ಭಾರತ ರತ್ನ’ ಅಟಲ್ ಬಿಹಾರಿ ವಾಜಪೇಯಿ ಅವರು ಭಾರತ ಕಂಡ ಅದ್ಭುತ ನಾಯಕ. ತಮ್ಮ ವಾಕ್ ಚಾತುರ್ಯ, ಕವಿತ್ವದ ಮೂಲಕ ಭಾರತೀಯರ ಮನದಲ್ಲಿ ಸ್ಥಾಯಿಯಾಗಿದ್ದಾರೆ. ಪ್ರಧಾನಿಯಾಗಿ ಅಟಲ್ ಅವರು ಅಂದುಕೊಂಡ ನಿರ್ಧಾರಗಳು ಇಂದು ಫಲ ನೀಡುತ್ತಿವೆ. ಅಷ್ಟರ ಮಟ್ಟಿಗೆ ಅವರು ತಮ್ಮ ನಾಯಕತ್ವವನ್ನು ಸಮರ್ಥವಾಗಿ ಪ್ರದರ್ಶಿಸಿದ್ದರು.
ಭಾರತೀಯ ಜನತಾ ಪಾರ್ಟಿಯು ಇಂದು ಉಚ್ಚ್ರಾಯ ಸ್ಥಿತಿಯಲ್ಲಿದೆ ಎಂದರೆ ಅಂದು ಅಟಲ್ ಬಿಹಾರಿ ವಾಜಪೇಯಿ ಹಾಗೂ ಲಾಲ್ ಕೃಷ್ಣ ಆಡ್ವಾಣಿ ಕೈಗೊಂಡ ನಿರಂತರ ಪ್ರಯತ್ನಗಳೇ ಕಾರಣ. ಇಬ್ಬರು ಸಂಸದರಿದ್ದ ಬಿಜೆಪಿಯನ್ನು ಅಧಿಕಾರದ ಗದ್ದುಗೆಗೆ ಏರಿಸುವಲ್ಲಿ ಅಟಲ್ ಅವರ ಕೊಡುಗೆ ಅಪಾರವಾಗಿದೆ. ರಾಜಕೀಯ ಕ್ಷಿತಿಜದಲ್ಲಿ ಅಟಲ್ ಅವರು ಅಜಾತಶತ್ರುವಾಗಿಯೇ ಉಳಿದರು. ಅಂಥ ಮಹಾನ್ ನಾಯಕ ಬದುಕಿದ್ದರೆ ಇಂದಿಗೆ 100 ವರ್ಷ ತುಂಬುತ್ತಿತ್ತು.
ಅಟಲ್ ಅವರ ಬಗ್ಗೆ ಗೊತ್ತಿಲ್ಲದ ಕೆಲವು ಸಂಗತಿಗಳು ಇಲ್ಲಿವೆ.
1.ಅಟಲ್ ಬಿಹಾರಿ ವಾಜಪೇಯಿ ಅವರು 1924 ಡಿಸೆಂಬರ್ 25ರಂದು ಬ್ರಾಹ್ಮಣ ಕುಟುಂಬದಲ್ಲಿ ಜನಿಸಿದರು. ಆದರೆ ಮಾಂಸಾಹಾರವನ್ನು ಇಷ್ಟಪಡುತ್ತಿದ್ದ ವಾಜಪೇಯಿ ಅವರಿಗೆ ಸಿಗಡಿ ನೆಚ್ಚಿನ ಆಹಾರವಾಗಿತ್ತು."!
2.ಭಾರತ ಬಿಟ್ಟು ತೊಲಗಿ ಚಳವಳಿಯಲ್ಲಿ ಭಾಗವಹಿಸಿದ್ದ ವಾಜಪೇಯಿ ಅವರು 23 ದಿನಗಳ ಕಾಲ ಜೈಲಿನಲ್ಲಿದ್ದರು.
3.ಅಟಲ್ ಬಿಹಾರ ವಾಜಪೇಯಿ ಅವರು ಅವಿವಾಹಿತರಾಗಿಯೇ ಉಳಿದರು. ಈ ಬಗ್ಗೆ ಅವರಿಗೆ ಕೇಳಿದಾಗ, ನಾನು ಎಷ್ಟೊಂದು ಬಿಜಿಯಾಗಿರುತ್ತಿದ್ದೆ ಎಂದರೆ, ಮದುವೆ ಬಗ್ಗೆ ಮರತೇ ಹೋಗಿತ್ತು ಎಂದು ಸಂದರ್ಶನವೊಂದರಲ್ಲಿ ಉತ್ತರ ನೀಡಿದ್ದರು.
