Header Ads Widget

ಭೀಕರ ಅಪಘಾತ; ಪ್ರೊಬೇಷನರಿ ಐಪಿಎಸ್ ಅಧಿಕಾರಿ ಸಾವು!


ಪೊಲೀಸ್ ಜೀಪು ಭೀಕರ ಅಪಘಾತಕ್ಕೀಡಾಗಿ ಗಂಭೀರ ಗಾಯಗೊಂಡಿದ್ದ ಪ್ರೊಬೇಷನರಿ ಐಪಿಎಸ್ ಅಧಿಕಾರಿ ಬಿಹಾರ ಮೂಲದ ಹರ್ಷಬರ್ಧನ್(26) ದುರಂತ ಸಾವಿಗೀಡಾಗಿದ್ದಾರೆ. ಚಿಕಿತ್ಸೆ ಫಲಿಸದೆ ಹಾಸನ ಖಾಸಗಿ ಆಸ್ಪತ್ರೆಯಲ್ಲಿ ದುರ್ಮರಣಕ್ಕೆ ಒಳಗಾಗಿದ್ದಾರೆ. 

ಹಾಸನ ವಿಭಾಗಕ್ಕೆ ಪ್ರೊಬೇಶನರಿ ಡಿವೈಎಸ್ಪಿ ಆಗಿ ನಿಯೋಜನೆಗೊಂಡಿದ್ದ ಹರ್ಷಬರ್ಧನ್ ಅವರು ಮೈಸೂರಿನ ಐಜಿಪಿ ಕಚೇರಿಯಲ್ಲಿ ರಿಪೋರ್ಟ್ ಮಾಡಿ ಎಸ್ಪಿ ಕಚೇರಿಯಲ್ಲಿ ಅಧಿಕಾರ ಸ್ವೀಕಾರಕ್ಕೆ ಆಗಮಿಸುತ್ತಿದ್ದಾಗ ಅಪಘಾತಕ್ಕೀಡಾಗಿದ್ದಾರೆ.‌ ಹಾಸನ ತಾಲೂಕಿನ ಕಿತ್ತಾನೆ ಗ್ರಾಮದಲ್ಲಿ ಜೀಪಿನ ಟೈರ್ ಸಿಡಿದು ರಸ್ತೆ ಪಕ್ಕದಲ್ಲಿ ಪಲ್ಟಿಯಾಗಿ ಬಿದ್ದಿದೆ. ಸಂಜೆ ವೇಳೆಗೆ ಘಟನೆ ನಡೆದಿದ್ದು ಇಬ್ಬರಿಗೂ ತೀವ್ರ ಗಾಯವಾಗಿತ್ತು. ಹರ್ಷಬರ್ಧನ್ ಅವರು ತರಬೇತಿ ಮುಗಿಸಿ ಇಲಾಖಾ‌ ತರಬೇತಿಗೆ ವರದಿ ಮಾಡಿಕೊಳ್ಳಲೆಂದು ಹಾಸನಕ್ಕೆ ಬರ್ತಿದ್ದರು. ಐಪಿಎಸ್ ವೃತ್ತಿ ಪ್ರಾರಂಭದ ದಿನವೇ ಸಾವನ್ನಪ್ಪಿದ್ದು ವಿಪರ್ಯಾಸ.

ಹರ್ಷಬರ್ಧನ್ ತಂದೆ ಮಧ್ಯಪ್ರದೇಶದಲ್ಲಿ ಎಡಿಸಿ ಆಗಿದ್ದು 2022 ರ ಯುಪಿಎಸ್ ಸಿ ಪರೀಕ್ಷೆಯಲ್ಲಿ 153 ನೇ ರಾಂಕ್ ನಲ್ಲಿ ಪಾಸ್ ಆಗಿ ಐಪಿಎಸ್ ಕೇಡರ್ ಪಡೆದಿದ್ದರು. ಕಲಿಯುವುದರಲ್ಲಿ ಪ್ರತಿಭಾವಂತ ವಿದ್ಯಾರ್ಥಿಯಾಗಿದ್ದು ಮೊದಲ ಪ್ರಯತ್ನದಲ್ಲೇ ಯುಪಿಎಸ್ ಸಿ ಪಾಸ್ ಮಾಡಿದ್ದರು.‌ ಅಪಘಾತದಲ್ಲಿ ತಲೆಗೆ ಏಟು ಬಿದ್ದಿದ್ದು ಸತತ ನಾಲ್ಕು ಗಂಟೆ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ. ಅಧಿಕಾರಿ ಸಾವಿನ ಬಗ್ಗೆ ಹಾಸನದ ಜನಪ್ರಿಯ ಆಸ್ಪತ್ರೆ ಮುಖ್ಯಸ್ಥ ಡಾ. ಬಸೀರ್ ಸ್ಪಷ್ಟನೆ ನೀಡಿದ್ದಾರೆ. 

ಅಪಘಾತದಲ್ಲಿ ಐಪಿಎಸ್ ಹರ್ಷ ಹಾಗೂ ಜೀಪು ಚಾಲಕ ಮಂಜೇಗೌಡ ಗಂಭೀರ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದರು. ಹರ್ಷ ಅವರಿಗೆ ತಲೆಗೆ ಗಂಭೀರ ಸ್ವರೂಪದ ಗಾಯವಾಗಿತ್ತು. ಮಿದುಳಿನಲ್ಲಿ ತೀವ್ರ ಸ್ವರೂಪದ ರಕ್ತಸ್ರಾವವಾಗಿತ್ತು. ಹಾಸನದ ಬೇರೆ ಬೇರೆ ಆಸ್ಪತ್ರೆಯ ವೈದ್ಯರು ಬಂದು ಚಿಕಿತ್ಸೆ ಉಸ್ತುವಾರಿ ವಹಿಸಿದ್ದರು. ಆದ್ರೆ ಚಿಕಿತ್ಸೆ ಫಲಕಾರಿಯಾಗದೆ ಹರ್ಷ ಮೃತಪಟ್ಟಿದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ.