Header Ads Widget

BSWT ವರ್ಷದ ವ್ಯಕ್ತಿ ಪ್ರಶಸ್ತಿಗೆ ಉಡುಪಿ ಮೂಲದ ಶ್ರೀಮತಿ ರೂಪಾ ಬಲ್ಲಾಳ್ ಆಯ್ಕೆ

ಭಾರತ್ ಸೋಶಿಯಲ್ ವೆಲ್ಫೇರ್ ಟ್ರಸ್ಟ್ ಮಂಗಳೂರು (BSWT) ಇದರ 2024ನೆ ಸಾಲಿನ BSWT ವರ್ಷದ ವ್ಯಕ್ತಿ ಪ್ರಶಸ್ತಿಗೆ ಸಮಾಜ ಸೇವಕಿ ಅಲೆಮಾರಿ ಮತ್ತು ವಲಸೆ ಕಾರ್ಮಿಕರ ಮಕ್ಕಳ ತಾಯಿ ಎಂದೇ ಗುರುತಿಸಿಕೊಂಡಿರುವ ಶ್ರೀಮತಿ ರೂಪಾ ಬಲ್ಲಾಳ್ ಅವರನ್ನು ಆಯ್ಕೆ ಮಾಡಲಾಗಿದೆ. 

ಉಡುಪಿಯವರಾದ ಶ್ರೀಮತಿ ರೂಪಾ ಬಳ್ಳಾಲ್ ರವರು ಬಡವರು ಮತ್ತು ವಲಸೆ ಕಾರ್ಮಿಕರ ಮಕ್ಕಳಿಗಾಗಿ ತಮ್ಮ ಮನೆಯಲ್ಲಿ ವಿದ್ಯಾ ದೇಗುಲವನ್ನು ತೆರೆದು ಅವರ ಜೀವನದಲ್ಲಿ ಜ್ಞಾನದ ಜ್ಯೋತಿಯನ್ನು ಬೆಳಗಿಸಿ ಸಮಾಜದಲ್ಲಿ ಸತ್ಪ್ರಜೆಗಳಾಗಿ ಮುಂದುವರಿಯಲು ಅವಕಾಶ ನಿರ್ಮಾಣ ಮಾಡಿ ಕೊಟ್ಟ ವ್ಯಕ್ತಿತ್ವ. ಬಿಜಾಪುರ, ಬಾಗಲಕೋಟೆ, ಬಳ್ಳಾರಿ, ರಾಯಚೂರು, ದಾವಣಗೆರೆ, ಕೊಪ್ಪಳ ಮುಂತಾದ ಉತ್ತರ ಕರ್ನಾಟಕದಿಂದ ಕೂಲಿ ಕಾರ್ಮಿಕರಾಗಿ ವಲಸೆ ಬಂದು ಕೊಳಗೇರಿಯಲ್ಲಿ ಬದುಕುವ ಇವರ ಮಕ್ಕಳಿಗೆ ಕಳೆದ ಹದಿನೈದು ವರ್ಷಗಳಿಂದ ತಮ್ಮ ಮನೆಯಲ್ಲಿ ಉಚಿತ ಶಿಕ್ಷಣ ನೀಡುತ್ತಾ ಬಂದಿದ್ದಾರೆ. ಸರಿ ಸುಮಾರು ಐನೂರು ಕ್ಕಿಂತ ಹೆಚ್ಚು ಮಕ್ಕಳು ಇವರ ನೆರಳಲ್ಲಿ ಬೆಳೆದು ಕನಸು ಕಟ್ಟಿಕೊಂಡಿದ್ದಾರೆ. ಶಾಲೆಯ ಬಗ್ಗೆ ಆಲೋಚಿಸದ ಹಲವು ಮಕ್ಕಳು ಪದವಿ, ಸ್ನಾತಕೋತ್ತರ ಪದವಿ ಶಿಕ್ಷಣವನ್ನು ಪಡೆದು ಸ್ವಾಭಿಮಾನಿಗಳಾಗಿ ಉದ್ಯೋಗ ಪಡೆಯುವ ಹಂತಕ್ಕೆ ಬೆಳೆದಿದ್ದಾರೆ. ಬಾಲ್ಯ ವಿವಾಹದ ಉರುಳಿಗೆ ಸಿಲುಕಿದ, ಹೆತ್ತವರ ಕುಡಿತದ ಚಟದಿಂದ ನೊಂದ, ಸಾಲದಲ್ಲಿ ಸಿಲುಕಿ ಜೀತತನಕ್ಕೆ ದೂಡಲ್ಪಟ್ಟ ಮಕ್ಕಳಿಗೆ ತನ್ನ ಮನೆಯಲ್ಲಿ ಆಸರೆ ನೀಡಿ ಅವರಿಗೆ ಕಲಿಯಲು ಅವಕಾಶ ಮಾಡಿಕೊಟ್ಟಿದ್ದಾರೆ. ಇಂಗ್ಲಿಷ್, ಕನ್ನಡ, ಗಣಿತ, ವಿಜ್ಞಾನದ ಪಾಠದ ಜೊತೆಗೆ ಆಟ, ಸಂಗೀತ, ನೃತ್ಯ, ಭರತನಾಟ್ಯ, ಚಿತ್ರಕಲೆ, ಯೋಗವನ್ನು ಕಲಿಸುತ್ತಾರೆ. ಹೆಚ್ಚು ಬಾರಿ ರಕ್ತದಾನ ಮಾಡಿದ ಮಹಿಳೆ ಎಂಬ ಗೌರವಕ್ಕೂ ಪಾತ್ರರಾಗಿದ್ದಾರೆ.

