Header Ads Widget

ಮಾಜಿ ಪ್ರಧಾನಿ ಮನಮೋಹನ ಸಿಂಗ್ ನಿಧನ; ಇಂದು (ಡಿ.27) ಸರ್ಕಾರಿ ರಜೆ ಘೋಷಣೆ!

ಎರಡು ಬಾರಿ ಪ್ರಧಾನಿಯಾಗಿ ಹಾಗೂ ಸಂಸತ್ತಿನ ಮೇಲ್ಮನೆಯಲ್ಲಿ 33 ವರ್ಷಗಳ ಸುಧೀರ್ಘ ಸೇವೆ ಸಲ್ಲಿಸಿದ ಮಾಜಿ ಪ್ರಧಾನಿ ಮನಮೋಹನ ಸಿಂಗ್ ಅವರು ವಿಧಿವಶರಾಗಿದ್ದಾರೆ. 

ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದ 92 ವರ್ಷದ ಮನಮೋಹನ್ ಸಿಂಗ್ ದೆಹಲಿಯ ಏಮ್ಸ್ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ. ಇಂದು ರಾತ್ರಿ 8:06 ಗಂಟೆ ಸುಮಾರಿಗೆ ಏಮ್ಸ್‌ ಆಸ್ಪತ್ರೆಗೆ ದಾಖಲಾದ ಮನಮೋಹನ್ ಸಿಂಗ್ ಅವರಿಗೆ ತುರ್ತು ನಿಗಾ ಘಟಕದಲ್ಲಿ ಚಿಕಿತ್ಸೆ ನೀಡಲಾಗಿತ್ತು. ಆದ್ರೆ, ಚಿಕಿತ್ಸೆ ಫಲಕಾರಿಯಾಗಿಲ್ಲ. ರಾತ್ರಿ 9:51ಕ್ಕೆ ಅವರು ನಿಧನರಾದರು ಎಂದು ಏಮ್ಸ್ ತಿಳಿಸಿದೆ. ಇನ್ನು ವಿಷಯ ತಿಳಿಯುತ್ತಿದ್ದಂತೆಯೇ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ, ಸಂಸದೆ ಪ್ರಿಯಾಂಕಾ ಗಾಂಧಿ ಸೇರಿದಂತೆ ಹಲವು ರಾಜಕೀಯ ನಾಯಕರು ಆಸ್ಪತ್ರೆಗೆ ದೌಡಾಯಿಸಿದ್ದಾರೆ.

ಮಾಜಿ ಪ್ರಧಾನಿ ಮನಮೋಹನಸಿಂಗ್ ಅವರ ನಿಧನದ ಗೌರವಾರ್ಥ ರಾಜ್ಯದಲ್ಲಿ ಏಳು ದಿನಗಳ ಶೋಕಾಚರಣೆ ಘೋಷಿಸಲಾಗಿದೆ. ಜೊತೆಗೆ ಇಂದು (ಡಿ.27)ರಂದು ಸರ್ಕಾರಿ ರಜೆ ಘೋಷಿಸಿದ್ದು, ಶಾಲಾ-ಕಾಲೇಜುಗಳು, ಬ್ಯಾಂಕ್‌ಗಳು ಹಾಗೂ ಸರ್ಕಾರಿ ಕಚೇರಿಗಳು ಕಾರ್ಯ ನಿರ್ವಹಿಸುವುದಿಲ್ಲ.

ಮನಮೋಹನ ಸಿಂಗ್ ಅವರು ವಿಧಿವಶವಾದ ಕಾರಣ ಬೆಳಗಾವಿಯಲ್ಲಿ ಜರುಗಬೇಕಾಗಿದ್ದ ಕಾಂಗ್ರೆಸ್ ಅಧಿವೇಶನದ ಶತಮಾನೋತ್ಸವದ ಅಂಗವಾಗಿ ಆಯೋಜಿಸಲಾಗಿದ್ದ 'ಗಾಂಧೀ ಭಾರತ 'ಕಾರ್ಯಕ್ರಮ ರದ್ದು ಗೊಳಿಸಲಾಗಿದೆ ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ತಿಳಿಸಿದ್ದಾರೆ. 

ಮನಮೋಹನ್‌ ಸಿಂಗ್‌ ನಿಧನಕ್ಕೆ ಪ್ರಧಾನಿ ನರೇಂದ್ರ ಮೋದಿ ಟ್ವೀಟ್‌ ಮಾಡಿ ಸಂತಾಪ ಸೂಚಿಸಿದ್ದಾರೆ. 'ಡಾ. ಮನಮೋಹನ್ ಸಿಂಗ್ ಜಿ ಮತ್ತು ನಾನು ಅವರು ಪ್ರಧಾನಿಯಾಗಿದ್ದಾಗ ಮತ್ತು ನಾನು ಗುಜರಾತ್ ಸಿಎಂ ಆಗಿದ್ದಾಗ ನಿಯಮಿತವಾಗಿ ಸಂವಹನ ನಡೆಸುತ್ತಿದ್ದೆವು. ಆಡಳಿತಕ್ಕೆ ಸಂಬಂಧಿಸಿದ ವಿವಿಧ ವಿಷಯಗಳ ಕುರಿತು ನಾವು ವ್ಯಾಪಕವಾದ ಚರ್ಚೆಗಳನ್ನು ನಡೆಸುತ್ತಿದ್ದೆವು. ಅವರ ಬುದ್ಧಿವಂತಿಕೆ ಮತ್ತು ನಮ್ರತೆ ಯಾವಾಗಲೂ ನನಗೆ ಕಾಣುತ್ತಿತ್ತು. ಈ ದುಃಖದ ಸಮಯದಲ್ಲಿ, ಮನಮೋಹನ್ ಸಿಂಗ್ ಜಿ ಅವರ ಕುಟುಂಬ, ಅವರ ಸ್ನೇಹಿತರು ಮತ್ತು ಅಸಂಖ್ಯಾತ ಅಭಿಮಾನಿಗಳೊಂದಿಗೆ ನಾನೂ ಭಾಗಿಯಾಗಿದ್ದೇನೆ' ಎಂದಿದ್ದಾರೆ.