'ನಂಗೆ ನನ್ನಮ್ಮ ಅಂದ್ರೆ ತುಂಬಾ ಇಷ್ಟ...ನನ್ನ ತುಂಬಾ ಮುದ್ದು ಮಾಡ್ತಾರೆ, ನಾ ಏನೇ ಕೇಳಿದ್ರೂ ಕೊಡಿಸ್ತಾರೆ' ಅನ್ನೋ ಮಗನಿಗೆ ಅಮ್ಮ ತನಗೆ ಬೇಕಾದ್ದು ಕೊಡಿಸುವ ದುಡ್ಡು ಅಪ್ಪನ ಬೆವರ ಹನಿ ಗಳದ್ದು ಎಂದು ತಿಳಿದಿರುವುದಿಲ್ಲ; 'ಅಯ್ಯೋ ನಮ್ಮಣ್ಣನಾ?? ಸಿಡುಕುಮೂತಿ, ಯಾವಾಗ ನೋಡಿ ದ್ರೂ ಗುರ್ ಅಂತಿರ್ತಾನೆ, ಅಲ್ಲಿ ಹೋಗ್ಬೇಡ, ಅವರತ್ರ ಮಾತಾಡ್ಬೇಡ, ಹಾಗೆ ಡ್ರೆಸ್ ಮಾಡಿ ಕೊಳ್ಬೇಡ ಅಂತ ವಟಗುಟ್ತಾನೆ ಇರ್ತಾನೆ' ಅನ್ನೋ ತಂಗಿಗೆ ಅಣ್ಣನ ಕೋಪದ ಹಿಂದಿರುವ ಕಾಳಜಿ ಅರ್ಥವಾ ಗೋದಿಲ್ಲ.
ಹೆರಿಗೆ ಕೋಣೆಯಲ್ಲಿ ಪತ್ನಿಗೆ ಹೆರಿಗೆಯಾಗುವಾಗ ಆಕೆಗಿಂತ ಹೆಚ್ಚಿನ ಮಾನಸಿಕ ವೇದನೆ ಪತಿ ಅನುಭವಿಸಿದ್ದು ಇತರರಿಗೆ ಅರ್ಥವಾಗದೆಯೇ ಉಳಿದುಬಿಡುತ್ತದೆ. ಜೀವನವಿಡೀ ಕಷ್ಟಪಟ್ಟು ದುಡಿದ ಹಣದಲ್ಲಿ ಮಗಳನ್ನು ಅದ್ದೂರಿಯಾಗಿ ಮದುವೆ ಮಾಡಿಕೊಟ್ಟು ತವರಿನಿಂದ ಕಳುಹಿಸುವಾಗ ಉಮ್ಮಳಿಸಿ ಬರುವ ದುಗುಡವನ್ನು ಅಪ್ಪ ಎದೆಯಲ್ಲಿಯೇ ಅಡಗಿಸಿಕೊಂಡಿದ್ದು ಲೋಕದ ಕಣ್ಣಿಗೆ ಕಾಣುವುದೇ ಇಲ್ಲ. ಜೀವನದ ಎಲ್ಲಾ ಸ್ತರಗಳಲ್ಲೂ ಇನ್ನೊಬ್ಬರಿಗಾಗಿಯೇ ತನ್ನ ಸಂತಸವನ್ನು ತ್ಯಾಗ ಮಾಡುತ್ತಾ ಬರುವ ಪುರುಷರ ಜೀವನ ನಾವೆಣಿದಷ್ಟು ಖಂಡಿತ ಸುಲಭದ್ದಲ್ಲ.