ಬೆಂಗಳೂರು ವಿಶ್ವವಿದ್ಯಾಲಯದಿಂದ Bsc Home Science ಪದವಿದರರಾದ ಇವರು ಮಣಿಪಾಲ ವಿಶ್ವವಿದ್ಯಾಲಯದಿಂದ Msc in Yoga Therapy ಯಲ್ಲಿ ಸ್ನಾತಕೋತ್ತರ ಪದವಿಯಲ್ಲಿ ಪ್ರಥಮ ರ್ಯಾಂಕ್ ಗಳಿಸಿದ್ದಾರೆ. ಇವರ ಪತಿ ಶ್ರೀ.ಎನ್.ನಾಗರಾಜ್ ಬಲ್ಲಾಳ್, B.E. ರವರು ಉಡುಪಿಯ ವಿದ್ಯೋದಯ ಟ್ರಸ್ಟ್ ಇದರ ಅಧ್ಯಕ್ಷರಾಗಿ ಸೇವೆಯಲ್ಲಿದ್ದಾರೆ.

ಎಲೆಮರೆಯ ಕಾಯಿಯಂತೆ ಇಷ್ಟು ವರ್ಷಗಳ ಕಾಲ ಇವರು ಮಾಡಿದ ನಿಸ್ವಾರ್ಥ ಸೇವೆಯನ್ನು ಪರಿಗಣಿಸಿ ಭಾರತ್ ಸೋಷಿಯಲ್ ವೆಲ್ಫೇರ್ ಟ್ರಸ್ಟ್ 2024 ನೇ ಸಾಲಿನ BSWT ವರ್ಷದ ವ್ಯಕ್ತಿಯಾಗಿ ಆಯ್ಕೆ ಮಾಡಿದೆ. ಈ ಪ್ರಶಸ್ತಿಯೂ ಇಪ್ಪತ್ತೈದು ಸಾವಿರ ರೂ ನಗದು ಮತ್ತು ಸನ್ಮಾನ ಪತ್ರ, ಫಲಕ, ಫಲ ಹಾಗೂ ಉಡುಗೊರೆಯನ್ನು ಒಳಗೊಂಡಿರುತ್ತದೆ. 

ದಿನಾಂಕ 25 ಡಿಸಂಬರ್ 2024 ರಂದು ಮಂಗಳೂರಿನ ವಿಶ್ವ ವಿದ್ಯಾಲಯ ಕಾಲೇಜು ಹಂಪನ್ಕಟ್ಟ ಇಲ್ಲಿನ ರವೀಂದ್ರ ಕಲಾ ಭವನದಲ್ಲಿ ನೂರ ಎಪ್ಪತೈದು ಅರ್ಹ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ ವಿತರಿಸುವ ಶುಭ ಸಂದರ್ಭದಲ್ಲಿ ಪ್ರಶಸ್ತಿ ಪ್ರಧಾನ ಮಾಡಲಾಗುವುದು ಎಂದು ಪ್ರಕಟನೆ ತಿಳಿಸಿದೆ.