4.ಉತ್ತರ ಪ್ರದೇಶ, ಮಧ್ಯ ಪ್ರದೇಶ, ನವದೆಹಲಿ ಮತ್ತ ಗುಜರಾತ್… ಹೀಗೆ ನಾಲ್ಕು ರಾಜ್ಯಗಳಿಂದ 6 ಬಾರಿ ಲೋಕಸಭೆ ಚುನಾವಣೆ ಗೆದ್ದ ಭಾರತದ ಏಕೈಕ ರಾಜಕಾರಣಿ ಎಂಬ ಕೀರ್ತಿಗೆ ಅಟಲ್ ಬಿಹಾರಿ ವಾಜಪೇಯಿ ಅವರು ಪಾತ್ರರಾಗಿದ್ದಾರೆ.
5.ಅಟಲ್ ಬಿಹಾರಿ ವಾಜಪೇಯಿ ಅವರು 47 ವರ್ಷಗಳ ಸಂಸತ್ ಸದಸ್ಯರಾಗಿದ್ದರು. ಲೋಕಸಭೆಗೆ 11 ಬಾರಿ ಆಯ್ಕೆಯಾದರೆ, ರಾಜ್ಯಸಭೆಗೆ ಎರಡು ಬಾರಿ ಆಯ್ಕೆಯಾಗಿದ್ದರು. ಅಂದರೆ, ತಮ್ಮ ಜೀವಿತಾವಧಿಯ ಬಹುತೇಕ ಸಮಯವನ್ನು ಸಂಸದಪಟುವಾಗಿಯೇ ಕಳೆದಿದ್ದಾರೆ.
6.ವಿಶ್ವ ಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ಅಟಲ್ ಬಿಹಾರಿ ವಾಜಪೇಯಿ ಅವರು ಹಿಂದಿಯಲ್ಲಿ ಭಾಷಣ ಮಾಡಿದ್ದರು. ಈ ರೀತಿಯಲ್ಲಿ ಹಿಂದಿಯಲ್ಲಿ ಭಾಷಣ ಮಾಡಿದ ಭಾರತದ ಮೊದಲ ರಾಜಕಾರಣಿಯಾಗಿದ್ದಾರೆ ಅವರು.
7.ಅಟಲ್ ಬಿಹಾರಿ ವಾಜಪೇಯಿ ಅವರು ಪ್ರಧಾನಿಯಾಗಿದ್ದಾಗ ರಾಜಸ್ಥಾನದ ಪೋಖ್ರಣ್‌ನಲ್ಲಿ ಯಶಸ್ವಿಯಾಗಿ ಪರಮಾಣು ಪರೀಕ್ಷೆಯನ್ನು ಕೈಗೊಂಡಿದ್ದರು. ಈ ಕಾರ್ಯಾಚರಣೆಗೆ ಅವರು ಶಕ್ತಿ ಎಂದು ಹೆಸರಿಟ್ಟಿದ್ದರು.
8.2009ರಲ್ಲಿ ಅಟಲ್ ಬಿಹಾರಿ ವಾಜಪೇಯಿ ಅವರು ಪಾರ್ಶ್ವವಾಯುವಿಗೆ ತುತ್ತಾದರು. ಬಳಿಕ ಅವರ ಮಾತು ನಿಂತು ಹೋಯಿತು. ಚಲನೆಯನ್ನೂ ಕಳೆದುಕೊಂಡರು.
9.ಬಾಲ್ಯದಿಂದಲೂ ಅಟಲ್ ಅವರು ಕವಿತೆಗಳತ್ತ ಆಕರ್ಷಿತರಾಗಿದ್ದರು. ಅವರು ಹತ್ತನೇ ತರಗತಿಯಲ್ಲಿದ್ದಾಗಲೇ ತಮ್ಮ ಮೊದಲ ಕವಿತೆಯನ್ನು ಬರೆದಿದ್ದರು.
10.ಅಟಲ್ ಬಿಹಾರಿ ವಾಜಪೇಯಿ ಅವರು ಭಾರತೀಯ ಜನಸಂಘ ನಾಯಕ ಶಾಮಪ್ರಸಾದ್ ಮುಖರ್ಜಿ ಅವರ ನಿಕಟ ಅನುಯಾಯಿಯಾಗಿದ್ದರು.
