Header Ads Widget

ಮಣಿಪಾಲ್ ಕಾರ್ಡಿಯಾಲಜಿ ಅಪ್ಡೇಟ್ 2024 ಸಮ್ಮೇಳನ : 15 ನೇ ವರ್ಷದ ಕ್ರಿಸ್ಟಲ್ ಜುಬಿಲಿ ಆಚರಣೆ

ಕೆಎಂಸಿ ಮಣಿಪಾಲದ ಹೃದ್ರೋಗ ವಿಭಾಗ ಮತ್ತು ಹೃದಯರಕ್ತನಾಳದ ತಂತ್ರಜ್ಞಾನ ವಿಭಾಗ (ಸಿವಿಟಿ), ಎಂ ಸಿ ಎಚ್ ಪಿ, ಮಾಹೆ ಮಣಿಪಾಲವು, ಇತ್ತೀಚೆಗೆ ಮಣಿಪಾಲ್ ಕಾರ್ಡಿಯಾಲಜಿ ಅಪ್ಡೇಟ್ 2024 ಸಮ್ಮೇಳನ ಆಯೋಜಿಸಿತ್ತು. 15 ನೇ ವರ್ಷದ ಕ್ರಿಸ್ಟಲ್ ಜುಬಿಲಿಯನ್ನು ಆಚರಿಸಿತು. ಈ ಮೈಲಿಗಲ್ಲಿನ ಕಾರ್ಯಕ್ರಮವು ಹೃದ್ರೋಗದಲ್ಲಿನ ಒಳನೋಟವುಳ್ಳ ಚರ್ಚೆಗಳು, ಶೈಕ್ಷಣಿಕ ವಿನಿಮಯಗಳು ಮತ್ತು ಹೃದ್ರೋಗಶಾಸ್ತ್ರದ ಪ್ರವರ್ತಕರಿಗೆ ಗೌರವ ನೀಡಿತು. 

ಪ್ರತೀ ವರ್ಷ ಒಂದು ವಿಷಯದ ಮೇಲೆ ನಡೆಯುವ ಈ ಸಮ್ಮೇಳನದ ಈ ವರ್ಷದ ವಿಷಯ "ಹೃದಯ ವೈಫಲ್ಯ". ದೇಶದ ಪ್ರತಿಷ್ಠಿತ ಸಂಸ್ಥೆಗಳ ಪ್ರಖ್ಯಾತ ಸಂಪನ್ಮೂಲ ವ್ಯಕ್ತಿಗಳು ಈ ನಿರ್ಣಾಯಕ ವಿಷಯದ ವಿವಿಧ ಅಂಶಗಳ ಕುರಿತು ಭಾಷಣಗಳನ್ನು ನೀಡಿದರು. ಮಾಹೆಯ ಸಂಸ್ಥಾಪಕ ಡಾ.ಟಿ.ಎಂ.ಎ ಪೈ ಮತ್ತು ಇತ್ತೀಚೆಗೆ ನಿಧನರಾದ ಕೆಎಂಸಿ ಮಣಿಪಾಲದ ಹೃದ್ರೋಗ ವಿಭಾಗದ ಸ್ಥಾಪಕ ಮುಖ್ಯಸ್ಥ ದಿವಂಗತ ಡಾ.ಎಸ್.ಜಿ.ಎಸ್.ಪ್ರಭು ಅವರಿಗೆ ಪುಷ್ಪ ನಮನ ಸಲ್ಲಿಸುವುದರೊಂದಿಗೆ ಸಮ್ಮೇಳನ ಆರಂಭವಾಯಿತು. ಯುವ ವಿಜ್ಞಾನಿಗಳಲ್ಲಿ ಸಂಶೋಧನೆ ಮತ್ತು ಆವಿಷ್ಕಾರವನ್ನು ಉತ್ತೇಜಿಸಲು, ಸಮ್ಮೇಲನವು ಪೇಪರ್ ಮತ್ತು ಪೋಸ್ಟರ್ ಪ್ರಸ್ತುತಿಗಳನ್ನು ಒಳಗೊಂಡಿತ್ತು, ಉತ್ತಮ ಪ್ರಸ್ತುತಿಗಳಿಗೆ ಪ್ರಶಸ್ತಿಗಳನ್ನು ನೀಡಲಾಯಿತು. ಸ್ನಾತಕೋತ್ತರ ವಿದ್ಯಾರ್ಥಿಗಳಿಗೆ ಹೃದ್ರೋಗಶಾಸ್ತ್ರದ ರಸಪ್ರಶ್ನೆಯು ಸಮ್ಮೇಳನಕ್ಕೆ ಆಕರ್ಷಕ ಮತ್ತು ಸ್ಪರ್ಧಾತ್ಮಕ ಅಂಚನ್ನು ಸೇರಿಸಿತು.

