Header Ads Widget

​ಹಿಮದಂತಾದ ಅಗ್ನಿಸಂಜಾತೆ~ ​~ -ಡಾ. ಮಾಧವಿ ಎಸ್ ಭಂಡಾರಿ 

ಹದಿನೆ​೦ಟು ದಿನಗಳ ಸಂಗ್ರಾಮದಲ್ಲಿ

ಯಜ್ಞಸೇನಿಯಾಗಿದ್ದಳು ಸೋತು ಸುಣ್ಣ

ಯುದ್ಧರಂಗದಲ್ಲಿ ಕಾದಾಡಿದವರಿಗಿಂತ ಹೆಚ್ಚು
ಏನೇನೆಲ್ಲ ಕಳಕೊಂಡಿದ್ದಳವಳು ಮಹಾಸಂಗ್ರಾಮದಲ್ಲಿ
ಹೆತ್ತೊಡಲೇ ಕುರುಕ್ಷೇತ್ರದ ರುದ್ರಭೂಮಿಯಾಗಿತ್ತು
ಇದಬಿಟ್ಟು ತಾಯ್ತನದ ಮರುಕಕ್ಕೆ ಬೇರೆ ಬೇಕೆ?
ಸೇಡುತೀರಿಸಿಕೊಂಡೆನೆ​೦ದು ಬೀಗುವುದಕ್ಕೆ?
ಅಲ್ಲೇನಿತ್ತು ಸಾಧನೆಯ ಕಿರೀಟಕ್ಕೆ ಸಿಕ್ಕಿಸಲು?
ಎಲ್ಲೆಲ್ಲೂ ವಿಧವೆಯರು, ವಿಕಲಾಂಗರು
ಬಿಕ್ಕಳಿಸುವ ಅನಾಥ ಮಕ್ಕಳು ಬೀದಿಬದಿಯಲ್ಲಿ
ಎಣಿಸಿರಲೇ ಇಲ್ಲ ಅವಳು ಹೀಗಾಗಬಹುದೆಂದು
ವಿಧಿ ಎಷ್ಟೊಂದು ಕ್ರೂರಿ, ರೋಧಿಸಿದಳು ಪಾಂಚಾಲಿ
ಇನ್ನೇನು, ಸೇಡು ತೀರಿಸಿಕೊಳ್ಳಬೇಕಿತ್ತಲ್ಲ
ಲಗಾಮು ಹಿಡಿಯದೆ ಹೋದೆ ಹುಚ್ಚುಕುದುರೆಯ
ಬೆನ್ನು ಹತ್ತಿದವಳು!

ನನ್ನ ಸಖನೇ ಸಂಪೂರ್ಣ ಸೂತ್ರಧಾರನಾಗಿದ್ದ
ಬದಲಾಯಿಸಬಹುದಿತ್ತಲ್ಲ ಫಲಿತಾಂಶವನ್ನವನು
ನನಗಾಗಿಯಾದರೂ ಹಾಗೇಕೆ ಮಾಡಲಿಲ್ಲ ಅವನು?
ಓಹ್! ಬಂದುಬಿಟ್ಟನಲ್ಲ...ನೆನೆದವರ ಮನದಲ್ಲಿ!
ಮನದ ಮುಸುಕು ಸರಿಸಿ ಮನಸ ಬಿಚ್ಚಿಟ್ಟೆ ಆ ಕ್ಷಣ
ಮಂದಸ್ಮಿತನಾಗಿ ಎಲ್ಲವನ್ನೂ ಕೇಳಿಸಿಕೊಂಡ.

ಕೃಷ್ಣೆ, ನೀನಂದುಕೊ​೦​೦ತೆ ನಾನಲ್ಲಿ ಏನೂ ಆಗಿರಲಿಲ್ಲ
ಕೇವಲ, ಕೇವಲ, ಒಬ್ಬ ಸಾಮಾನ್ಯ ಸಾರಥಿಯಷ್ಟೆ ಆಗಿದ್ದೆ!
ಈ ಕ್ಷಣ ಕಣ್ಣು ಮುಚ್ಚಿ ನೀನೇ ಯೋಚಿಸಿನೋಡು
ನೀನೇ ಬದಲಾಯಿಸಬಹುದಿತ್ತಲ್ಲ ಫಲಿತಾಂಶವನ್ನ

ಸಖಾ, ಹೆಣ್ಣು ನಾನು, ನಾನೇನು ಮಾಡಬಹುದಿತ್ತು
ಈ ಕೃಷ್ಣೆಯ ಕೈಯಲ್ಲೇನಿತ್ತು ಅದನ್ನು ಮೊದಲು ಹೇಳು
ಬಿಲ್ಲು ಬಾಣ ಭರ್ಚಿ ಗದೆಗಳೆಲ್ಲ ಅತಿರಥ-ಮಹಾರಥರಂತಹ
ಹೋರಾಡುವ ವೀರಾಧಿವೀರ ಪುರುಷರ ಕೈಯಲ್ಲಿತ್ತಲ್ಲವೆ?

