Header Ads Widget

ರಂಗ ಶಿಕ್ಷಣದಿಂದ ಜಿಲ್ಲೆಯ ಮಕ್ಕಳ ಪ್ರತಿಭೆಗಳ ಅನಾವರಣ : ಶಾಸಕ ಯಶಪಾಲ್ ಸುವರ್ಣ ಅಭಿಮತ

 

ಉಡುಪಿ : ರಂಗಭೂಮಿ ಉಡುಪಿ ತನ್ನ ನಿರಂತರ ಚಟುವಟಿಕೆಗಳಿಂದ ಜಿಲ್ಲೆಯ ಅನೇಕ ರಂಗಕರ್ಮಿಗಳನ್ನು ನಾಡಿಗೆ ಪರಿಚಯಿಸಿದೆ. ಪ್ರಸ್ತುತ ಶಾಲಾ ಕಾಲೇಜುಗಳಲ್ಲಿ ಪ್ರಾರಂಭಿಸಿರುವ 'ರಂಗ ಶಿಕ್ಷಣ' ಅಭಿಯಾನದಿಂದ ಜಿಲ್ಲೆಯ ಮಕ್ಕಳ ಪ್ರತಿಭೆ ಅನಾವರಣಕ್ಕೆ ವೇದಿಕೆಯಾಗಲಿದೆ ಎಂದು ಉಡುಪಿ ಶಾಸಕ ಯಶಪಾಲ್ ಸುವರ್ಣ ತಿಳಿಸಿದರು.


ಅವರು ಶನಿವಾರ ಎಂಜಿಎo ಕಾಲೇಜಿನ ನೂತನ ರವೀಂದ್ರ ಮಂಟಪದಲ್ಲಿ ರಂಗಭೂಮಿ ಉಡುಪಿ ಪ್ರಾರಂಭಿಸಿರುವ ಶಾಲಾ ಕಾಲೇಜುಗಳಲ್ಲಿ 'ರಂಗ ಶಿಕ್ಷಣ' ತರಬೇತಿ ಪಡೆದ ಶಾಲಾ ಮಕ್ಕಳಿಂದ 'ಮಕ್ಕಳ ನಾಟಕೋತ್ಸವ ' ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.


ಯಕ್ಷಗಾನ ಕಲಾರಂಗದ ಮೂಲಕ ಜಿಲ್ಲೆಯಲ್ಲಿ ಈ ಹಿಂದೆ ಆರಂಭಿಸಿರುವ 'ಯಕ್ಷ ಶಿಕ್ಷಣ ' ಮೂಲಕ ಶಾಲಾ ಮಕ್ಕಳಿಗೆ ಯಕ್ಷಗಾನ ತರಬೇತಿ ಇಂದು ನಾಡಿಗೆ ಮಾದರಿಯಾಗಿದೆ. ಡಿಸೆಂಬರ್‌ನಲ್ಲಿ ನಡೆಯುವ ಕಿಶೋರ ಯಕ್ಷಗಾನ ಸಂಭ್ರಮ ಬಹು ಪ್ರಸಿದ್ಧಿ ಪಡೆದಿದೆ. ಈ ಮಾದರಿಯಲ್ಲಿಯೇ ರಂಗ ಶಿಕ್ಷಣ ಕೂಡಾ ಯಶಸ್ವಿಯಾಗುವುದರಲ್ಲಿ ಸಂಶಯವಿಲ್ಲ. ಈ ನಿಟ್ಟಿನಲ್ಲಿ ರಂಗಭೂಮಿ ಉಡುಪಿಯ ಪದಾಧಿಕಾರಿಗಳು ಅಭಿನಂದನಾರ್ಹರು ಎಂದು ಅವರು ಶ್ಲಾಘಿಸಿದರು.


