ಜೂನ್ 1991, ದೇಶದ ಪ್ರಧಾನ ಮಂತ್ರಿಯವರ ಕಚೇರಿಯಿಂದ ಫೋನ್ ರಿಂಗಾಯಿಸಿತ್ತು. ಆ ಕಡೆಯಿಂದ ಪ್ರಧಾನ ಮಂತ್ರಿಯವರ ಪ್ರಿನ್ಸಿಪಲ್ ಸೆಕ್ರೆಟರಿ ಪಿ. ಸಿ. ಅಲೆಕ್ಸಾಂಡರ್ ಅವರ ಧ್ವನಿ ಕೇಳುತಿತ್ತು ... "ನರ ಸಿಂಹ ರಾಯರು ನಿಮ್ಮನ್ನು ವಿತ್ತ ಸಚಿವರನ್ನಾಗಿ ಆಯ್ಕೆ ಮಾಡಿದ್ದಾರೆ ". ಮುಗುಳ್ನಗೆ ಬೀರಿದ ಡಾ. ಸಿಂಗ್ ಇದನ್ನು ತಮಾಷೆಯಾಗಿ ಪರಿಗಣಿಸಿದ್ದರು.
90 ದಶಕದ ಆರಂಭದಲ್ಲಿ ಹಳ್ಳ ಹಿಡಿದಿದ್ದ ದೇಶದ ಆರ್ಥಿಕತೆಯ ಕಾರಣದಿಂದ ಅಂತಾರಾಷ್ಟ್ರೀಯ ಮಟ್ಟದಲ್ಲಿ ಭಾರತ ತನ್ನ ಬದ್ಧತೆ ಯನ್ನು ಉಳಿಸಿಕೊಳ್ಳಲು ಸಾಧ್ಯವಾಗದೆ ಚಿನ್ನವನ್ನು ಅಡವಿಡುವ ಅಪಮಾನಜನಕ ಸ್ಥಿತಿಗೆ ತಲುಪಿತ್ತು. ಅವತ್ತು ಒಬ್ಬ ವಿದ್ಯಾವಂತ ಅನುಭವಿ ವಿತ್ತ ಸಚಿವ ದೇಶದ ಅಗತ್ಯತೆಯಾಗಿತ್ತು.
1932 ರಲ್ಲಿ ಪಂಜಾಬ್ ನ (ಈಗ ಪಾಕಿಸ್ತಾನದ ಭಾಗ )ಸಾಧಾರಣ ಕುಟುಂಬದಲ್ಲಿ ಜನಿಸಿದ ಡಾ. ಸಿಂಗ್ ಕ್ಯಾಂಬ್ರಿಡ್ಜ್, ಆಕ್ಸ್ಫರ್ಡ್ ಯೂನಿವರ್ಸಿಟಿ ಯಲ್ಲಿ ಉನ್ನತ ಶಿಕ್ಷಣದ ನಂತರ ಶಿಕ್ಷಕರಾಗಿ ವೃತ್ತಿ ಜೀವನ ಆರಂಭಿಸಿ, ವಿತ್ತ ಸಚಿವಾಲಯದ ಸಲಹೆಗಾರ, ಕಾರ್ಯದರ್ಶಿ, RBI ಯ ಗವರ್ನರ್, ಪ್ಲಾನಿಂಗ್ ಕಮಿಷನ್ ಚೆರ್ಮೆನ್, ಪ್ರಧಾನ ಮಂತ್ರಿಗಳ ಸಲಹೆಗಾರರಾಗಿ ಆಗಿ ತಮ್ಮ ಸುಧಿರ್ಘ ವೃತ್ತಿ ಜೀವನದ ಹಾದಿಯನ್ನು ಕ್ರಮಿಸಿದ್ದರು.
ಜೂನ್ 21, 1991 ರಂದು ನರಸಿಂಹ ರಾವ್ ಕ್ಯಾಬಿನೆಟ್ನಲ್ಲಿ ದೇಶದ ವಿತ್ತ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸುವ ಮೂಲಕ ಜ್ಞಾನ ನಾಯಕ ಡಾ. ಸಿಂಗ್ ಸಾಹೇಬರ ರಾಜಕೀಯ ಜೀವನ ಆರಂಭ ಗೊಂಡಿತ್ತು.