ಕೃಷ್ಣೆ, ಅವೆಲ್ಲ ನಂತರದ ಮಾತುಗಳು
ನನ್ನದು ಹೋರಾಟದ ಬೀಜ-
ಮೊಳಕೆಯೊಡೆಯುವುದಕ್ಕೂ ಮುಂಚಿನ ಮಾತು
ಅರ್ಥವಾಗಲಿಲ್ಲವೇ ನಿನಗೆ ನನ್ನ ನುಡಿ...
ನಾನೇ ಬಿಡಿಸಿ ಹೇಳುವೆ ಕೇಳಿಲ್ಲಿ-

ಸ್ವಯಂವರದ​೦ದು ಸೂತಪುತ್ರನೆಂದು
ಕರ್ಣನ ಹಳಿಯದೆ ಸುಮ್ಮನಿರುತ್ತಿದ್ದರೆ...
ಐವರೂ ಹಂಚಿಕೊಳ್ಳಿ ಎಂದು, ಅಂದು
ನಿನ್ನತ್ತೆ ಅಂದಾಗ ಧೀರೆ ನೀನು ಒಲ್ಲೆ-
ಯೆಂದು ಖಂಡತು​೦ಡವಾಗಿ ನುಡಿದಿದ್ದರೆ...
ಇಂದ್ರಪ್ರಸ್ಥದರಮನೆಯಲ್ಲಿ ನೆಲವೆಂದು
ಭ್ರಮಿಸಿ ನೀರಲ್ಲಿ ಬಿದ್ದ ಸುಯೋಧನನ
ಕುರುಡನ ಮಗ ಕುರುಡನೆಂದು
ನಾಲಗೆ ಹರಿಯಬಿಡದಿದ್ದರೆ, ಯೋಚಿಸು-
ಫಲಿತಾಂಶ ಬೇರೆಯೇ ಆಗುತ್ತಿತ್ತೇನೋ!

ವಸ್ತಾçಪಹರಣಕ್ಕೆ ಆಸ್ಪದವಿರುತ್ತಿತ್ತೆ?
ಬಿಚ್ಚಿದ ಮುಡಿ ಕಟ್ಟಲು ಭೀಮ ಬೇಕಿತ್ತೆ?
ಹೆತ್ತು-ಹೊತ್ತು ಸಲುಹಿದ ಮಕ್ಕಳ ಮುಖ-
ಶವದುಡುಗೆಯಡಿ ನೋಡುವ ಪ್ರಸಂಗ ಬರುತ್ತಿತ್ತೆ?

ಕೇಳು ಕೃಷ್ಣೆ, ಆಡುವ ಮಾತು ಹಿತಮಿತವಾಗಿದ್ದರೆ
ಹಿಂಪಡೆವಾಗ ಅಹಿತವಾಗಲಾರದು ನಮಗೂ-ಪರರಿಗೂ
ಹಾವಿನ ವಿಷ ಹಲ್ಲಿನಲ್ಲಿರಬಹುದು; ಮನುಷ್ಯನ ವಿಷ-
ಜಠರದಲ್ಲಷ್ಟೇ ಅಲ್ಲ, ಯೋಚಿಸದೆ ಆಡುವ ಮಾತುಗಳಲ್ಲೂ ಇವೆ.
ಯೋಚಿಸಿನೋಡು ಕೃಷ್ಣೆ, ಯೋಚಿಸಿನೋಡು.

ಯೋಚಿಸಿದಳು ದ್ರುಪದ ನಂದಿನಿ, ಕುಳಿತು-ನಿಂತು ಯೋಚಿಸಿದಳು
ಹಿಂಪಡೆವ​೦ತಿದ್ದರೆ...ಯೋಚಿಸಿದಳು ಯಜ್ಞಸೇನಿ
ಹೆದೆಯೇರಿ ಹೊರಚಿಮ್ಮಿದ ಬಾಣ ತುಟಿಬಿಚ್ಚಿ ಹೊರಹಾಕಿದ ಶಬ್ದ
ಕುಸಿದು ಕುಳಿತಳು ಕೆಳಗೆ ಪಾತಾಳಕ್ಕಪ್ಪಳಿಸಿದಂತೆ ಪಾಂಚಾಲಿ
ಹಿಮದ​೦ತಾದಳು ಅಲ್ಲೆ ಇದ್ದಲ್ಲೆ ಅಲ್ಲಾಡದಂತೆ ಅಗ್ನಿಸಂಜಾತೆ.
​~ -ಡಾ. ಮಾಧವಿ ಎಸ್ ಭಂಡಾರಿ