Header Ads Widget

ಎಸ್.ಎಮ್.ಎಸ್.ಆಂಗ್ಲ ಮಾಧ್ಯಮ ಶಾಲೆ (ಸಿ.ಬಿ.ಎಸ್.ಇ.) ಮತ್ತು AICS ಉಡುಪಿ ಮತ್ತು ದಕ್ಷಿಣ ಕನ್ನಡ ಇವರ ಸಹಯೋಗದಲ್ಲಿ ರಾಜ್ಯ ಮಟ್ಟದ ಶೈಕ್ಷಣಿಕ ವಿಚಾರ ಸಂಕಿರಣ

ಬ್ರಹ್ಮಾವರ : ತಂತ್ರಜ್ಞಾನ ಮತ್ತು ಸಾಮಾಜಿಕ ಮಾಧ್ಯಮಗಳಲ್ಲಾದ ಹಠಾತ್ ಕ್ರಾಂತಿಯಿಂದಾಗಿ, ಈ ಶತಮಾನ ತನ್ನ ಸಾಮಾಜಿಕ ರಚನೆಯಲ್ಲೇ ಅಪಾರ ಬದಲಾವಣೆಗಳನ್ನು ಕಾಣುತ್ತಿದೆ. ಇದು ನಮ್ಮ ಶೈಕ್ಷಣಿಕ ಕ್ಷೇತ್ರದಲ್ಲಿಯೂ ಪ್ರತಿಫಲಿಸಿಸುತ್ತಿದ್ದು ಕಲಿಕೆಯ ಮಾನವೀಯ ಅಂಶಗಳಿಗೇ ಧಕ್ಕೆ ಒದಗಬಹುದಾದ ಆತಂಕಕ್ಕೂ ಈ ಅಂಶ ಕಾರಣವಾಗಿದೆ. ಇದಲ್ಲದೇ ಹಿಂದೆಂದಿಗಿಂತಲೂ ಅಪಾಯಕಾರೀ ಮಾದರಿಯಲ್ಲಿ ಶಿಕ್ಷಣವು ಆರ್ಥಿಕತೆಯೊಂದಿಗೆ ತಳುಕು ಹಾಕಿಕೊಳ್ಳುವ ವಿದ್ಯಮಾನಕ್ಕೂ ನಾವು ಸಾಕ್ಷಿಯಾಗಿದ್ದೇವೆ. ಈ ಹಿನ್ನೆಲೆಯಲ್ಲಿ ಮಾನವತೆಯ ಔನ್ನತ್ಯಕ್ಕಾಗಿ ಶಿಕ್ಷಣವನ್ನು ಮರು ನಿರೂಪಿಸುವುದು ಈ ಕಾಲದ ಅಗತ್ಯವಾಗಿದ್ದು ಈ ಕುರಿತು ಚಿಂತನೆ ನಡೆಸಲು ಉಡುಪಿ ಮತ್ತು ದಕ್ಷಿಣ ಕನ್ನಡದ ಐ.ಸಿ.ಎಸ್.ಇ. ಹಾಗೂ ಸಿ.ಬಿ.ಎಸ್.ಇ. ಶಾಲೆಗಳ ಒಕ್ಕೂಟ (AICS) ಮತ್ತು ಎಸ್.ಎಮ್.ಎಸ್.ಆಂಗ್ಲ ಮಾಧ್ಯಮ ಶಾಲೆ ಶಾಲೆ( ಸಿ.ಬಿ.ಎಸ್.ಇ) ಬ್ರಹ್ಮಾವರ ಇವರು ಜಂಟಿಯಾಗಿ ರಾಜ್ಯ ಮಟ್ಟದ ಶೈಕ್ಷಣಿಕ ವಿಚಾರ ಸಂಕಿರಣವನ್ನು, ನವೆಂಬರ್ 11, ಸೋಮವಾರ ಬ್ರಹ್ಮಾವರದ SMS ಕಮ್ಯುನಿಟಿ ಹಾಲ್ ನಲ್ಲಿ ಆಯೋಜಿಸಿದ್ದಾರೆ. ಮಾನವತೆಯ ಔನ್ನತ್ಯಕ್ಕಾಗಿ ಶಿಕ್ಷಣ” ಎಂಬುದು ಈ ಸಂಕಿರಣದ ಧೈಯ ವಾಕ್ಯ.