ಮಾಜಿ ಶಾಸಕ ರಘುಪತಿ ಭಟ್ ಮಾತನಾಡಿ, ಯಕ್ಷಗಾನ ಕರಾವಳಿ ಜಿಲ್ಲೆಗಳಿಗೆ ಸೀಮಿತವಾಗಿದ್ದರೆ, ರಂಗಭೂಮಿಗೆ ಎಲ್ಲೆಯಿಲ್ಲ. ಈ ಅಭಿಯಾನವನ್ನು ರಾಜ್ಯದ ಎಲ್ಲಾ ೨೨೪ ವಿಧಾನಸಭಾ ಕ್ಷೇತ್ರಗಳಲ್ಲೂ ಹಮ್ಮಿಕೊಳ್ಳಬಹುದು. ಆದರೆ ಆರ್ಥಿಕ ಬೆಂಬಲಕ್ಕಾಗಿ ನಾಡಿನ ಮುಜರಾಯಿ ದೇವಾಲಯಗಳು, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಂತಹ ಸರಕಾರಿ ಇಲಾಖೆಗಳನ್ನು ಆಶ್ರಯಿಸಿದರೆ ಹೆಚ್ಚಿನ ಯಶಸ್ಸನ್ನು ಸಾಧಿಸಬಹುದು ಎಂದರು.


ರoಗಭೂಮಿ ಉಡುಪಿ ಅಧ್ಯಕ್ಷ ಡಾ.ತಲ್ಲೂರು ಶಿವರಾಮ ಶೆಟ್ಟಿ ಅವರು ಅಧ್ಯಕ್ಷತೆ ವಹಿಸಿ ಮಾತನಾಡಿ, ಯಕ್ಷಗಾನ, ರಂಗಭೂಮಿ ನಾಟಕಗಳಿಂದ ಮಕ್ಕಳ ಸರ್ವಾಂಗೀಣ ಅಭಿವ್ಥದ್ಧಿಯಾಗುವುದರಲ್ಲಿ ಸಂಶಯವಿಲ್ಲ. ಶಾಲೆಗಳಲ್ಲಿ ಯಕ್ಷಗಾನವನ್ನು ಕಲಿಸುವ ಮೂಲಕ ಭವಿಷ್ಯದಲ್ಲಿ ಯಕ್ಷಗಾನಕ್ಕೆ ಪ್ರೇಕ್ಷಕರು ಹಾಗೂ ಕಲಾವಿದರ ಕೊರತೆಯಾಗುವುದನ್ನು ತಪ್ಪಿಸಿದೆ. ಇದೇ ಮಾದರಿಯಲ್ಲಿ ರಂಗಭೂಮಿ ಶಿಕ್ಷಣದಿಂದ ಉತ್ತಮ ನಟರು, ನಾಟಕಾಸಕ್ತರು ಹುಟ್ಟಿಕೊಳ್ಳುವುದರಲ್ಲಿ ಸಂಶಯವಿಲ್ಲ. ಹೀಗಾಗಿ ಈ ಕಾರ್ಯಕ್ರಮ ಸಂಸ್ಥೆಯ ಅಭಿಮಾನ, ಗೌರವವನ್ನು ಹೆಚ್ಚಿಸಿದೆ. ಎಲ್ಲೆಡೆ ಹೆಚ್ಚಿನ ಪ್ರೋತ್ಸಾಹ ಸಿಗುತ್ತಿರುವುದು ಸಂತೋಷ ತಂದಿದೆ ಎಂದರು.


ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕಿ ಪೂರ್ಣಿಮಾ ಮಾತನಾಡಿ, ಮಕ್ಕಳಿಗೆ ಶಾಲಾ ಶಿಕ್ಷಣದ ಜೊತೆಗೆ ಅನ್ಯ ಕೌಶಲಗಳನ್ನು ಕಲಿಸುವುದು ಅವರ ಭವಿಷ್ಯದ ದೃಷ್ಟಿಯಿಂದ ಅತೀ ಅಗತ್ಯವಾಗಿದೆ. ಯಕ್ಷಗಾನ, ನಾಟಕ ತರಬೇತಿ, ಕ್ರೀಡೆ ಮೊದಲಾದ ವಿಭಾಗಗಳಲ್ಲಿ ಮಕ್ಕಳು ತೊಡಗಿಸಿಕೊಳ್ಳಲು ಹೆತ್ತವರು ಪ್ರೋತ್ಸಾಹಿಸಬೇಕು. ಬಾಲ್ಯದಲ್ಲಿಯೇ ಇಂತಹ ಉತ್ತಮ ತಳಪಾಯವನ್ನು ಒದಗಿಸಿದ್ದಲ್ಲಿ ಮಕ್ಕಳ ಭವಿಷ್ಯ ಭದ್ರವಾಗಲಿದೆ ಎಂದು ಅಭಿಪ್ರಾಯ ಪಟ್ಟರು.


