Header Ads Widget

ಗ್ಯಾಸ್ ವ್ಯಾನ್-ಬೈಕ್ ಡಿಕ್ಕಿ; ಸವಾರ ಸ್ಥಳದಲ್ಲೇ ಮೃತ್ಯು!

ಬೈಕ್ ಹಾಗು ಗ್ಯಾಸ್ ಸಾಗಾಟದ ವಾಹನ ಅಪಘಾತದಲ್ಲಿ ಬೈಕ್ ಸವಾರ ಸ್ಥಳದಲ್ಲೇ ಮೃತಪಟ್ಟ ಘಟನೆ ಡಿ. 9 ರಂದು ಸೋಮವಾರ ಸಂಜೆ ರಾಷ್ಟ್ರೀಯ ಹೆದ್ದಾರಿ 66ರ ಮುಳ್ಳಿಕಟ್ಟೆ ಸಮೀಪ ಆರಾಟೆ ಸೇತುವೆ ಬಳಿ ನಡೆದಿದೆ.

ಮೃತಪಟ್ಟ ಬೈಕ್ ಸವಾರ ಮಂಗಳೂರು ಮೂಲದ ಪ್ರಸ್ತುತ ಬೆಂಗಳೂರಿನಲ್ಲಿ ನೆಲೆಸಿರುವ ಕೆಬಿ ಯುವರಾಜ್ ಬಲ್ಲಾಳ ಎಂಬುವರ ಪುತ್ರ ರಂಜಿತ್ ಬಲ್ಲಾಳ್‌(59) ಎಂದು ಗುರುತಿಸಲಾಗಿದೆ.

ಬೈಕ್‌ ಸವಾರ ತನ್ನ ಬಿಎಂ ಡಬ್ಲ್ಯೂ ಬೈಕ್ ನಲ್ಲಿ ಗೋವಾ ಕಡೆಯಿಂದ ಮಂಗಳೂರು ಕಡೆಗೆ ಪ್ರಯಾಣಿಸುತ್ತಿದ್ದರು. ಆರಾಟೆ ಸೇತುವೆ ಬಳಿ ಗ್ಯಾಸ್ ಸಾಗಾಟದ ವಾಹನಕ್ಕೆ ಬೈಕ್ ಡಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರ ಸ್ಥಳದಲ್ಲೇ ಮೃತಪಟ್ಟಿರುವುದಾಗಿ ತಿಳಿದು ಬಂದಿದೆ.

ಮೃತದೇಹವನ್ನು ಗಂಗೊಳ್ಳಿ ಆಪದ್ಬಾಂಧವ ಇಬ್ರಾಹಿಂ ಗಂಗೊಳ್ಳಿ ತನ್ನ ಆಂಬುಲೆನ್ಸ್ ನಲ್ಲಿ ಕುಂದಾಪುರ ಶವಗಾರಕ್ಕೆ ಸಾಗಿಸಿದ್ದಾರೆ.

ಗಂಗೊಳ್ಳಿ ಠಾಣಾ ಪೊಲೀಸರು ಸ್ಥಳಕ್ಕಾಗಮಿಸಿ ಪರಿಶೀಲಿಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.