ಓರ್ವ ತಂದೆಯಾಗಿ, ಸಹೋದರನಾಗಿ, ಮಾವನಾಗಿ, ಭಾವನಾಗಿ, ಮಗನಾಗಿ ಎಲ್ಲಾ ಮಜಲುಗಳಲ್ಲೂ ಪುರುಷ ತನ್ನವರಿಗಾಗಿ ತನ್ನ ಅಸೆ-ಆಕಾಂಕ್ಷೆಗಳನ್ನು ಕೊಂದುಕೊಳ್ಳುತ್ತಲೇ ಬರುತ್ತಾನೆ. ಹುಟ್ಟಿನಿಂದ ಜೀವನದ ಅಂತ್ಯದವರೆಗೂ ಆತ ತೆರೆಮರೆಯ ನಾಯಕನಾಗಿಯೇ ಉಳಿದುಬಿಡುತ್ತಾನೆ. ಹಬ್ಬದ ಸಂದರ್ಭಗಳಲ್ಲಿ ಮಡದಿ-ಮಕ್ಕಳಿಗೆ ಎರಡೆರಡು ಜೊತೆ ಬಟ್ಟೆ ಕೊಡಿಸುವ ಮನೆಯ ಯಜಮಾನ ತನ್ನ ಬಣ್ಣ ಮಾಸಿದ ಪ್ಯಾಂಟಿನ ಬಗ್ಗೆ ಚಿಂತೆಯೇ ಮಾಡುವುದಿಲ್ಲ.
ಪುಮಾ, ಕ್ರಾಕ್ಸ್ ಮುಂತಾದ ಬ್ರ್ಯಾಂಡೆಡ್ ಚಪ್ಪಲಿಗಳನ್ನು ಮಕ್ಕಳಿಗೆ ತರುವ ಭರದಲ್ಲಿ ತನ್ನ ಚಪ್ಪಲಿಯ ಬಾರ್ ಮುರಿದಿದ್ದನ್ನು ನೋಡಿಯೂ ಕುರುಡಾಗುತ್ತಾನೆ. ಇಷ್ಟೆಲ್ಲಾ ತ್ಯಾಗಗಳ ನಡುವೆಯೂ ಪುರುಷ ಆತನ ಮನೆಯವರಿಗೆ ಮತ್ತು ಸಮಾಜಕ್ಕೆ ಕಟ್ಟುನಿಟ್ಟಾದ ಕಾಲೇಜು ಪ್ರಾಂಶುಪಾಲನಂತೆಯೇ ಕಾಣು ವುದು ಸೋಜಿಗವೇ ಸರಿ.
ಸ್ತ್ರೀ-ಪುರುಷ ಎಂಬ ಎರಡು ಅಂಶಗಳು ಸಮಾಜದ ಎರಡು ಕಣ್ಣುಗಳಿದ್ದಂತೆ. ಯಾವುದೇ ಒಂದು ಕಣ್ಣು ಇಲ್ಲವಾದರೂ ಸಮಾಜ ಅಧೋಗತಿಗೆ ಸಾಗುವುದು ಖಚಿತ. ಸಮಾಜದಲ್ಲಿ ಮಹಿಳೆ ಹಾಗೂ ಪುರುಷ ಇಬ್ಬರದೂ ಒಂದೊಂದು ಪಾತ್ರ. ಅವರಿದ್ದಂತೆ ಇವರಿರಲಾಗುವುದಿಲ್ಲ. ಮುಖ್ಯವಾಗಿ ಓರ್ವ ಪುರುಷ ಮಹಿಳೆಯಷ್ಟು ನಾಜೂಕಾಗಿ, ವಿನಯವಂತನಾಗಿ ಇರಲು ಸಾಧ್ಯವಿಲ್ಲ. ಆಕಸ್ಮಾತ್ ಸಾಧ್ಯವಾದರೂ ಅದು ಅನೇಕ ಸಮಸ್ಯೆಗಳಿಗೆ ದಾರಿ ತೆರೆದಿಡುತ್ತದೆ. ಮಕ್ಕಳು ತಪ್ಪು ಮಾಡಿದಾಗ ಅಮ್ಮ ಮುದ್ದಿಸಿದರೂ, ಅಪ್ಪ ಗದರದಿದ್ದರೆ ಮಕ್ಕಳು ಹಾದಿ ತಪ್ಪುವ ಸಂಭವವೇ ಹೆಚ್ಚು.
