Header Ads Widget

ಮುರ್ಡೇಶ್ವರ: ಸಮುದ್ರದಲ್ಲಿ ಕೊಚ್ಚಿಹೋದ 7 ವಿದ್ಯಾರ್ಥಿನಿಯರು; ಮೂವರ ರಕ್ಷಣೆ!

ಶಾಲಾ ಪ್ರವಾಸಕ್ಕೆಂದು ಬಂದು ಕಡಲ ತೀರದಲ್ಲಿ ಈಜಲು ಹೋಗಿದ್ದ ಶಾಲಾ ವಿದ್ಯಾರ್ಥಿನಿಯರು ಸಮುದ್ರ ಪಾಲಾಗಿರುವ ಘಟನೆ ಮುರುಡೇಶ್ವರದಲ್ಲಿ ನಡೆದಿದೆ. 7 ವಿದ್ಯಾರ್ಥಿನಿಯರು ಸಮುದ್ರದಲ್ಲಿ ಈಜುವಾಗ ಅಲೆಗೆ ಸಿಲುಕಿ ಮುಳುಗಿ ಹೋಗಿದ್ದಾರೆ. ದುರಂತದಲ್ಲಿ ಓರ್ವ ವಿದ್ಯಾರ್ಥಿನಿ ಸಾವನ್ನಪ್ಪಿದ್ದು, ಇನ್ನೂ ಮೂರು ವಿದ್ಯಾರ್ಥಿನಿಯರ ನಾಪತ್ತೆಯಾಗಿದ್ದು ಶೋಧ ಕಾರ್ಯ ಮುಂದುವರಿದಿದೆ.

ಕೋಲಾರ ಜಿಲ್ಲೆ ಮುಳಬಾಗಿಲಿನ ಕೊತ್ತೂರು ಮೋರಾರ್ಜಿ ದೇಸಾಯಿ ವಸತಿ ಶಾಲೆಯ 54 ವಿದ್ಯಾರ್ಥಿನಿಯರು, 6 ಮಂದಿ ಶಿಕ್ಷಕರ ಜೊತೆ ಪ್ರವಾಸಕ್ಕೆಂದು ಭಟ್ಕಳ ತಾಲೂಕಿನ ಮುರುಡೇಶ್ವರಕ್ಕೆ ಡಿ. 10 ರಂದು ತೆರಳಿದ್ದರು. ಕಡಲ ತೀರದಲ್ಲಿ ವಿದ್ಯಾರ್ಥಿನಿಯರು ಈಜಲು ಹೋದಾಗ ಈ ಅನಾಹುತ ಸಂಭವಿಸಿದೆ.

ಸಮುದ್ರದ ಅಲೆಗೆ ಸಿಲುಕಿ ಸಾವನ್ನಪ್ಪಿದ ವಿದ್ಯಾರ್ಥಿನಿಯನ್ನು 9ನೇ ತರಗತಿ ಓದುತ್ತಿದ್ದ ಶಾವಂತಿ ಎಂದು ಗುರುತಿಸಲಾಗಿದೆ. ನೀರು ಪಾಲಾದ 7 ವಿದ್ಯಾರ್ಥಿನಿಯರಲ್ಲಿ ಯಶೋಧ (15), ವೀಕ್ಷಣಾ (15), ಲಿಪಿಕಾ (15) ಎಂಬ ವಿದ್ಯಾರ್ಥಿನಿಯನ್ನು ಲೈಫ್ ಗಾರ್ಡ್ ಸಿಬ್ಬಂದಿ ರಕ್ಷಣೆ ಮಾಡಿದ್ದಾರೆ. ಮೂವರಲ್ಲಿ ಓರ್ವ ಬಾಲಕಿಯ ಸ್ಥಿತಿ ಗಂಭೀರವಾಗಿದೆ. ಇನ್ನು ಮೂವರಿಗಾಗಿ ಶೋಧ ಕಾರ್ಯ ಮುಂದುವರಿದಿದೆ.

ಮೃತ ಶ್ರಾವಂತಿ ಮುಳಬಾಗಿಲು ತಾಲ್ಲೂಕಿನ ಪೂಜಾರಹಳ್ಳಿ ಗೋಪಾಲಪ್ಪ ಎಂಬುವವರ ಪುತ್ರಿ. ಈಕೆ ಕೊತ್ತೂರು ಮೋರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ 9ನೇ ತರಗತಿ ಓದುತ್ತಿದ್ದಳು. ದೀಕ್ಷಾ, ಲಾವಣ್ಯ, ವಂದನಾ ಕಾಣೆಯಾದ ವಿದ್ಯಾರ್ಥಿನಿಯರು.

ದುರಂತ ನಡೆದಾಗ ಲೈಫ್ ಗಾರ್ಡ್ ಸಿಬ್ಬಂದಿ ಬಳಿ ರಕ್ಷಣಾ ಸಾಮಗ್ರಿ ಇಲ್ಲದೇ ಶೋಧ ಕಾರ್ಯಕ್ಕೆ ಪರದಾಡಿದರು. ಜಿಲ್ಲಾಡಳಿತದಿಂದ ಈವರೆಗೂ ನಮಗೆ ಸರಿಯಾದ ರಕ್ಷಣಾ ಸಾಮಗ್ರಿ ನೀಡಿಲ್ಲ ಎಂದು ಅವರು ಆರೋಪಿಸಿದ್ದಾರೆ. ಸ್ಥಳೀಯ ಮೀನುಗಾರರು, ಲೈಫ್ ಗಾರ್ಡ್ ಹಾಗೂ ಕೋಸ್ಟ್ ಗಾರ್ಡ್ ಸಿಬ್ಬಂದಿ ಈ ಶೋಧ ಕಾರ್ಯಕ್ಕೆ ಕೈಜೋಡಿಸಿದ್ದಾರೆ. ಮುರುಡೇಶ್ವರ ಪೊಲೀಸ್ ಠಾಣೆಯಲ್ಲಿ ಈ ಸಂಬ0ಧ ಪ್ರಕರಣ ದಾಖಲಾಗಿದೆ.

ಮೃತ ವಿದ್ಯಾರ್ಥಿನಿಯ ಕುಟುಂದವರಿಗೆ ಸರ್ಕಾರ ತಲಾ 5 ಲಕ್ಷ ರೂ. ಪರಿಹಾರ ಘೋಷಣೆ ಮಾಡಿದೆ. ವಿದ್ಯಾರ್ಥಿನಿಯರ ಕುಟುಂಬಕ್ಕೆ ತಲಾ ಐದು ಲಕ್ಷ ಪರಿಹಾರ ಘೋಷಣೆ ಮಾಡಿ ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘದ ಕಾರ್ಯನಿರ್ವಾಹಕ ನಿರ್ದೇಶಕರು ಆದೇಶ ಹೊರಡಿಸಿದ್ದಾರೆ.