ಆರೆಸ್ಸೆಸ್ ಪೂರ್ಣಕಾಲಿಕ ಪ್ರಚಾರಕ:-
ಅಟಲ್ ಅವರು ಹಿಂದಿ, ಇಂಗ್ಲಿಷ್ ಮತ್ತು ಸಂಸ್ಕೃತ ಭಾಷೆಯಲ್ಲಿ ಪದವಿ ಪಡೆದ ನಂತರ ಅವರು ರಾಜನೀತಿ ಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿಯನ್ನು ಪಡೆದಿದ್ದು, ಬಾಲ್ಯದಲ್ಲಿಯೇ ಆರ್.ಎಸ್.ಎಸ್. ಪ್ರಭಾವಕ್ಕೆ ಒಳಗಾದ ವಾಜಪೇಯಿ ಒಬ್ಬ ಪೂರ್ಣಕಾಲಿಕ ಪ್ರಚಾರಕರಾಗಿ ದುಡಿದರು. ದೀನ ದಯಾಳ್ ಉಪಾಧ್ಯಾಯ ಮತ್ತು ಶ್ಯಾಮಪ್ರಸಾದ ಮುಖರ್ಜಿ ಅವರ ದಟ್ಟವಾದ ಪ್ರಭಾವಕ್ಕೆ ಒಳಗಾಗಿ ಜನಸಂಘ ಸೇರಿದರು. ಬಹುಕಾಲ ಪತ್ರಕರ್ತರಾಗಿ ದುಡಿದರು. ಪಾಂಚಜನ್ಯ ಮತ್ತು ರಾಷ್ಟ್ರಧರ್ಮ ಹಿಂದಿ ಪತ್ರಿಕೆಗಳಲ್ಲಿ ಅವರ ಪ್ರಖರ ಲೇಖನ ಮತ್ತು ಕವಿತೆಗಳು ಭಾರಿ ಜನಪ್ರಿಯ ಆಗಿದ್ದವು.
ವಿದೇಶಾಂಗ ವ್ಯವಹಾರಗಳ ಸಚಿವ
1977ರಲ್ಲಿ ಮೊರಾರ್ಜಿ ದೇಸಾಯಿ ಪ್ರಧಾನಿ ಆದರು. ಅವರ ಸಂಪುಟದಲ್ಲಿ ವಾಜಪೇಯಿ ವಿದೇಶಾಂಗ ಸಚಿವರಾಗಿ ಭಾರಿ ಜನಪ್ರಿಯರಾದರು. ಅವರ ಎರಡು ವರ್ಷಗಳ ಅವಧಿಯು ಅತ್ಯಂತ ಸ್ಮರಣೀಯವಾಗಿದೆ. ಅದೇ ಹೊತ್ತಲ್ಲಿ ಅವರು ವಿಶ್ವಸಂಸ್ಥೆಯ ಜನರಲ್ ಅಸೆಂಬ್ಲಿಯಲ್ಲಿ ಹಿಂದಿ ಭಾಷಣ ಮಾಡಿ ಖ್ಯಾತರಾದರು.ಇಂದಿಗೂ ಅವರ ಭಾಷಣ ವಿಶ್ವ ಸಂಸ್ಥೆಯಲ್ಲಿ ಚಿರಸ್ಥಾಯಿಯಾಗಿದೆ.
ಅಟಲ್ ಯುಗಾಂತ್ಯ
2009ರಲ್ಲಿ ವಾಜಪೇಯಿ ಸಕ್ರಿಯ ರಾಜಕಾರಣದಿಂದ ನಿವೃತ್ತರಾದರು. 2018ರಲ್ಲಿ ನಮ್ಮನ್ನು ಬಿಟ್ಟು ಹೋದರೂ ಅವರ ನೆನಪನ್ನು ನಾವೆಲ್ಲರೂ ರಾಷ್ಟ್ರೀಯ ಸುಶಾಸನ ದೀನವಾಗಿ ನೆನಪು ಮಾಡುತ್ತಿದ್ದೇವೆ.
ಅಟಲ್ ಗೆ ಅಟಲ್ ಸಾಟಿ ಅವರು ನಿಜವಾದ ಭಾರತ ರತ್ನ ವಾಗಿದ್ದಾರೆ.
~ರಾಘವೇಂದ್ರ ಪ್ರಭು, ಕವಾ೯ಲು