ಒದ್ದೆ ಸೀರೆಯಲವಳ ಕಾಯವಿತ್ತು...!
ನಡುಗುತಿಹ ಕಾಲುಗಳ ಎಳೆದೆಳೆದು ಇಡುತಿರಲು
ನನ್ನ ನಯನದಿ ಅಶ್ರು ಬಿಂದುವಿತ್ತು..!
ಯಾರು ಇಲ್ಲದ ಇವಳ
ಇರುಳ ನಿದ್ದೆಯ ಕಳೆದ
ಜಾಗದೊಳು ಜಾವದೊಳು
ಜಲದ ಸಿಂಚನದೊಳು
ಮುರುಕುಗಟ್ಟಿದ ಚರ್ಮ ಬೆಚ್ಚಿಬಿತ್ತು..!
ಬಿದ್ದ ಜಲದಿಂದವಳು ಎದ್ದೆದ್ದು ನೋಡುತಿರೆ...
ಮನೆಯ ಯಜಮಾನಿಯ ರುದ್ರ ರೂಪವಿತ್ತು..!
ಹಸಿರು ಹುಲ್ಲಿನ ಮೇಲೆ ಮಲಗಿದಳ ಕಾಲುಗಳ
ಮೇಲೆ ಕೊಡಪಾನದ ಅಚ್ಚು ಇತ್ತು.
ಬೆಳಗು ಜಾವದ ಚಳಿಗೆ ಗಡಗಡನೆ ನಡುಗುತಿರೆ
ಜಾಗ ತೊರೆಯಲು
ಮನಸ್ಸು ಸೂಚಿಸಿತ್ತು.
ಸೀರೆ ಮಾತ್ರ ಅರ್ಧ!
ಮೈಯ ಮುಚ್ಚಲು ನಿರತ...
ಪಯಣದೊಳು ಏಕಾಂಗಿ
ಮೂಕ ರೋಧನಕೆ ನನ್ನ ಸಾಕ್ಷಿ
ಕಾಸಿಲ್ಲ ಕರದಲ್ಲಿ
ಶಕ್ತಿ ಇಲ್ಲದ ಒಡಲು
ಯುಕ್ತಿ ಇದ್ದರು ಕೂಡ
ಹಸಿವು ವಸನದ ದಾಹ
ಒದ್ದೆ ಮೂಗಿಗೆ ಚಹದ
ಕಂಪು ಬಿತ್ತು.
ಅಂಗಡಿಯ ಎದುರುಗಡೆ ನಿಂತಿಹಳು ನಡುಗುತಿರೆ ..
ಖಾಲಿ ಹಸ್ತವು ಮುಂದೆ ಚಾಚಿತ್ತು
ಕಾಸಿಲ್ಲದವಳನ್ನು
ದುರುಗುಟ್ಟಿ ನೋಡಿದರೆ
ಎತ್ತಿಟ್ಟ ಪಾದವೋ ನಡುಗುತ್ತಿತ್ತು.
ಕೈಚೀಲದೊಳಗೆ ಕೈ ಹಾಕಿದರೆ ತರವೇ...
ಇನ್ನೂರು ರೂಗಳಿಗೆ ಸೀಮಿತ.
ದಿನದ ಖರ್ಚಿಗೆ ಅವಳಿಗೆ
ಪರಿಮಿತ.
ದಾರಿ ಬೇರಿಲ್ಲದೆ ಅವಳೆದುರು
ನಿಲ್ಲುತ್ತಿರೆ ..
ಅನುಮಾನದಿ ದೇಹ ಕಂಪಿಸಿತ್ತು!
ಅವಳ ಹಸ್ತದಿ ನನ್ನ
ಇನ್ನೂರು ರೂಗಳು
ನನ್ನನ್ನು ನೋಡಿ ಗಹಗಹಿಸುತ್ತಿತ್ತು
"ಇಷ್ಟೇ ಸಾಕೆ"ಎಂದು ಮೂದಲಿಸಿತ್ತು!
**ಮತ್ಸ್ಯ ಕನ್ಯೆ***