ತುಳಸಿಪೂಜೆಯ ಮಾಡಬನ್ನಿರಿ ಶುದ್ಧ ಕಾರ್ತಿಕ ಮಾಸದಿ/
ದಳದಿ ವಾಸಿಪ ವಿಷ್ಣುದೇವರ ನಿತ್ಯ ಭಜಿಸಿರಿ ನೇಮದಿ//
ಹರಿಯ ನೇತ್ರದ ವಾರಿಯಿಂದಲಿ ಜನಿಸಿ ಬಂದಿಹ ಸುಂದರಿ/
ಶರಣ ಮನುಜನ ಘೋರ ದುರಿತವ ದೂರ ಮಾಡುವ ಶುಭಕರಿ//
ವರ ಪ್ರಬೋಧಿನಿ ಶ್ರೇಷ್ಠ ಪತಿವ್ರತೆ ವಿಶ್ವ ವಂದಿತೆ ತಾಯಿಯು/
ಹರಿಗೆ ಪ್ರೀತಳೆ ಸರ್ವ ಮಂಗಳೆ ವಿಶ್ವ ಪಾವನೆ ಜನನಿಯು//
ಖಳ ಜಲಂಧರನನ್ನು ವರಿಸಿದ ವೃಂದ ಮಾತೆಯ ನೆನೆಯಿರಿ/
ಇಳೆಯ ಬಕುತರ ಕಷ್ಟ ಕಳೆಯುವ ವಿಶ್ವ ಪೂಜ್ಯಳ ನಮಿಸಿರಿ//
ಅಪ್ರಮೇಯನ ಮಡದಿ ರುಕ್ಮಿಣಿ ಭಾಗ್ಯಧಾತೆಯ ನುತಿಸಿರಿ/
ಸುಪ್ರಶಾಂತನ ಮುದ್ದಿನರಗಿಣಿ ಗಿಡವ ಮನೆಯಲಿ ಬೆಳೆಸಿರಿ//
✍ ಪ್ರಶಾಂತ ಕುಮಾರ್ ಮಟ್ಟು