ಮಾನಸಿಕ ಅಸ್ವಸ್ಥತೆಗೆ ವೈಜ್ಞಾನಿಕ ಕಾರಣಗಳನ್ನು ಅರ್ಥೈಸಿಕೊಳ್ಳಿ- ಶ್ರೀ ಗಿರೀಶ್ ಎಂ.ಎನ್
ಮಾನಸಿಕ ಅಸ್ವಸ್ಥತೆಯನ್ನು ಸಾಮಾನ್ಯವಾಗಿ ತಪ್ಪಾಗಿ ಅರ್ಥೈಸಿಕೊಳ್ಳಲಾಗುತ್ತದೆ, ಮಾನಸಿಕ ಆರೋಗ್ಯ ಜಾಗೃತಿ ಉತ್ತೇಜಿಸುವ ಮೂಲಕ ಮತ್ತು ವೈಜ್ಞಾನಿಕ ಕಾರಣಗಳ ಬಗ್ಗೆ ಶಿಕ್ಷಣ ನೀಡುವ ಮೂಲಕ ವಿದ್ಯಾರ್ಥಿಗಳು, ಯುವಜನರು ಜವಾಬ್ದಾರಿಯುತ ಹಾಗೂ ಮಹತ್ತರ ಪಾತ್ರ ವಹಿಸಬಹುದು ಎಂದು ಉಡುಪಿಯ ಫ್ರೀಲ್ಯಾನ್ಸರ್ ಮತ್ತು ಸಮಾಲೋಚನಾ ಮನಶಾಸ್ತ್ರಜ್ಞ ಶ್ರೀ ಗಿರೀಶ್ ಎಂ.ಎನ್ ಇವರು ವಿದ್ಯಾರ್ಥಿಗಳಿಗೆ ಮನವರಿಕೆ ಮಾಡಿದರು.
ಪೂರ್ಣಪ್ರಜ್ಞ ಕಾಲೇಜು ಉಡುಪಿಯ ಆಂತರಿಕ ಗುಣಮಟ್ಟ ಖಾತರಿ ಘಟಕದ ಮಾರ್ಗದರ್ಶನದಲ್ಲಿ ಮಾನವ ಹಕ್ಕುಗಳ ಸಂಘ ಹಾಗೂ ವಿದ್ಯಾರ್ಥಿ ಕ್ಷೇಮ ಪಾಲನ ಸಮಿತಿಯ ಜಂಟಿ ಆಶ್ರಯದಲ್ಲಿ ನಡೆದ "ಆರೋಗ್ಯಕರ ಮನಸ್ಸು - ಆಹ್ಲಾದಕರ ಜೀವನ" ಎನ್ನುವ ಮಾನಸಿಕ ಆರೋಗ್ಯ ಮಾಹಿತಿ ಕಾರ್ಯಕ್ರಮ ದಲ್ಲಿ ಶ್ರೀಯುತರು, ವಿದ್ಯಾರ್ಥಿಗಳು ಸಮಾಜಕ್ಕೆ ಕಂಟಕಪ್ರಾಯವಾಗುವ ಹಾಗೂ ತಮ್ಮ ಜೀವನಕ್ಕೆ ಹಾನಿಯಾಗುವ ದುಷ್ಚಟಗಳಿಂದ ದೂರವಿರಬೇಕು, ಮಾನಸಿಕ ಆರೋಗ್ಯದ ಕುರಿತು ಚಿಂತನೆ ನಡೆಸ ಬೇಕು, ಇತರರಿಗೆ ಇದರ ಕುರಿತು ಮಾಹಿತಿ ನೀಡುವಲ್ಲಿ ಸಾಮಾಜಿಕ ಜವಾಬ್ದಾರಿ ನಿರ್ವಹಿಸಿ ಎಂದು ಕರೆಕೊಟ್ಟರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ವಿದ್ಯಾರ್ಥಿ ಕ್ಷೇಮಪಾಲನಾ ಅಧಿಕಾರಿ ಡಾ ರಮೇಶ್ ಟಿಎಸ್ ಇವರು ಮಾನಸಿಕ ಆರೋಗ್ಯದ ಕಡೆಗೆ ಗಮನಹರಿಸಿ ಇತರರಿಗೂ ಇದರ ಕುರಿತು ವಿದ್ಯಾರ್ಥಿಗಳು ಜಾಗೃತಿ ಮೂಡಿ ಸಿದಲ್ಲಿ ಇಂತಹ ಕಾರ್ಯಕ್ರಮಗಳು ಸಾರ್ಥಕವಾಗುತ್ತವೆ ಎಂದು ಅಭಿಪ್ರಾಯಪಟ್ಟರು.
ಕಾಲೇಜು ಪ್ರಾಂಶುಪಾಲರಾದ ಡಾ ಡಾ ರಾಮು ಎಲ್, ಆಂತರಿಕ ಗುಣಮಟ್ಟ ಖಾತರಿ ಘಟಕದ ಡಾ. ವಿನಯ್ ಕುಮಾರ್, ಕಾರ್ಯಕ್ರಮ ಸಂಯೋಜಕರಾದ ವಿದ್ಯಾರ್ಥಿ ಕ್ಷೇಮ ಪಾಲನಾ ಅಧಿಕಾರಿ ಜಯಲಕ್ಷ್ಮಿ, ಮಾನವ ಹಕ್ಕು ಘಟಕದ ಸಂಯೋಜಕಿ ಶ್ರೀಮತಿ ಶಾಲಿನಿ, ಕಾಲೇಜು ಉಪನ್ಯಾಸಕರುಗಳು, ವಿದ್ಯಾರ್ಥಿ ಗಳು ಭಾಗವಹಿಸಿದ್ದರು. ವಿದ್ಯಾರ್ಥಿನಿ ಶ್ರದ್ಧಾ ಕಾರ್ಯಕ್ರಮ ನಿರ್ವಹಿಸಿ ವಂದಿಸಿದರು.