ಉಡುಪಿ: ಪಂಚದ್ರಾವಿಡ ಭಾಷೆಗಳಲ್ಲಿ ಒಂದಾಗಿರುವ ತುಳು ಭಾಷೆಯು ತನ್ನದೇ ಆದಂತಹ ಸ್ವಂತ ಲಿಪಿಯನ್ನು ಹೊಂದಿಕೊoಡು ಸಮೃದ್ಧವಾಗಿದೆ. ದೇಶ ವಿದೇಶಗಳಲ್ಲಿ ತುಳುವರು ಹರಡಿಕೊಂಡಿದ್ದು, ಯವಜನತೆಯ ತುಳು ಭಾಷೆ ಮಾತನಾಡುವ ಮೂಲಕ ಭಾಷಾಭಿಮಾನವನ್ನು ಬೆಳೆಸಿಕೊಳ್ಳಬೇಕು ಎಂದು ಮಂಗಳೂರು ವಿವಿ ಸಿಂಡಿಕೇಟ್ ಸದಸ್ಯ ಸುರೇಶ್ ಕುಮಾರ್ ಬಿ.ನಾವೂರು ತಿಳಿಸಿದ್ದಾರೆ.
ತುಳುಕೂಟ ಉಡುಪಿ (ರಿ.), ಧರ್ಮಸ್ಥಳ ಮಂಜುನಾಥೇಶ್ವರ ತುಳು ಅಧ್ಯಯನ ಪೀಠ, ಮಿಲಾಗ್ರೀಸ್ ಕಾಲೇಜು, ರೋಟರಿ ಕ್ಲಬ್ ಕಲ್ಯಾಣಪುರ ಜೈ ತುಳುನಾಡ್ ಉಡುಪಿ, ಕನ್ನಡ ಸಂಸ್ಕೃತಿ ಇಲಾಖೆ ಉಡುಪಿ ಆಶ್ರಯದಲ್ಲಿ ಕಲ್ಯಾಣಪುರ ಮಿಲಾಗ್ರೀಸ್ ಕಾಲೇಜಿನಲ್ಲಿ ಶನಿವಾರ ನಡೆದ ತುಳುಮಿನದನ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ತುಳುಕೂಟ ಉಡುಪಿ ಇದರ ಅಧ್ಯಕ್ಷ ಬಿ.ಜಯಕರ್ ಶೆಟ್ಟಿ ಇಂದ್ರಾಳಿ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿ, ಕರಾವಳಿಯಲ್ಲಿ ತುಳು ಭಾಷಾ ಮೀಸಲಾತಿಯೊಂದಿಗೆ ಅನುಮತಿ ಪಡೆದ ವೈದ್ಯಕೀಯ ಕಾಲೇಜುಗಳು ಪ್ರಸ್ತುತ ಡೀಮ್ಡ್ ಯುನಿವರ್ಸಿಟಿಯಾಗಿ ಮಾರ್ಪಾಟುಗೊಂಡು ತುಳು ಕೋಟಾದಡಿ ವೈದ್ಯಕೀಯ ಸೀಟುಗಳನ್ನು ರದ್ದುಗೊಳಿಸಿರುವುದು ವಿಷಾದನೀಯ ಎಂದರು.
ಕಲ್ಯಾಣಪುರ ಮಿಲಾಗ್ರೀಸ್ ಕಾಲೇಜಿನ ಸಂಚಾಲಕ ಧರ್ಮಗುರು ಫರ್ಡಿನಾಂಡ್ ಗೋನ್ಸಾಲೀಸ್, ಉಚ್ಚಿಲ ದಸರಾ ಉತ್ಸವ ಸಮಿತಿ ಅಧ್ಯಕ್ಷ ವಿನಯ ಕರ್ಕೇರ, ಧರ್ಮಸ್ಥಳ ಮಂಜುನಾಥೇಶ್ವರ ತುಳು ಅಧ್ಯಯನ ಪೀಠದ ಸಂಯೋಜಕ ಡಾ. ಮಾಧವೆ ಎಂ.ಕೆ, ಕುಡ್ಲ ಜೈ ತುಳುನಾಡ್ ಕೇಂದ್ರ ಸಮಿತಿ ಅಧ್ಯಕ್ಷ ಉದಯ್ ಪೂಂಜ, ಉಡುಪಿ ಘಟಕದ ಅಧ್ಯಕ್ಷೆ ಸುಶೀಲಾ ಜಯಕರ್, ರೋಟರಿ ಕ್ಲಬ್ ಕಲ್ಯಾಣಪುರ ಅಧ್ಯಕ್ಷ ಬ್ಯಾಪ್ಟಿಸ್ಟ್ ಡಯಾಸ್, ತುಳುಕೂಟದ ಉಪಾಧ್ಯಕ್ಷ ಭುವನ ಪ್ರಸಾದ್ ಹೆಗ್ಡೆ, ಕಾರ್ಯದರ್ಶಿ ಗಂಗಾಧರ್ ಕಿದಿಯೂರ್, ಕೋಶಾಧಿಕಾರಿ ಎಂ.ಜಿ.ಚೈತನ್ಯ ಉಪಸ್ಥಿತರಿದ್ದರು. ತುಳುಕೂಟ ಉಡುಪಿ ತುಳು ಮಿನದನ ಕಾರ್ಯಕ್ರಮದ ಸಂಚಾಲಕ ಡಾ.ವಿ.ಕೆ.ಯಾದವ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಕಲ್ಯಾಣಪುರ ಮಿಲಾಗ್ರೀಸ್ ಕಾಲೇಜಿನ ಪ್ರಾಂಶುಪಾಲ ಡಾ.ವಿನ್ಸೆಂಟ್ ಆಳ್ವ ಸ್ವಾಗತಿಸಿದರು.