ವಿಚಾರ ಸಂಕಿರಣವನ್ನು ಬ್ರಹ್ಮಾವರದ ಓ.ಎಸ್.ಸಿ. ಎಜುಕೇಶನಲ್ ಸೊಸೈಟಿ( ರಿ)ಯ ಅಧ್ಯಕ್ಷರಾದ ರೆ.ಫಾ. ಎಮ್.ಸಿ.ಮಥಾಯ್ ಇವರು ನೆರವೇರಿಸಲಿದ್ದು ಅಜೀಮ್ ಪ್ರೇಮ್ಮಿ ಫೌಂಡೇಶನ್ ನ ಪ್ರೊ. ಗಿರಿಧರ್ ಅವರು ದಿಕ್ಕೂಚಿ ಭಾಷಣ ಮಾಡಲಿರುವರು. ಹಾಗೆಯೇ ಸಿಂಬಯೋಸಿಸ್ ಪೂನಾ ಇಲ್ಲಿಯ ರಿಸರ್ಚ್ ಪ್ರೊಫೆಸರ್, Dr.ನೀತಾ ಇನಾಮ್ಮಾರ್, ಮಂಗಳೂರು ವಿಶ್ವ ವಿದ್ಯಾಲಯದ ನಿವೃತ್ತ ಪ್ರೊಫೆಸರ್ Dr.ರಾಜಾರಾಮ್ ತೋಳ್ಳಾಡಿ, ಶಿವಮೊಗ್ಗದ ಮನಶ್ಯಾಸ್ತ್ರಜ್ಞರಾದ Dr.ಅರ್ಚನಾ ಭಟ್, ಉಡುಪಿ ಡಯಟ್ ನ ಪ್ರಾಚಾರ್ಯ ಅಶೋಕ್ ಕಾಮತ್, ಮಾಹೆಯ ಶುಭಂಕರ್ ಪೌಲ್. ಶಿಕ್ಷಣ ತಜ್ಞರಾದ ಮೆರಿಡಾ ಡಿ ಲಿಡಾ, ಪ್ರೊ. ಮಾತ್ಮ ಸಿ.ನಯನನ್ ಮತ್ತಿತರರ ಉಪನ್ಯಾಸಗಳು ಹಾಗೂ ಚರ್ಚೆಗಳು ಇರುತ್ತವೆ.

ಸಮಾರೋಪ ಭಾಷಣವನ್ನು ಕಂಪ್ಯೂಟರ್ ನಲ್ಲಿ ಕನ್ನಡ ಕೀಲಿಮಣೆಯ ಕೊಡುಗೆ ನೀಡಿದ ಪ್ರೊ.ಕೆ.ಪಿ.ರಾವ್ ಇವರು ನೀಡಲಿದ್ದಾರೆ.

ಈ ಸಂಕಿರಣದಲ್ಲಿ ರಾಜ್ಯದ ವಿವಿಧ ಭಾಗದ ಸುಮಾರು ಮುನ್ನೂರು ಶಿಕ್ಷಕರು, ಪ್ರಾಂಶುಪಾಲರು, ಶಿಕ್ಷಣ ತಜ್ಞರು ಭಾಗವಹಿಸಲಿದ್ದಾರೆ. ಬೆಳಿಗ್ಗೆ 9 ಗಂಟೆಯಿಂದ ಸಂಜೆ ಐದು ಗಂಟೆಯವರೆಗೆ ನಡೆಯುವ ಈ ಬೌದ್ಧಿಕ ಚಿಂತನ ಮಂಥನದ ವರದಿಯನ್ನೂ ತೆಗೆದುಕೊಂಡ ತೀರ್ಮಾನಗಳನ್ನೂ ಮುಂದಿನ ಸೂಕ್ತ ನಡೆಗಾಗಿ ನಮ್ಮ ದೇಶದ ಶಿಕ್ಷಣ ಮಂತ್ರಾಲಯಕ್ಕೆ ಸಲ್ಲಿಸುವ ಯೋಜನೆಯೂ ಇದೆ.

ಈ ವಿಚಾರ ಸಂಕಿರಣದ ರೂವಾರಿಯಾದ AICS ಸುಮಾರು 84 ಐಸಿಎಸ್‌ಇ ಮತ್ತು ಸಿಬಿಎಸ್‌ಇ ಶಾಲೆಗಳ ಒಕ್ಕೂಟವಾಗಿದ್ದು ತನ್ನ ಇಪ್ಪತ್ತನೆಯ ವಸಂತದ ಸಂಭ್ರಮದಲ್ಲಿದೆ. ಪ್ರತಿ ವರ್ಷವೂ ವಿದ್ಯಾರ್ಥಿಗಳು, ಶಿಕ್ಷಕರು ಮತ್ತು ಪ್ರಾಂಶುಪಾಲರಿಗೆ ವಿವಿಧ ಶೈಕ್ಷಣಿಕ ಚಟುವಟಿಕೆಗಳನ್ನು ಆಯೋಜಿಸುತ್ತಿದ್ದು, ಸದ್ಯ ನಡೆಸುತ್ತಿರುವ ವಾರ್ಷಿಕ ವಿಚಾರ ಸಂಕಿರಣ ಅದರ ವಿಷೇಷತೆಯಲ್ಲೊಂದು.

ಹಾಗೆಯೇ SMS ಆಂಗ್ಲ ಮಾಧ್ಯಮ ಶಾಲೆ ( CBSE) ತನ್ನ ಶೈಕ್ಷಣಿಕ ಯಾತ್ರೆಯಲ್ಲಿ 30 ವರ್ಷಗಳನ್ನು ಪೂರೈಸಿದ್ದು ಈ ಸಂದರ್ಭದಲ್ಲಿ ಈ ವಿಚಾರ ಸಂಕಿರಣವನ್ನು ಬಹಳ ಅರ್ಥಪೂರ್ಣವಾಗಿ ಸಂಘಟಿಸುವ ಜವಾಬ್ದಾರಿಯನ್ನು ಹೊತ್ತಿದೆ.