ವಿದೇಶದ ಮಣ್ಣಿನಲ್ಲಿ ಪ್ರಥಮ ಬಾರಿಗೆ ಯಕ್ಷಗಾನದ ಸೀಮೋಲ್ಲಂಘನಗೈದ ಐತಿಹಾಸಿಕ ದಾಖಲೆಯ ಕೋಟದ ಸಾಲಿಗ್ರಾಮ ಮಕ್ಕಳ ಮೇಳದ ಸುವರ್ಣ ಪರ್ವದ ಐದನೆಯ ಕಾರ್ಯಕ್ರಮ ‘ಸುವರ್ಣ ಸಮ್ಮಿಲನ-50’ ಕಾರ್ಯಕ್ರಮವು ಡಿಸೆಂಬರ್ 25ರ ಬುಧವಾರ ತೆಕ್ಕಟ್ಟೆಯ ಯಶಸ್ವೀ ಕಲಾವೃಂದದ ನೆರವಿನೊಂದಿಗೆ ಹಯಗ್ರೀವ ಸಭಾ ಮಂಟಪದಲ್ಲಿ ಬೆಳಿಗ್ಗೆ 10 ರಿಂದ ನಡೆಯಲಿದೆ.
ಮಕ್ಕಳ ಮೇಳದ50 ವರ್ಷಗಳ ಹಿರಿಯ ಕಿರಿಯ ವಿದ್ಯಾರ್ಥಿಗಳು ಅವಿಸ್ಮರಣೀಯ ದಿನಕ್ಕೆ ಅಂದು ಜೊತೆಯಾಗಲಿದ್ದಾರೆ. ಮಕ್ಕಳ ಯಕ್ಷಗಾನ ಕ್ಷೇತ್ರದಲ್ಲಿ ಅನನ್ಯ ಸೇವೆ ಸಲ್ಲಿಸಿದ, ಯಕ್ಷ ಗುರು ಕೋಟದ ಕೆ. ನರಸಿಂಹ ತುಂಗ ಅವರನ್ನು ಸುವರ್ಣ ಸಂಭ್ರಮ ಪುರಸ್ಕಾರ ನೀಡಿ ಗೌರವಿಸಲಾಗುವುದು.
ಉದ್ಘಾಟನಾ ಕಾರ್ಯಕ್ರಮದಲ್ಲಿ ಕೋಟದ ಗೀತಾನಂದ ಫೌಂಡೇಶನ್‌ನ ಆನಂದ ಸಿ ಕುಂದರ್, ಕುಂದಾಪುರ ಆದರ್ಶ ಆಸ್ಪತ್ರೆಯ ವೈದ್ಯಕೀಯ ನಿರ್ದೇಶಕರಾದ ಆದರ್ಶ ಹೆಬ್ಬಾರ್, ಉಡುಪಿ ಯಕ್ಷಗಾನ ಕಲಾರಂಗದ ಮುರಳಿ ಕಡೆಕಾರ್, ಉಡುಪಿ ಕ.ಸಾ.ಪ. ಅಧ್ಯಕ್ಷ ನೀಲಾವರ ಸುರೇಂದ್ರ ಅಡಿಗ, ಯಶಸ್ವೀ ಕಲಾವೃಂದದ ಅಧ್ಯಕ್ಷ ಮಲ್ಯಾಡಿ ಸೀತಾರಾಮ ಶೆಟ್ಟಿ, ಸಾಲಿಗ್ರಾಮ ಮಕ್ಕಳ ಮೇಳದ ಸ್ಥಾಪಕ ನಿರ್ದೇಶಕ ರಾದ ಎಚ್. ಶ್ರೀಧರ ಹಂದೆ, ಮಕ್ಕಳ ಮೇಳ ಟ್ರಸ್ಟ್ನ ಅಧ್ಯಕ್ಷ ಬಲರಾಮ ಕಲ್ಕೂರ, ಕಾರ್ಯಾಧ್ಯಕ್ಷ ಕೆ ಮಹೇಶ ಉಡುಪ, ಉಪಾಧ್ಯಕ್ಷ ಜನಾರ್ದನ ಹಂದೆ ಉಪಸ್ಥಿತರಿರಲಿದ್ದಾರೆ. ಎಚ್. ಕಾವ್ಯ ಹಂದೆ ನಿರೂಪಿಸಲಿದ್ದಾರೆ.
ಬೆಳಿಗ್ಗೆ 10ರಿಂದ ಸಂಜೆ 7ರವರೆಗೆ ಸುವರ್ಣ ಪುರಸ್ಕಾರ, ಗುರು ಶಿಷ್ಯ ಸಂವಾದ, ನೆನಪುಗಳ ಬುತ್ತಿ ಮತ್ತು ಮಕ್ಕಳ ಮೇಳದ ಹಿರಿ ಕಿರಿಯ ಕಲಾವಿದರಿಂದ ವೀರ ವೃಷಸೇನ, ಕೃಷ್ಣಾರ್ಜುನ, ಬಬ್ರುವಾಹನ ಪ್ರಸಂಗ ಗಳ ಯಕ್ಷ ರಸ ನಿಮಿಷಗಳು ಪ್ರದರ್ಶನಗೊಳ್ಳಲಿವೆ ಎಂದು ಮೇಳದ ಕಾರ್ಯದರ್ಶಿ ಸುಜಯೀಂದ್ರ ಹಂದೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.