ಕಾರ್ಯಕ್ರಮದಲ್ಲಿ ಎಂಜಿಎo ಕಾಲೇಜಿನ ಪ್ರಾಂಶುಪಾಲ ಪ್ರೊ.ಲಕ್ಷ್ಮಿ ನಾರಾಯಣ ಕಾರಂತ ಅವರು ಮಾತನಾಡಿ, ರಂಗಭೂಮಿ ನಿರಂತರ ಚಟುವಟಿಕೆಗಳಿಂದ ಎಂಜಿಎA ಕಾಲೇಜು ಇದೀಗ 'ಸಾಂಸ್ಕೃತಿಕ ಹಬ್ ' ಆಗಿ ಗುರುತಿಸಿಕೊಂಡಿದೆ. ಇದು ಕಾಲೇಜಿನ ಸರ್ವಾಂಗೀಣ ಪ್ರಗತಿಗೂ ಕಾರಣವಾಗಿದೆ ಎಂದರು.


ಉದ್ಯಮಿ ರಂಜನ್ ಕೆ. ಅವರು ರಂಗಭೂಮಿ ಉಡುಪಿ ಅಧ್ಯಕ್ಷ ಡಾ.ತಲ್ಲೂರು ಶಿವರಾಮ ಶೆಟ್ಟಿ ಸೇರಿದಂತೆ ಸಮರ್ಥ ಪದಾಧಿಕಾ ರಿಗಳ ತಂಡದ ಈ ಅಭಿಯಾನ ರಾಜ್ಯಕ್ಕೆ ಮಾದರಿಯಾಗಿದೆ ಎಂದು ಶ್ಲಾಘಿಸಿದರು.


ರಂಗಭೂಮಿ ಉಡುಪಿ ಉಪಾಧ್ಯಕ್ಷ ಎನ್.ರಾಜಗೋಪಾಲ್ ಬಲ್ಲಾಳ್ ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ತಮ್ಮ ಸಂಸ್ಥೆಯಲ್ಲಿ ರಂಗಶಿಕ್ಷಣ ಆರಂಭಿಸಿದ ಶಾಲಾ ಮುಖ್ಯಸ್ಥರನ್ನು ಗೌರವಿಸಲಾಯಿತು. ರಂಗಶಿಕ್ಷಣದ ಸಂಚಾಲಕ ಯು.ವಿದ್ಯಾವಂತ ಆಚಾರ್ಯ ಅವರು ಪ್ರಸ್ತಾವಿಕ ಮಾತುಗಳೊಂದಿಗೆ ಸ್ವಾಗತಿಸಿದರು. ಸಹ ಸಂಚಾಲಕ ರವಿರಾಜ್ ನಾಯಕ್ ಕಾರ್ಯಕ್ರಮ ನಿರೂಪಿಸಿ, ಪ್ರಧಾನ ಕಾರ್ಯದರ್ಶಿ ಪ್ರದೀಪ್‌ಚಂದ್ರ ಕುತ್ಪಾಡಿ ವಂದಿಸಿದರು.


ಶನಿವಾರ ನಡೆದ ಮಕ್ಕಳ ನಾಟಕೋತ್ಸವದಲ್ಲಿ ರಂಗ ಶಿಕ್ಷಣ ಪಡೆದ ೫ ಪ್ರೌಢಶಾಲೆಗಳ ಮಕ್ಕಳಿಂದ ೫ ನಾಟಕಗಳು ಪ್ರಸ್ತುತಿ ಗೊಂಡವು. ಡಿ.೨೮ರಂದು ಮತ್ತೆ ೭ ಶಾಲೆಗಳಿಂದ ನಾಟಕಗಳು ಪ್ರದರ್ಶನಗೊಳ್ಳಲಿವೆ. ಒಟ್ಟು ೧೨ ಶಾಲೆಗಳು ಈ ರಂಗಶಿಕ್ಷಣದಲ್ಲಿ ಪಾಲ್ಗೊಂಡಿವೆ.