ದೇಶದಲ್ಲಿ ರಾಷ್ಟ್ರೀಯ ಶಿಕ್ಷಣ ನೀತಿ ನಿಧಾನವಾಗಿ ಜಾರಿಗೆ ಬರುತ್ತಿದೆ. ಶಿಕ್ಷಣ ಕೇವಲ ಹೊಟ್ಟೆ ತುಂಬಿಸಲು ಮಾತ್ರವಲ್ಲ, ಸಂಸ್ಕಾರ ಪಡೆಯಲು ಸಹ ಬೇಕು ಎಂದು ಆರ್ಎಸ್ಎಸ್ ಸರಸಂಘ ಚಾಲಕ ಡಾ. ಮೋಹನ್ ಭಾಗವತ್ ಹೇಳಿದ್ದಾರೆ. ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳದ ಕಲ್ಲಡ್ಕದ ಶ್ರೀರಾಮ ವಿದ್ಯಾಕೇಂದ್ರದಲ್ಲಿ ನಡೆದ ವಾರ್ಷಿಕ ಕ್ರೀಡೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು. ಎರಡು ವರ್ಷಗಳಿಂದ ಈ ಬಗ್ಗೆ ಚರ್ಚೆ, ಚಿಂತನಾ, ಮಂಥನಾ ನಡೆದು ಎಲ್ಲರ ಸಮ್ಮತಿಯೊಂದಿಗೆ ಶಿಕ್ಷಣ ನೀತಿ ಜಾರಿಗೆ ತರಲಾಗಿದೆ. ಪಂಚ ಪೋಷಾತ್ಮಕ ವಿಚಾರವನ್ನು ದೃಷ್ಟಿಯಲ್ಲಿಟ್ಟು ಈ ಶಿಕ್ಷಣ ನೀತಿ ರೂಪಿಸಲಾಗಿದೆ. ಈ ಮಾದರಿಯ ಶಿಕ್ಷಣ ಈಗಾಗಲೇ ಶ್ರೀರಾಮ ವಿದ್ಯಾಕೇಂದ್ರದಲ್ಲಿ ನೀಡಲಾಗುತ್ತಿದೆ ಎಂದು ಹೇಳಿದ್ದಾರೆ. ಶಿಕ್ಷಣವನ್ನು ಸರಿಯಾಗಿ ಉಪಯೋಗಿಸುವ ಬುದ್ದಿ ಸಹ ಅವಶ್ಯಕ. ಎಲ್ಲರನ್ನು ಪ್ರೀತಿಸುವಂತೆ ನಮ್ಮ ದೇಶದ ಪರಂಪರೆ, ಸಂಸ್ಕೃತಿ ಕಲಿಸುತ್ತದೆ. ನಮ್ಮ ಜ್ಞಾನ ಉತ್ಕೃಷ್ಟವಾಗಿರಬೇಕು. ದೇಶದ ಸಂಸ್ಕ್ರತಿ, ಪರಂಪರೆ, ದುರ್ಬಲರ ರಕ್ಷಣೆಗೆ ನಾವೆಲ್ಲರೂ ಸಿದ್ಧರಿರಬೇಕು ಎಂದಿದ್ದಾರೆ. ಇನ್ನು ವಿದ್ಯಾರ್ಥಿಗಳ ಸಾಹಸ ಪ್ರದರ್ಶನಕ್ಕೆ ಮೋಹನ್ ಭಾಗವತ್ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಆರ್ಎಸ್ಎಸ್ ಮುಖಂಡ ಕಲ್ಲಡ್ಕ ಪ್ರಭಾಕರ್ ಭಟ್ ಮುಂದಾಳತ್ವದ ಕಲ್ಲಡ್ಕ ಶ್ರೀ ರಾಮ ವಿದ್ಯಾಕೇಂದ್ರದಿಂದ ಸುಮಾರು ಮೂರುವರೆ ದಶಕದಿಂದ ಕ್ರೀಡೋತ್ಸವ ಕಾರ್ಯಕ್ರಮ ನಡೆದುಕೊಂಡು ಬರುತ್ತಿದೆ. ಶ್ರೀರಾಮನ ವಿಗ್ರಹಕ್ಕೆ ಹಾಲಿನ ಅಭಿಷೇಕ ಮಾಡುವ ಮೂಲಕ ಕ್ರಿಡೋತ್ಸವ ಉದ್ಘಾಟನೆ ಮಾಡಲಾಗಿದೆ. ಶಿಶುನೃತ್ಯ, ಜಡೆಕೋಲಾಟ, ನಿಯುದ್ಧ, ದೀಪಾರತಿ, ಮಲ್ಲಕಂಬ, ಯೋಗಾಸನ, ಮಲ್ಲಕಂಬ, ತಿರುಗುವ ಮಲ್ಲಕಂಬ ಹೀಗೆ ವಿವಿಧ ಕಾರ್ಯಕ್ರಮಗಳು ನಡೆಯಲಿವೆ.