ಸಹೋದರಿ ಸಮಾಜದ ಕೆಟ್ಟ ಕಣ್ಣುಗಳಿಗೆ ಬೀಳದಂತೆ ಕಾಪಾಡಿಕೊಳ್ಳುವುದು ಸಹೋದರನ ಜವಾಬ್ದಾರಿಯೇ ಆಗಿರುತ್ತದೆ. ಹಾಗಾಗಿ ಪುರುಷ ಸದಾ ಗಂಭೀರವದನನಾಗಿ, ಎಲ್ಲವನ್ನೂ ಸೂಕ್ಷ್ಮವಾಗಿ ಅವಲೋಕಿಸುವನಾಗಿ ಉಳಿದರೇನೇ ಒಳಿತು. ತನ್ನ ಕುಟುಂಬವನ್ನು ಸಮಾಜದ ನೀಚ ಕಣ್ಣುಗಳಿಂದ ರಕ್ಷಿಸಿಕೊಳ್ಳುವುದು ಪುರುಷನಿಗಲ್ಲದೇ ಒಬ್ಬ ಮಹಿಳೆಗೆ ಅಷ್ಟು ಯಶಸ್ವಿಯಾಗಿ ಸಾಧ್ಯವಿಲ್ಲ ಎಂಬು ದನ್ನು ಕೆಲವರ ಜೀವನದಲ್ಲಿ ನಾವೇ ನೋಡಬಹುದು.
ಮಕ್ಕಳಿಗೆ ಮೊದಲ ಹೀರೋ, ರೋಲ್ ಮಾಡೆಲ್ ಎಲ್ಲವೂ ಅಪ್ಪನೇ ಆಗಿರುತ್ತಾನೆ ಹೊರತು ಅಮ್ಮನಾಗಿರುವುದು ತುಂಬಾ ವಿರಳ. ಆದರೂ ಅನಾದಿಕಾಲದಿಂದಲೂ ಪುರುಷರು ವಿಲನ್ಗಳಾಗಿಯೇ ಬಿಂಬಿತವಾಗುತ್ತಿರುವುದು ಮಾತ್ರ ಒಂದು ರೀತಿಯ ವಿಪರ್ಯಾಸ.
ಇಂದು ನವೆಂಬರ್ 19. ಈ ದಿನವನ್ನು *'ಅಂತರಾಷ್ಟ್ರೀಯ ಪುರುಷರ ದಿನ'* ವನ್ನಾಗಿ ಆಚರಿಸ ಲಾಗುತ್ತದೆ. ಪುರುಷರು ಮಹಿಳೆಯರಿಗಿಂತ ದೈಹಿಕವಾಗಿ, ಮಾನಸಿಕವಾಗಿ ಬಲಿಷ್ಠರೇನೋ ಹೌದು. ಅಂದ ಮಾತ್ರಕ್ಕೆ ಅವರಿಗೆ ಮಾನಸಿಕವಾಗಿ ನೋವೇ ಆಗುವುದಿಲ್ಲ ಎಂದಲ್ಲ. ಅವರಿಗೂ ಮನಸ್ಸಿದೆ, ಭಾವನೆಗಳಿವೆ, ಮಾನಸಿಕ ತೊಳಲಾಟಗಳಿವೆ. ಹಾಗಾಗಿ ಪುರುಷರ ಮಾನಸಿಕ ಆರೋಗ್ಯದ ಬಗ್ಗೆ ಚರ್ಚಿಸುವ ಮತ್ತು ಅವರ ಸಾಮಾಜಿಕ ಕೊಡುಗೆಗಳನ್ನು ಜಗತ್ತಿಗೆ ಸಾರಿ ಹೇಳಿ ಗೌರವಿಸುವ ಸಲು ವಾಗಿ ಈ ದಿನವನ್ನು ಜಗತ್ತಿನ ಹಲವು ದೇಶಗಳು ಆಚರಿಸುತ್ತಿವೆ.
ಸಮಾಜದಲ್ಲಿ ಪುರುಷರ ಸಮಸ್ಯೆಗಳು, ಅವರ ಮೇಲಾಗುತ್ತಿರುವ ದೌರ್ಜನ್ಯ, ಲಿಂಗಸಮಾನತೆ ಇವೆಲ್ಲವೂ ವಿಶ್ವ ಪುರುಷರ ದಿನದ ಮುಖ್ಯ ವಿಷಯ ವಸ್ತುಗಳು. 1999ರಲ್ಲಿ ಮೊದಲ ಬಾರಿಗೆ ವೆಸ್ಟ್ ಇಂಡೀಸ್ನಲ್ಲಿ ಆರಂಭವಾದ ಈ ದಿನಾಚರಣೆಯನ್ನು ಇಂದು ಭಾರತವೂ ಸೇರಿದಂತೆ ವಿಶ್ವದ ಬಹುತೇಕ ರಾಷ್ಟ್ರಗಳು ಸ್ವೀಕರಿಸಿರುವುದು ಸ್ವಾಗತಾರ್ಹ.
