ಆಲ್ ಅಮೇರಿಕಾ ತುಳು ಅಸೋಸಿಯೇಶನ್ (AATA) ತನ್ನ ಪ್ರಪ್ರಥಮ ಸಮ್ಮಿಲನ "AATA ಸಿರಿ ಪರ್ಬ 2025" ಜುಲೈ 4 ಮತ್ತು 5 ನೇ 2025 ರಂದು ಅಮೇರಿಕಾ ಸಂಯುಕ್ತ ಸಂಸ್ಥಾನದ ಉತ್ತರ ಕರೋಲಿನಾ ರಾಜ್ಯದ ರ‍್ಯಾಲಿಯಲ್ಲಿ ನಡೆಯಲಿರುವುದು.
ಪಂಚ ದ್ರಾವಿಡ ಭಾಷೆಗಳಲ್ಲಿ ಒಂದಾಗಿರುವ, ಕರಾವಳಿ ಭಾಗದ ಜನರ ಮಾತೃಭಾಷೆಯಾಗಿರುವ ತುಳು ಭಾಷೆಯನ್ನು ಉಳಿಸಿ ಬೆಳೆಸುವುದರ ಜೊತೆಗೆ ನಮ್ಮ ಮುಂದಿನ ಪೀಳಿಗೆಗೆ ಪಸರಿಸುವುದು, ಭಾರತದ ಸಂವಿಧಾನದ 8ನೇ ಪರಿಚ್ಛೇದಕ್ಕೆ ಸೇರಿಸುವ ಹೋರಾಟಕ್ಕೆ ಸಹಕರಿಸುವುದು ಮುಂತಾದ ಹಲವಾರು ಉದ್ದೇಶಗಳನ್ನು ಮನಸ್ಸಿನಲ್ಲಿಟ್ಟು 2021ರ ಬಿಸು ಹಬ್ಬದಂದು ಆರಂಭವಾದ ಆಲ್ ಅಮೇರಿಕ ತುಳು ಅಸೋಸಿಯೇಷನ್ (AATA) ನಾಲ್ಕು ವರ್ಷಗಳಲ್ಲಿ ಹಲವಾರು ಕಾರ್ಯಕ್ರಮವನ್ನು ಆಯೋಜಿಸಿದ್ದು, ಪಂಚಮ ವರ್ಷದ ಆರಂಭದಲ್ಲಿ ತನ್ನ ಪ್ರಪ್ರಥಮ ಸಮ್ಮಿಲನ "AATA ಸಿರಿ ಪರ್ಬ 2025” ವನ್ನು ಹಮ್ಮಿ ಕೊಂಡಿದೆ.
ಈ ಸಿರಿ ಪರ್ಬದ ಅಂಗವಾಗಿ ತುಳು ಭಾಷೆ, ಸಾಹಿತ್ಯ ಮತ್ತು ಲಿಪಿಯನ್ನು ಉಳಿಸಲು ಹಾಗೂ ಉತ್ತೇಜಿ ಸಲು "AATA ಸಿರಿಮುಡಿ ಪ್ರಶಸ್ತಿ" ಯನ್ನು ಪ್ರಪ್ರಥಮ ಬಾರಿಗೆ ನೀಡಲಾಗುವುದು ಎಂದು "AATA ಸಿರಿ ಪರ್ಬ ೨೦೨೫" ಸಮಿತಿ ಘೋಷಿಸಿದೆ. ಪ್ರತಿ ನಾಲ್ಕು ವರ್ಷಗಳಿಗೊಮ್ಮೆ ಕೊಡಮಾಡುವ ಈ ಪ್ರತಿಷ್ಠಿತ ಪ್ರಶಸ್ತಿಯನ್ನು ಈ ಬಾರಿ ನಡೆಯುವ "AATA ಸಿರಿ ಪರ್ಬ" ಸಂದರ್ಭದಲ್ಲಿ ನೀಡಲಾಗುವುದು ಎಂದು AATA(ಆಟ)ದ ಅಧ್ಯಕ್ಷರಾದ ಫ್ಲೋರಿಡಾದ ಶ್ರೀಮತಿ ಶ್ರೀವಲ್ಲಿ ರೈ ಮಾರ್ಟೆಲ್, ಈ ಬಾರಿಯ ಸಿರಿ ಪರ್ಬದ ಸಂಚಾಲಕರಾದ ನಾರ್ತ್ ಕ್ಯಾರೊಲಿನಾದ ಶ್ರೀಮತಿ ರಂಜನಿ ಅಸೈಗೋಳಿ, ಪ್ರಶಸ್ತಿಯ ಆಯ್ಕೆ ಸಮಿತಿಯ ಮುಖ್ಯಸ್ಥರಾದ ಮಿಚಿಗನ್ ನ ಶ್ರೀ ಪ್ರಶಾಂತ್ ಕುಮಾರ್ ಮಟ್ಟು ಅವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿ ರುವರು. ‘ಆಟ’ದ ಸ್ಥಾಪಕ ಅಧ್ಯಕ್ಷರಾದ ಶ್ರೀ ಭಾಸ್ಕರ್ ಶೇರಿಗಾರ್ ಪ್ರಾಯೋಜಿತ ಈ ಪ್ರಶಸ್ತಿಯು ₹75,000 ನಗದು ಬಹುಮಾನ, ಸ್ಮರಣ ಫಲಕ ಮತ್ತು ಪ್ರಮಾಣಪತ್ರಗಳನ್ನು ಒಳಗೊಂಡಿದೆ.
