Header Ads Widget

ಶಾಲು ಹಾಕಿಕೊಂಡು ಮೆರೆಯುವುದರಿಂದ ಕನ್ನಡದ ಉದ್ಧಾರ ಸಾಧ್ಯವಿಲ್ಲ- ಡಾ ಮಹಾಬಲೇಶ್ವರ ರಾವ್

 


"ಶಾಲು ಹಾಕಿಕೊಂಡು ಮೆರೆಯುವುದರಿಂದ, ಹಾ ಸವಿಗನ್ನಡ, ಸಿರಿಗನ್ನಡ' ಎಂಬ ಘೋಷಣೆಗಳನ್ನು ಕೂಗುವುದರಿಂದ, ಆಂಗ್ಲ ನಾಮಫಲಕಗಳಿಗೆ ಮಸಿಬಳಿಯುವುದರಿಂದ ಕನ್ನಡದ ಉದ್ಧಾರವಾಗದು. ಈ ನಾಡಿನಲ್ಲಿ ಒಂದರಿಂದ ಹತ್ತನೆಯ ತರಗತಿವರೆಗೆ ಕನ್ನಡ ಭಾಷಾ ಶಿಕ್ಷಣ ಮಾಧ್ಯಮ ಜಾರಿಯಾದಾಗಲೇ,ಸರಕಾರಿ ಮತ್ತು ಖಾಸಗಿ ವಲಯಗಳಲ್ಲಿ ಶುಚಿಗಾರನಿಂದ ಹಿಡಿದು ಮುಖ್ಯ ಕಾರ್ಯದರ್ಶಿವರೆಗೆ ಎಲ್ಲ ಹುದ್ದೆಗಳಿಗೆ ಕನ್ನಡ ಭಾಷಾ ಮಾಧ್ಯಮದಲ್ಲಿ ಓದಿದವರಿಗೆ ಶೇ ಐವತ್ತು ಸ್ಥಾನಗಳು ಮೀಸಲು ಎಂಬ ನೀತಿ ಜಾರಿಯಾದಾಗಲೇ ನಿಜವಾದ ರಾಜ್ಯೋತ್ಸವ ಅದೇ ನಿಜವಾದ ಸಂಭ್ರಮ.ನಮ್ಮನಮ್ಮ ನುಡಿಗಳನ್ನು ನಾವು ನಮ್ಮ ತಾಯಿಯನ್ನು ಆದರಿಸಿದಂತೆ ಆದರಿಸಿದಾಗಲೆ ಕನ್ನಡ ಜೀವಂತವಾಗಿರಬಲ್ಲುದು" ಎಂದು ಡಾ ಮಹಾಬಲೇಶ್ವರ ರಾವ್ ನುಡಿದರು.

ಅವರು ಡಾ ಟಿಎಂಎ ಪೈ ಶಿಕ್ಷಣ ಕಾಲೇಜಿನಲ್ಲಿ ಏರ್ಪಡಿಸಲಾದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಹೀಗೆ ಅಭಿಪ್ರಾಯಪಟ್ಟರು. ಈ ಸಂದರ್ಭದಲ್ಲಿ ವಿದ್ಯಾರ್ಥಿ ಶಿಕ್ಷಕರಾದ ಭೀಮೇಶ್ ಬೆಣ್ಣಿಹಳ್ಳಿ ಕರ್ನಾಟಕ ಏಕೀಕರಣದ ಬಗ್ಗೆ ಪ್ರಬಂಧ ಮಂಡಿಸಿದರೆ ಕಿಶನ್ ನಾಯಕ್ ಯುವಜನತೆಯಲ್ಲಿ ಕನ್ನಡದ ಅಭಿಮಾನ ಬೆಳೆಸುವ ಬಗ್ಗೆ ಮಾತನಾಡಿದರು. ಸ್ಪಂದನಾ ಮಯ್ಯ ದಿ ಕಯ್ಯಾರ ಕಿಞ್ಞಣ್ಣ ರೈಗಳ ಬಗ್ಗೆ ಸ್ಥೂಲ ಮಾಹಿತಿ ನೀಡಿದರು.ದೀಪಿಕಾ,ಸುಚಿತ್ರಾ ಮತ್ತುಪೃಥ್ವಿ ರಾಜ್ ಹಾಗೂ ವೃಂದದವರು ಕ‌ನ್ನಡ ಗೀತೆಗಳನ್ನು ಹಾಡಿದರು.ದೀಕ್ಷಾ ಮತ್ತು ಬಳಗದವರು ವೀರವನಿತೆ ಓಬವ್ವ ನೃತ್ಯಗೀತೆ ಅಭಿನಯಿಸಿದರು.ಮಮತಾ ಸ್ವಾಗತ ಕೋರಿದರೆ ಮೈತ್ರಾ ಧನ್ಯವಾದ ಸಮರ್ಪಿಸಿದರು ಅಮಿತಾ ಕಾರ್ಯಕ್ರಮ ನಿರೂಪಿಸಿದರು.