ಆತ್ಮಹತ್ಯೆಗೆ ಯತ್ನಿಸಿದ ವ್ಯಕ್ತಿಯೊಬ್ಬರು ಆ ಪ್ರಯತ್ನದಲ್ಲಿ ನೇಣುಕುಣಿಕೆ ತುಂಡಾಗಿ ಬಿದ್ದು ಸಾವನ್ನಪ್ಪಿದ ಘಟನೆ ಸೋಮವಾರ (ಡಿ.30) 80 ಬಡಗುಬೆಟ್ಟು ಗ್ರಾಮದ ನವಗ್ರಹ ಕಾಲೋನಿಯಲ್ಲಿ ನಡೆದಿದೆ.
ಮೃತ ವ್ಯಕ್ತಿಯನ್ನು ಮೆಲ್ರಾಯ್ (55ವ) ಎಂದು ಗುರುತಿಸಲಾಗಿದೆ. ಮನೆಯ ಮೊದಲ ಅಂತಸ್ತಿನ ಮೇಲ್ಛಾವಣೆಯ ಕಬ್ಬಿಣದ ಅಡ್ಡಪಟ್ಟಿಗೆ ನೇಣುಬೀಗಿದು ಆತ್ಮಹತ್ಯೆಗೆ ಯತ್ನಿಸಿದ್ದಾರೆ. ನೇಣು ಕುಣಿಕೆಯಲ್ಲಿ ನರಳಾಡುತ್ತಿದ್ದಾಗ, ದೇಹದ ಭಾರವು ನಿಯಂತ್ರಣ ಸಿಗದೆ ಹಗ್ಗವು ತುಂಡಾಗಿದೆ. ಪರಿಣಾಮ ಅವರು ಸುಮಾರು 20 ಅಡಿಗಿಂತಲೂ ಅಧಿಕ ಎತ್ತರದಿಂದ ಮನೆಯ ಹೊರಾಂಗಳಕ್ಕೆ ಬಿದ್ದಿದ್ದಾರೆ. ತಲೆಗೆ ಗಂಭೀರ ಸ್ವರೂಪದ ಗಾಯವಾಗಿದ್ದು, ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ.
ರಾಷ್ಟ್ರೀಯ ಅಂಗ ಮತ್ತು ಅಂಗಾಂಶ ಕಸಿ ಸಂಸ್ಥೆ, ನವದೆಹಲಿಯ ಸಫ್ದರ್‌ಜಂಗ್ ಆಸ್ಪತ್ರೆಗೆ, ಮೃತರು 2018 ರಲ್ಲಿ ಮರಣಾನಂತರ ಅಂಗಾಂಗ ದಾನ ಮಾಡಲು, ಆರೋಗ್ಯ ಸೇವೆಗಳ ಮಹಾನಿರ್ದೇಶನಾಲಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯದಿಂದ ಅಂಗಾಗ ದಾನ ಪ್ರತಿಜ್ಞಾ ಪತ್ರವನ್ನು ಪಡೆದಿದ್ದರು. ಸ್ಥಳದಲ್ಲಿ ಲಭ್ಯವಾಗಿರುವ ದಾನ ಪತ್ರದಲ್ಲಿ ಯಕೃತ್ತು, ಕರುಳು, ಕಣ್ಣಿನ ಚೆಂಡುಗಳು, ಚರ್ಮ, ಮೂಳೆಗಳು, ಹೃದಯ ಕವಾಟಗಳು, ರಕ್ತನಾಳಗಳು ದಾನಗೈಯುವ ಉಲ್ಲೇಖಗಳಿದ್ದವು.
ಘಟನಾ ಸ್ಥಳಕ್ಕೆ ಮಣಿಪಾಲ ಪೋಲಿಸ್ ಠಾಣೆಯ ಪಿ.ಎಸ್.ಐ ಅನಿಲ್ ಕುಮಾರ್, ಎ.ಎಸ್.ಐ ನಾಗೇಶ್ ನಾಯ್ಕ್, ಸಿಬ್ಬಂದಿ ವಿದ್ಯಾ ಕಾನೂನು ಪ್ರಕ್ರಿಯೆ ನಡೆಸಿದರು. ವಿಧಿ ವಿಜ್ಞಾನ ತಜ್ಞರಾದ ಪ್ರಸನ್ನ, ಲಾವಣ್ಯ, ಹರೀಶ್ ಪರಿಶೀಲಿಸಿದರು. ಶವವನ್ನು ಮಣಿಪಾಲ ಆಸ್ಪತ್ರೆಯ ವೈದಕೀಯ ಪರೀಕ್ಷಾ ಕೇಂದ್ರಕ್ಕೆ ಸಾಗಿಸಲು ಸಮಾಜಸೇವಕ ನಿತ್ಯಾನಂದ ಒಳಕಾಡುವರು ಇಲಾಖೆಗೆ ನೆರವಾದರು.