ನ.16-17 : ಉಡುಪಿ ಶ್ರೀ ಕೃಷ್ಣ ಮಠದ ಮದ್ವಾಂಗಣದಲ್ಲಿ ಬುಡೋಕಾನ್ ಕರಾಟೆ ಎಂಡ್ ಸ್ಪೋರ್ಟ್ಸ್ ಅಸೋಸಿಯೇಷನ್ ನೇತೃತ್ವದಲ್ಲಿ 4ನೇ ರಾಷ್ಟ್ರಮಟ್ಟದ ಕರಾಟೆ ಸ್ಪರ್ಧಾಕೂಟ
ಪರ್ಯಾಯ ಶ್ರೀ ಪುತ್ತಿಗೆ ಮಠ, ಶ್ರೀ ಕೃಷ್ಣ ಮಠ ಉಡುಪಿ ಇದರ ಆಶ್ರಯದಲ್ಲಿ ಬುಡೋಕಾನ್ ಕರಾಟೆ ಎಂಡ್ ಸ್ಪೋರ್ಟ್ಸ್ ಅಸೋಸಿಯೇಶನ್ ಕರ್ನಾಟಕ (ಬುಡೋಕಾನ್ ಕರಾಟೆ ಇಂಟರ್ ನ್ಯಾಶನಲ್ ಆಸ್ಟ್ರೇಲಿಯ) ಇದರ ನೇತೃತ್ವದಲ್ಲಿ 4ನೇ ರಾಷ್ಟ್ರಮಟ್ಟದ ಕರಾಟೆ ಸ್ಪರ್ಧಾ ಕೂಟವು ನ.16 ಮತ್ತು 17ರಂದು ಉಡುಪಿ ಶ್ರೀ ಕೃಷ್ಣ ಮಠದ ಮದ್ವಾಂಗಣದಲ್ಲಿ ನಡೆಯಲಿದೆ ಎಂದು ಸ್ಪರ್ಧಾಕೂಟದ ಸಂಘಟನಾ ಸಮಿತಿಯ ಸಲಹೆಗಾರ ಶಿವಕುಮಾರ್ ಅಂಬಲಪಾಡಿ ಪತ್ರಿಕಾ ಗೋಷ್ಠಿಯಲ್ಲಿ ತಿಳಿಸಿದರು.
ನ.16 ಶನಿವಾರ ಬೆಳಿಗ್ಗೆ ಗಂಟೆ 10.00ಕ್ಕೆ ಉಡುಪಿ ಶ್ರೀ ಕೃಷ್ಣ ಮಠದ ಮದ್ವಾಂಗಣದಲ್ಲಿ ನಡೆಯಲಿರುವ ಉದ್ಘಾಟನಾ ಸಮಾರಂಭದಲ್ಲಿ ಪರ್ಯಾಯ ಶ್ರೀ ಶ್ರೀ ಸುಗುಣೇಂದ್ರ ತೀರ್ಥ ಶ್ರೀಪಾದರು ಹಾಗೂ ಶ್ರೀ ಶ್ರೀ ಸುಶ್ರೀoದ್ರ ತೀರ್ಥ ಶ್ರೀಪಾದರು ಆಶೀರ್ವಚನ ನೀಡಲಿದ್ದು, ಅಂಬಲಪಾಡಿ ಶ್ರೀ ಜನಾರ್ಧನ ಮತ್ತು ಮಹಾಕಾಳಿ ದೇವಸ್ಥಾನದ ಧರ್ಮದರ್ಶಿ ಡಾ! ನಿ.ಬೀ. ವಿಜಯ ಬಲ್ಲಾಳ್ ಅಧ್ಯಕ್ಷತೆಯಲ್ಲಿ ಉಡುಪಿ ಶಾಸಕ ಯಶ್ಪಾಲ್ ಎ. ಸುವರ್ಣ ಸ್ಪರ್ಧಾ ಕೂಟವನ್ನು ಉದ್ಘಾಟಿಸಲಿದ್ದಾರೆ.
ಕಾಪು ಶಾಸಕ ಗುರ್ಮೆ ಸುರೇಶ್ ಶೆಟ್ಟಿ ಪ್ರಶಸ್ತಿ ಫಲಕಗಳನ್ನು ಅನಾವರಣಗೊಳಿಸಲಿದ್ದಾರೆ. ಉಡುಪಿ ನಗರಸಭೆ ಅಧ್ಯಕ್ಷ ಪ್ರಭಾಕರ ಪೂಜಾರಿ ಸಹಿತ ಗಣ್ಯರು ಭಾಗವಹಿಸಲಿದ್ದಾರೆ.
