಲಾಗುವ ಈ ಅಳಿವಿನಂಚಿನ ಪುರಾತನ ಕಲೆಯ ಬಗೆಗೆ ವಿವರಿಸಿ ಪ್ರಸ್ತಾವನೆಗೈದು ಕಾರ್ಯಕ್ರಮ ನಿರೂಪಿಸಿದರು. ಕನ್ನಡ ರಾಜ್ಯೋತ್ಸವದ ಈ ಶುಭ ಸಂದರ್ಭದಲ್ಲಿ ಕರ್ನಾಟಕದ ಸಾಂಪ್ರದಾಯಿಕ ಹಾಗೂ ಜನಪದೀಯ ಲಕ್ಷಣಗಳುಳ್ಳ ಕಾವಿ ಕಲಾಪ್ರದರ್ಶನವು 17ನೇ ನವೆಂಬರ್ ತನಕ ಚಿತ್ರಕಲಾ ಪರಿಷತ್ತಿನ ಗ್ಯಾಲರಿಯಲ್ಲಿ ಕಲಾ ಸಹೃದಯರಿಗೆ ತೆರೆದಿರಲಿದೆ.