ಉದ್ಘಾಟನಾ ಸಮಾರಂಭದ ಅಧ್ಯಕ್ಷತೆಯನ್ನು ಕೆಎಂಸಿ ಮಣಿಪಾಲದ ಡೀನ್ ಡಾ.ಪದ್ಮರಾಜ್ ಹೆಗ್ಡೆ ವಹಿಸಿದ್ದರು. ಕಸ್ತೂರ್ಬಾ ಆಸ್ಪತ್ರೆಯ ಉಪ ವೈದ್ಯಕೀಯ ಅಧೀಕ್ಷಕ ಡಾ.ಶಿರನ್ ಶೆಟ್ಟಿ ಉಪಸ್ಥಿತರಿದ್ದರು. ಸಂಘಟನಾ ಮುಖ್ಯಸ್ಥ ಹಾಗೂ ಹೃದ್ರೋಗ ವಿಭಾಗದ ಮುಖ್ಯಸ್ಥ ಡಾ.ಪದ್ಮಕುಮಾರ್, ಸ್ವಾಗತಿಸಿದರು, ಸಂಘಟನಾ ಕಾರ್ಯದರ್ಶಿ ಡಾ.ಕನ್ಹಯ್ಯ ಲಾಲನಿ ವಂದಿಸಿದರು. ಮತ್ತೋರ್ವ ಸಂಘಟನಾ ಕಾರ್ಯದರ್ಶಿ ಡಾ.ಕೃಷ್ಣಾನಂದ ನಾಯಕ್, ಪ್ರಮುಖ ಹೃದ್ರೋಗ ತಜ್ಞರಾದ ಡಾ.ವಿಜಯಲಕ್ಷ್ಮಿ, ಡಾ. ವಿ. ಎಸ್.ಪ್ರಕಾಶ್, ಡಾ. ಪ್ರಭಾವತಿ, ಡಾ. ಬಿ. ವಿ. ಮಂಜುನಾಥ್, ಡಾ. ಸುಬ್ರಮಣ್ಯಂ ಅವರ ಉಪಸ್ಥಿತಿಯೊಂದಿಗೆ ಕಾರ್ಯಕ್ರಮಕ್ಕೆ ಮೆರುಗು ನೀಡಿದರು.

ಮಣಿಪಾಲ್ ಕಾರ್ಡಿಯಾಲಜಿ ಅಪ್ಡೇಟ್ನ ಕ್ರಿಸ್ಟಲ್ ಜುಬಿಲಿ ಆಚರಣೆಯು ಹೃದಯರಕ್ತನಾಳದ ಶಿಕ್ಷಣ, ಸಂಶೋಧನೆ ಮತ್ತು ರೋಗಿಗಳ ಆರೈಕೆಯನ್ನು ಮುಂದುವರಿಸಲು ಕೆ ಎಂ ಸಿ ಮಣಿಪಾಲ ಮತ್ತು ಎಂ ಸಿ ಎಚ್ ಪಿ , ಮಾಹೆ ಮಣಿಪಾಲದ ಬದ್ಧತೆಯನ್ನು ಒತ್ತಿಹೇಳಿತು.