ನಂತರ ಆರ್ಥಿಕ ಉದಾರೀಕರಣ ನೀತಿಯ ಮೂಲಕ ದೇಶದ ಆರ್ಥಿಕತೆಯನ್ನು ಎದ್ದು ನಿಲ್ಲಿಸಿದ್ದು ಇತಿಹಾಸ. 2004 ರ ಚುನಾವಣೆಯಲ್ಲಿ ಡಾ. ಸಿಂಗ್ ಅವರನ್ನು ಪ್ರಧಾನಿ ಅಭ್ಯರ್ಥಿಯಾಗಿ ಬಿಂಬಿಸುವ ಮೂಲಕ ಕಾಂಗ್ರೆಸ್ ಪಕ್ಷ ಮತ್ತೊಮ್ಮೆ ದೇಶದ ಚುಕ್ಕಾಣಿ ಹಿಡಿದಿತ್ತು.
ಪ್ರಧಾನಿಯಾಗಿ ಅಧಿಕಾರ ವಹಿಸಿದ ಡಾ. ಸಿಂಗ್ ಅವರಿಗೆ ದೇಶದ ವಿಕಾಸವಾಗಬೇಕಾದರೆ ಮೊದಲು ಶಿಕ್ಷಣ ಮತ್ತು ಆರೋಗ್ಯ ಕ್ಷೇತ್ರದಲ್ಲಿ ಸುಧಾರಣೆ ಯಾಗಬೇಕು ಎಂಬುದು ಚೆನ್ನಾಗಿ ಅರಿವಿತ್ತು. ಆ ನಿಟ್ಟಿನಲ್ಲಿ ದೇಶದ ಗ್ರಾಮೀಣ ಭಾಗಗಳಿಗೆ ಅರೋಗ್ಯ ಸೇವೆಯನ್ನು ತಲುಪಿಸಲು ನ್ಯಾಷನಲ್ ಹೆಲ್ತ್ ಕಮಿಷನ್ ಆರಂಭವಾಯಿತು. IIT, AIMS, IIM ಗಳಲ್ಲಿ ಮೀಸಲಾತಿ ಆರಂಭಿಸಲಾಯಿತು.
8 ಹೊಸ IIT ಕಾಲೇಜುಗಳನ್ನು ಆರಂಭಿಸಲಾಯಿತು. RTE ಆಕ್ಟ್ ಮೂಲಕ 6-14 ವರುಷದ ಮಕ್ಕಳಿಗೆ ಉಚಿತ ಮತ್ತು ಕಡ್ಡಾಯ ಶಿಕ್ಷಣ ನೀಡಲು ಸರ್ವ ಶಿಕ್ಷಣ ಅಭಿಯಾನ ಮತ್ತು ಮಿಡ್ ಡೇ ಮೀಲ್ ಕಾರ್ಯಕ್ರಮ ಆರಂಭಿಸಲಾಯಿತು.
ಜನರಿಗೆ ಸ್ಥಳೀಯವಾಗಿ ಉದ್ಯೋಗ ನೀಡುವ, ಮತ್ತು ಮಹಿಳಾ ಸಬಲೀಕರಣದ ನಿಟ್ಟಿನಲ್ಲಿ MGNREGA ಕಾರ್ಯಕ್ರಮ ಆರಂಭಿಸಲಾಯಿತು. ಇವತ್ತು ಎಲ್ಲದಕ್ಕೂ ಕೇಳುತ್ತಿರುವ AADHAAR ನಂಬ್ರ ಡಾ. ಸಿಂಗ್ ಅವರ ಅವಧಿಯ UIDAI ಕಾರ್ಯಕ್ರಮದ ಅಂಗವಾಗಿದೆ.
ಮೌನ ಮೋಹನ್ ಸಿಂಗ್ ಎಂದು ಬಿಂಬಿಸಲಾದ ಡಾ. ಮನಮೋಹನ್ ಸಿಂಗ್ ಅವರ ಕೆಲಸಗಳು, ಮಾತುಗಳು, ಕಾರ್ಯವೈಖರಿಗಳು ಇಂದು ಜೋರಾಗಿ ಸದ್ದು ಮಾಡುತ್ತಿವೆ. ವಿಶ್ವ ಕಂಡ ಅಪ್ರತಿಮ ಆರ್ಥಿಕ ತಜ್ಞನಿಗೆ ಭಾವಪೂರ್ಣ ಶೃದ್ಧಾಂಜಲಿ. ಮತ್ತೆ ಹುಟ್ಟಿ ಬನ್ನಿ ಜ(ಜ್ಞಾ)ನ ನಾಯಕ ಡಾ. ಸಿಂಗ್ ಸಾಹೇಬರೇ...
🖊️... ಸುನೀಲ್ ಸಾಲ್ಯಾನ್ ಕಡೆಕಾರ್