ಪ್ರಸ್ತುತ ಜಾಗತಿಕ ಮಟ್ಟದಲ್ಲಿ ಮಹಿಳಾ ಸಬಲೀಕರಣದ ಬಗ್ಗೆ ದೊಡ್ಡ ಮಟ್ಟದಲ್ಲಿ ಜಾಗೃತಿ ಮೂಡುತ್ತಿ ರುವುದು ಬಹಳ ಪ್ರಶಂಸನೀಯ. ಅಂತೆಯೇ ಪುರುಷ ಮತ್ತು ಆತನ ಸಾಮುದಾಯಿಕ ಕೊಡುಗೆಗಳು, ಆರೋಗ್ಯ ಮುಂತಾದವುಗಳ ಬಗ್ಗೆಯೂ ಜಾಗೃತಿ ಮೂಡತಕ್ಕದ್ದು ಅಷ್ಟೇ ಅನಿವಾರ್ಯ. ಏಕೆಂದರೆ ಸಮಾಜದ ಏಳಿಗೆಯಲ್ಲಿ ಅವರಿಬ್ಬರ ಪಾಲೂ ಸಮಾನ.
*ಪುರುಷರಿಗೂ ಗೌರವದ ಜೊತೆ ಪ್ರೀತಿ ಸಿಗಲಿ*: ಈಗಲೂ ಭಾರತೀಯ ಸಮಾಜದ ಅದೆಷ್ಟೋ ಮನೆಗಳಲ್ಲಿ ಪುರುಷ ಅಥವ ಮನೆಯ ಯಜಮಾನ ಕೇವಲ ಹಣಗಳಿಕೆಗೆ ಮಾತ್ರ ಸೀಮಿತ. ಮಕ್ಕಳ ಶಿಕ್ಷಣ, ಮಡದಿಯ ಮುಗಿಯದ ಆಕಾಂಕ್ಷೆಗಳು, ಮಗಳ ಅದ್ದೂರಿ ಮದುವೆ, ವೃದ್ಧ ತಂದೆ-ತಾಯಿಯರ ಆರೋಗ್ಯದ ಖರ್ಚು ಇಷ್ಟರಲ್ಲೇ ಹಲವು ಪುರುಷರ ಜೀವನ ಮುಗಿದು ಹೋಗಿರುತ್ತದೆ. ಶಕ್ತಿ ಮೀರಿ ದುಡಿಯುವ ಭರದಲ್ಲಿ ಕುಟುಂಬದ ಪ್ರೀತಿಯಿಂದ ಆತ ವಂಚಿತನಾಗುವುದನ್ನು ತಡೆಯೋಣ.
*ಮಾನಸಿಕ ಸ್ವಾಸ್ಥ್ಯ ಅವರಿಗೂ ಮುಖ್ಯ*: ಮಹಿಳೆಯರ ಮಾನಸಿಕ ಆರೋಗ್ಯದ ಬಗ್ಗೆ ಎಲ್ಲೆಲ್ಲೂ ಕೇಳಿಬರುವ ಕೂಗು ಪುರುಷರ ವಿಷಯಗಳಲ್ಲಿಲ್ಲ ಎಂಬುದು ಯೋಚನಾರ್ಹ. ಮನುಷ್ಯ ಎಂದ ಮೇಲೆ ಮನಸ್ಸು ಎಲ್ಲರಿಗೂ ಒಂದೇ. ಎಲ್ಲೋ ಯಾವುದೋ ಪುರುಷ ಮಾಡುವ ಅಪರಾಧಗಳಿಗೆ, ಘೋರ ಕೃತ್ಯಗಳಿಗೆ ಪುರುಷ ಸಮುದಾಯವನ್ನೇ ಕೆಟ್ಟದಾಗಿ ನೋಡುವ ಛಾಳಿ ಮೊದಲು ನಿಲ್ಲಬೇಕಿದೆ. ಮಹಿಳೆ ಗಿಂತ ಹೆಚ್ಚು ಕೆಲಸ ಮಾಡುವವನು, ಹೆಚ್ಚು ಒತ್ತಡದಲ್ಲಿರುವವನು ಪುರುಷನೇ. ಹಾಗಾಗಿ ಅವರ ಮಾನಸಿಕ ಆರೋಗ್ಯದ ಬಗ್ಗೆ ಮನೆಯ ಮಹಿಳೆಯರು ನಿಗಾ ಇಡುವುದು ಒಳಿತು.
