ಪರ್ಯಾಯ ಪುತ್ತಿಗೆ ಶ್ರೀಕೃಷ್ಣಮಠ ಆಶ್ರಯದಲ್ಲಿ ವಿಶ್ವ ಗೀತಾ ಪರ್ಯಾಯದ ಬೃಹತ್ ಗೀತೋತ್ಸವ ಅಂಗವಾಗಿ ಡಿ.11ರಂದು ಗೀತಾ ಜಯಂತಿ ಮಹೋತ್ಸವ ನಡೆಯಲಿದೆ. ಬೆಳಿಗ್ಗೆ 9ರಿಂದ ರಥಬೀದಿಯಲ್ಲಿ ಗೀತಾ ಶೋಭಾಯಾತ್ರೆ ಬಳಿಕ 9.30ರಿಂದ ರಾಜಾಂಗಣದಲ್ಲಿ ಸಭಾ ಕಾರ್ಯಕ್ರಮ ನಡೆಯಲಿದೆ.
ಪರ್ಯಾಯ ಪುತ್ತಿಗೆ ಮಠಾಧೀಶ ಶ್ರೀ ಸುಗುಣೇಂದ್ರತೀರ್ಥ ಶ್ರೀಪಾದರು ಮತ್ತು ಕಿರಿಯ ಶ್ರೀ ಸುಶ್ರೀಂದ್ರ ತೀರ್ಥ ಶ್ರೀಪಾದರು ಸಾನ್ನಿಧ್ಯ ವಹಿಸಲಿದ್ದು ಕಾರ್ಯಕ್ರಮವನ್ನು ನವದೆಹಲಿಯ ಸ್ವಾಮಿ ನಾರಾಯಣ ರಿಸರ್ಚ್ ಇನ್ಸ್ಟಿಟ್ಯೂಟ್ ಮಹಾಮಹೋಪಾಧ್ಯಾಯ ಸಾಧು ಶ್ರೀ ಭದ್ರೇಶದಾಸ್ ಉದ್ಘಾಟಿಸುವರು.
ಅಭ್ಯಾಗತರಾಗಿ `ಮಹಾಭಾರತ' ಧಾರಾವಾಹಿಯ ಕೃಷ್ಣ ಪಾತ್ರಧಾರಿ ನಿತೀಶ್ ಭಾರದ್ವಾಜ್, ನಿರೂಪಕ ಮಾಸ್ಟರ್ ಆನಂದ್, ಉದ್ಯಮಿ ಭುವನೇಂದ್ರ ಕಿದಿಯೂರು ಮತ್ತು ಶತಾವಧಾನಿ ಡಾ. ರಾಮನಾಥ ಆಚಾರ್ಯ ಆಗಮಿಸುವರು.
ಈ ಸಂದರ್ಭದಲ್ಲಿ ಹೊರತರಲಾಗುವ ವಿಶೇಷ ಅಂಚೆಲಕೋಟೆಯನ್ನು ಮುಖ್ಯ ಪೋಸ್ಟ್ ಮಾಸ್ಟರ್ ಜನರಲ್ ಕರ್ನಾಟಕ ವೃತ್ತ ಎಸ್. ರಾಜೇಂದ್ರಕುಮಾರ್ ಬಿಡುಗಡೆಗೊಳಿಸುವರು.
ಬಳಿಕ ಸಹಸ್ರಕಂಠ ಗೀತಾ ಪಾರಾಯಣ, ವಿದುಷಿ ವೀಣಾ ಸಾಮಗ ನೇತೃತ್ವದ ರಾಧಾಕೃಷ್ಣ ನೃತ್ಯ ನಿಕೇತನ ಕಲಾವಿದರಿಂದ ಭಗವದ್ಗೀತಾ ನೃತ್ಯರೂಪಕ, ಸಂಜೆ ಹನುಮಂತನಗರ ಸರಕಾರಿ ಶಾಲಾ ಮಕ್ಕಳಿಂದ ಕಿಶೋರ ಯಕ್ಷ ಸಂಭ್ರಮ `ಅಭಿಮನ್ಯು ಕಾಳಗ' ಯಕ್ಷಗಾನ ನಡೆಯಲಿದೆ.
ಈ ಸಂದರ್ಭದಲ್ಲಿ ಗೀತಾ ಕಂಠಪಾಠ ಸ್ಪರ್ಧೆಯ ವಿಜೇತ ಶಾಲಾವಿದ್ಯಾರ್ಥಿಗಳಿಗೆ ಬಹುಮಾನ ನೀಡಲಾಗುವುದು ಎಂದು ಶ್ರೀಮಠದ ಪ್ರಕಟಣೆ ತಿಳಿಸಿದೆ.