ತುಳು ಲಿಪಿಯನ್ನು ಪ್ರೋತ್ಸಾಹಿಸುವ ಸಲುವಾಗಿ ತುಳು ಲಿಪಿಯಲ್ಲಿ ಬರೆದ ಬರಹ ಮತ್ತು ತುಳು ಸಾಹಿತ್ಯ ವನ್ನು ಪ್ರೋತ್ಸಾಹಿಸುವ ಸಲುವಾಗಿ ಕನ್ನಡ ಲಿಪಿಯಲ್ಲಿ ಬರೆದ ತುಳು ಭಾಷೆಯ ಬರಹ, ಈ ಎರಡು ವಿಭಾಗಗಳಲ್ಲಿ ಆಯ್ಕೆಯಾದ ಕೃತಿಗಳಿಗೆ ಆಟ ಸಿರಿಮುಡಿ ಪ್ರಶಸ್ತಿಯನ್ನು ನೀಡಲಾಗುವುದು. ಕಾದಂಬರಿ, ನಾಟಕ, ಕವನ, ಪ್ರಬಂಧ, ಭಾಷಣ, ಸಣ್ಣ ಕಥೆ, ಐತಿಹಾಸಿಕ ಕಥೆ, ತಾತ್ವಿಕ ಬರಹ ಮತ್ತು ಭಾಷಾಂತರ ಸೇರಿದಂತೆ ತುಳು ಭಾಷೆಯ ಯಾವುದೇ ಸಾಹಿತ್ಯ ಕೃತಿಗಳನ್ನು ಸಲ್ಲಿಸಬಹುದು. ಯಾವುದೇ ಅಪ್ರಕಟಿತ ಕೃತಿಗಳು ಅಥವಾ ‘ಆಟ’ ಸ್ಥಾಪನೆಯ ದಿನಾಂಕದ (ಬಿಸು ಪರ್ಬ 2021) ಏಪ್ರಿಲ್ 14,2021ರ ನಂತರ ಪ್ರಕಟವಾದ ಕೃತಿಗಳು ಮಾತ್ರ ಸಲ್ಲಿಕೆಗೆ ಅರ್ಹವಾಗಿರುತ್ತವೆ.
ಪ್ರಪಂಚದಾದ್ಯಂತ ಯಾರು ಬೇಕಾದರೂ ಈ ಸ್ಪರ್ಧೆಯಲ್ಲಿ ಭಾಗವಹಿಸಬಹುದು. ಪ್ರಶಸ್ತಿಗೆ ಕೃತಿಗಳನ್ನು ಸಲ್ಲಿಸಲು ಕೊನೆಯ ದಿನಾಂಕ ಏಪ್ರಿಲ್ 15, 2025 (ಬಿಸು ಪರ್ಬ 2025). ಪ್ರಶಸ್ತಿ ವಿಜೇತರ ಹೆಸರನ್ನು "AATA ಸಿರಿ ಪರ್ಬ 2025"ರ ಸಂದರ್ಭದಲ್ಲಿ ಘೋಷಿಸಲಾಗುವುದು.
ಕೆಳಗಿನ ಅಂತರ್ಜಾಲದ ಕೊಂಡಿಯ ಮುಖಾಂತರ ತಿಳಿದು ಕೊಳ್ಳಬಹುದು. https://www.aatana.org/sirimudi_award. ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಕೃತಿಗಳನ್ನು ಸಲ್ಲಿಸಿ ಸಹಕರಿಸಬೇಕಾಗಿ ವಿನಂತಿ ಮಾಡಲಾಗಿದೆ.ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಕೃತಿಗಳನ್ನು ಸಲ್ಲಿಸಿ ಸಹಕರಿಸಬೇಕಾಗಿ ವಿನಂತಿ ಮಾಡಲಾಗಿದೆ.
ವರದಿ : ಪ್ರಶಾಂತ್ ಕುಮಾರ್ ಮಟ್ಟು - AATA ನಿರ್ದೇಶಕರು, ಮಿಚಿಗನ್ USA