ಈ ಸಂದರ್ಭದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಸಾಧಕರನ್ನು ಪರ್ಯಾಯ ಶ್ರೀಪಾದರು ಸನ್ಮಾನಿಸಲಿದ್ದಾರೆ. ನ.17 ರವಿವಾರ ಸಂಜೆ ಗಂಟೆ 5.00ಕ್ಕೆ ಮಾಜಿ ಸಚಿವ ಪ್ರಮೋದ್ ಮಧ್ವರಾಜ್ ಅಧ್ಯಕ್ಷತೆಯಲ್ಲಿ ನಡೆಯಲಿರುವ ಸಮಾರೋಪ ಸಮಾರಂಭದಲ್ಲಿ ಏಕಜಾತಿ ಧರ್ಮ ಪೀಠ, ದ್ವಾರಕಾ ಮಾಯಿ ಮಠ ಶಂಕರಪುರ ಪೀಠಾಧೀಶ್ವರ ಶ್ರೀ ಸಾಯಿ ಈಶ್ವರ್ ಗುರೂಜಿ ಅವರು ಆಶೀರ್ವಚನ ನೀಡಲಿದ್ದಾರೆ.
ಅಖಿಲ ಕರ್ನಾಟಕ ಸ್ಪೋರ್ಟ್ಸ್ ಕರಾಟೆ ಅಸೋಸಿಯೇಷನ್(ರಿ.) ಹಾಗೂ ದಕ್ಷಿಣ ಭಾರತ ಕರಾಟೆ ಫೆಡರೇಶನ್ ಮುಖ್ಯ ಕಾರ್ಯದರ್ಶಿ ಸೆನ್ಸಾಯ್ ಭಾರ್ಗವ ರೆಡ್ಡಿ ಸಹಿತ ಗಣ್ಯರು ಭಾಗವಹಿಸಲಿದ್ದಾರೆ ಎಂದು ಅವರು ತಿಳಿಸಿದರು.
ಬುಡೋಕಾನ್ ಕರಾಟೆ ಎಂಡ್ ಸೋರ್ಟ್ಸ್ ಅಸೋಸಿಯೇಷನ್ ಅಧ್ಯಕ್ಷ ಹಾಗೂ ಸ್ಪರ್ಧಾ ಕೂಟದ ಸಂಘಟಕ ವಾಮನ್ ಪಾಲನ್ ಮಾತನಾಡಿ, 4ನೇ ರಾಷ್ಟ್ರ ಮಟ್ಟದ ಕರಾಟೆ ಸ್ಪರ್ಧಾ ಕೂಟದಲ್ಲಿ ಕರ್ನಾಟಕ, ಮಹಾರಾಷ್ಟ್ರ, ಕೇರಳ, ತಮಿಳುನಾಡು, ಮೇಘಾಲಯ ಸಹಿತ ವಿವಿಧ ರಾಜ್ಯಗಳಿಂದ ಸುಮಾರು 2000ಕ್ಕೂ ಮಿಕ್ಕಿ ಸ್ಪರ್ದಾಳುಗಳು ಭಾಗವಹಿಸಲಿದ್ದಾರೆ. 'ಗ್ರಾಂಡ್ ಚಾಂಪಿಯನ್ಶಿಪ್'ಗಾಗಿ ನಡೆಯುವ ಸ್ಪರ್ಧೆಯಲ್ಲಿ 14 ವರ್ಷ ಕೆಳಗಿನ ವಿಭಾಗ, 14ರಿಂದ 18 ವರ್ಷದ ವಿಭಾಗ ಮತ್ತು 18 ವರ್ಷ ಮೇಲ್ಪಟ್ಟ ವಿಭಾಗದಲ್ಲಿ ಪುರುಷರು ಮತ್ತು ಮಹಿಳೆಯರಿಗೆ ಪ್ರತ್ಯೇಕವಾಗಿ ಕಟಾ ಮತ್ತು ಕುಮಿಟೆ ವಿಭಾಗದಲ್ಲಿ ಸ್ಪರ್ಧೆಗಳು ನಡೆಯಲಿವೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಉಡುಪಿ ಜಿಲ್ಲಾ ಕರಾಟೆ ಶಿಕ್ಷಕರ ಸಂಘದ ಅಧ್ಯಕ್ಷ ರೋಹಿತಾಕ್ಷ ಉದ್ಯಾವರ ಮತ್ತು ಬುಡೋಕಾನ್ ಕರಾಟೆ ಎಂಡ್ ಸ್ಪೋರ್ಟ್ಸ್ ಅಸೋಸಿಯೇಷನ್ ಕಾರ್ಯದರ್ಶಿ ಶ್ರೇಯಸ್ ಉಪ್ಪೂರು ಉಪಸ್ಥಿತರಿದ್ದರು.