*ದುಡಿಮೆಯ ಜೊತೆಗೆ ವ್ಯಕ್ತಿತ್ವಕ್ಕೂ ಗೌರವ ಸಿಗಲಿ*: ಸಮಾಜದಲ್ಲಿ ಪ್ರತಿಯೊಬ್ಬರ ಪ್ರತಿಭೆ, ವೃತ್ತಿ ಭಿನ್ನ-ವಿಭಿನ್ನ. ಓರ್ವನಿಗೆ ಅತೀ ಹೆಚ್ಚಿನ ಸಂಬಳ ಸಿಗಬಹುದು, ಇನ್ನೋರ್ವನಿಗೆ ಅತ್ಯಲ್ಪ ಸಿಗಬಹುದು. ಸಂಬಳದ ಆಧಾರದಲ್ಲಿ ಅವರನ್ನು ಅಳೆಯುವುದು, ಬೇರೊಬ್ಬರೊಂದಿಗೆ ಹೋಲಿಸಿ ಅವಮಾನಿ ಸುವುದು ಕೊನೆಗಾಣಬೇಕಾಗಿದೆ. ಹೆಚ್ಚೋ- ಮಿತವೋ ದುಡಿಯಿತ್ತಿದ್ದಾರಲ್ಲ ಎಂಬ ನಿರಾಳ ಭಾವನೆ ಮಹಿಳೆಯರಲ್ಲಿ ಮೂಡಬೇಕು. ವ್ಯಕ್ತಿಯ ದುಡಿಮೆಗಿಂತ ವ್ಯಕ್ತಿತ್ವ ಮೇಲು ಎಂಬ ನಮ್ಮ ಭಾವನೆ ಪುರುಷರು ಇನ್ನಷ್ಟು ಸಬಲರಾಗಲು ಸಹಾಯ ಮಾಡುತ್ತದೆ.
ಪುರುಷ ಎಂಬ ಪದಕ್ಕೆ ಮೂರೇ ಅಕ್ಷರವಿದ್ದರೂ ಆತನ ಜವಾಬ್ದಾರಿಗಳು ಮುನ್ನೂರಕ್ಕೂ ಮಿಗಿಲು. ಸಂಸಾರ ಎಂಬ ಎಡರು ತೊಡರಿನ ನೌಕೆಯನ್ನು ಸಮಸ್ಯೆಗಳೆಂಬ ಕಡಲಿನಲ್ಲಿ ಶಾಂತ ರೀತಿಯಲ್ಲಿ ಸಾಗಿಸಿ ತೀರ ಸೇರಿಸುವ ನಾವಿಕರು ಪುರುಷರು. ಸದಾ ತನ್ನವರ ಬಗ್ಗೆ ಯೋಚಿಸಿ ತನ್ನತನವನ್ನು ಬದಿಗೊತ್ತಿಕೊಳ್ಳುವ, ಮನೆಯವರೆಲ್ಲರ ಧೈರ್ಯಕ್ಕೆ ದಾರಿದೀಪವಾಗಿರುವ, ನೋವಿದ್ದರೂ ಅಡಗಿಸಿ ನಗುವಿನಿಂದಲೇ ಜೀವನ ಕಳೆಯುವ ಜಗತ್ತಿನ ಪುರುಷೋತ್ತಮರೆಲ್ಲರಿಗೂ ಪುರುಷ ದಿನದ ಶುಭಾಭಿಲಾಷೆಗಳು. ಸಮಾಜಕ್ಕೂ, ಸಮುದಾಯಕ್ಕೂ, ಸಂಸಾರಕ್ಕೂ ಸದಾ ಹೊನಲಾಗಿರುವ ಪುರುಷರತ್ನರ ನೋವು ಮರೆಯಾಗಿ ನಗು ರಾರಾಜಿಸಲಿ, ಆ ನಗುವಿನಿಂದ ಜಗತ್ತು ಮತ್ತಷ್ಟು ಅಂದ ಗಾಣಲಿ. ~ಸುಜಾತ.ಎಸ್.ಅಮೀನ್