ಕಾವಿ ಆರ್ಟ್ ಫೌಂಡೇಶನ್ ಹಾಗೂ ಆರ್ಟ್ ಮ್ಯಾಟರ್ಸ್ ಕರ್ನಾಟಕ ಯಕ್ಷಗಾನ ಅಕಾಡೆಮಿ ಯ ಸಹಕಾರದಲ್ಲಿ ಸಂಯೋಜಿಸಿದ “ಕರಾವಳಿಯ ಕಾವಿ ಕಲೆ ಮತ್ತು ಯಕ್ಷಗಾನ” ವಿಚಾರ ಸಂಕಿರಣವು ಜಯನಗರದ ಯುವಕ ಸಂಘದ ವಿವೇಕ ಆಡಿಟೋರಿ ಯಂನಲ್ಲಿ ಅಕಾಡೆಮಿಯ ರಿಜಿಸ್ಟಾರ್ ನಮೃತ ಎನ್.ರವರಿಂದ ಉದ್ಘಾಟನೆಗೊಂಡಿತು.“ಕರ್ನಾಟಕ ಕರಾವಳಿಯ ರಂಗಕಲೆಯಾದ ಯಕ್ಷಗಾನವು ವಿಶ್ವದೆಲ್ಲೆಡೆ ಮಾನ್ಯತೆಯನ್ನು ಪಡೆಯುತ್ತಿದೆ. ಈ ಭಾಗದ ಅಳಿವಿನಂಚಿನಲ್ಲಿರುವ ಕಾವಿ ಕಲೆ ಹಾಗೂ ಯಕ್ಷಗಾನದ ಅಂತರ್ ಶಿಸ್ತನ್ನು ಮರು ದಾಖಲಿಸುವ ಈ ವಿಚಾರ ಸಂಕಿರಣವು ಒಂದು ಮೈಲಿಗಲ್ಲೆ ನಿಸಲಿದೆ. ಯುವ ಪೀಳಿಗೆ ಈ ಕಲೆಯಲ್ಲಿ ಇನ್ನಷ್ಟು ತೊಡಗಿಕೊಳ್ಳಬೇಕು” ಎಂಬುದಾಗಿ ನಮೃತಾರವರು ಆಶಿಸಿದರು.
ಮುಖ್ಯ ಅತಿಥಿಗಳಾಗಿ ಯುವಕ ಸಂಘದ ಮಾರ್ಗದರ್ಶಕರಾದ ಜಿ. ಆರ್. ಜಗದೀಶ್, ಆಡಳಿತ ಮಂಡಳಿ ಸದಸ್ಯರಾದ ಡಾ. ಗೌರೀಶ್ ಜೋಷಿ, ಬೆಂಗಳೂರು ಆರ್ಟ್ ಗ್ಯಾಲರಿಯ ಸಂಯೋಜಕರಾದ ಶಿವಪ್ರಸಾದ್, ಕಾವಿ ಆರ್ಟ್ ಫೌಂಡೇಶನ್‌ನ ಅಧ್ಯಕ್ಷರಾದ ಹಾವಂಜೆ ಮಂಜುನಾಥ ರಾವ್ ಉಪಸ್ಥಿತರಿದ್ದರು.
ವಿಚಾರ ಸಂಕಿರಣದಲ್ಲಿ ಉಡುಪಿಯ ಪಿಪಿಸಿ ಕಾಲೇಜಿನ ಪ್ರಾಧ್ಯಾಪಕರಾಗಿರುವ ಡಾ. ಶಿವಕುಮಾರ್ ಅಳಗೋಡು “ಯಕ್ಷಗಾನ ಸಂಪ್ರದಾಯ ಹಾಗೂ ಹಿನ್ನೆಲೆ”, ಲೇಖಕರು ಮತ್ತು ವಿನ್ಯಾಸಗಾರರಾಗಿರುವ ಡಾ. ವಿಶ್ವನಾಥ ಎ.ಎಸ್.ರವರು “ಯಕ್ಷಗಾನ ವೇಷಭೂಷಣ ಮತ್ತು ಮುಖವರ್ಣಿಕೆ” ಹಾಗೂ ಕಾವಿ ಕಲಾವಿದರಾಗಿರುವ ಡಾ. ಜನಾರ್ದನ ರಾವ್ ಹಾವಂಜೆಯವರು “ ಕಾವಿ ಕಲೆ ಮತ್ತು ಯಕ್ಷಗಾನ ವಿನ್ಯಾಸದಲ್ಲಿನ ಸಾಮ್ಯತೆಗಳು” ಕುರಿತಾಗಿ ವಿಚಾರ ಮಂಡಿಸಿದರು.
ನ೦ತರ ಅತಿಥಿ ಕಲಾವಿದರಿಂದ ಕವಿ ದೇವದಾಸ ವಿರಚಿತ “ಶ್ರೀ ಕೃಷ್ಣ ಸಂಧಾನ” ಯಕ್ಷಗಾನ ತಾಳ ಮದ್ದಳೆ ನೆರವೇರಿತು. ಹಿಮ್ಮೇಳದಲ್ಲಿ ಭಾಗವತರಾಗಿ ಪ್ರಸನ್ನ ಹೆಗಡೆ ಮಾಗೋಡು, ಮದ್ದಳೆಯಲ್ಲಿ ವೆಂಕಟೇಶ್ ಹೆಗಡೆ, ಚಂಡೆಯಲ್ಲಿ ಕಾರ್ತಿಕ್ ಧಾರೇಶ್ವರ ಹಾಗೂ ಮುಮ್ಮೇಳದಲ್ಲಿ ಕೃಷ್ಣನಾಗಿ ಡಾ. ಶಿವಕುಮಾರ್ ಅಳಗೋಡು, ಕೌರವನಾಗಿ ಹಾವಂಜೆ ಮಂಜುನಾಥ ರಾವ್ ಹಾಗೂ ವಿದುರನಾಗಿ ಆದಿತ್ಯ ಹಲ್ಕೋಡು ಭಾಗವಹಿಸಿದ್ದರು.