ಉಡುಪಿ: ಇಂದು ಹಮ್ಮಿಕೊಳ್ಳಲಾದ "ಚಲೋ ಬೆಳಗಾವಿ" ಅಂಬೇಡ್ಕರ್ ಜಾಥಾ ಕಾರ್ಯಕ್ರಮಕ್ಕೆ ಸಂಬಂಧಿಸಿ ಪತ್ರಿಕಾಗೋಷ್ಠಿ ನಡೆಸಿ ಶಾಂತಿ ಕದಡುವ ವಿಡಿಯೋ ಮಾಡಿದ ಆರೋಪದಡಿ ಎಸ್ ಡಿ ಪಿ ಐ ಮುಖಂಡರ ವಿರುದ್ಧ ಉಡುಪಿ ಪೊಲೀಸ್ ಠಾಣೆಯಲ್ಲಿ ಸ್ವಯಂ ಪ್ರೇರಿತ ಪ್ರಕರಣ ದಾಖಲಾಗಿದೆ.
ಎಸ್ ಡಿಪಿಐ ಮುಖಂಡರಾದ ಭಾಸ್ಕರ ಪ್ರಸಾದ್, ಶಾಹೀದ್ ಅಲಿ, ಅಪ್ಪರ್ ಕೊಡ್ಲಿಪೇಟೆ, ರಿಯಾಝ್ ಕಡುಂಬು ಅವರು ಇಂದು ಉಡುಪಿಯಲ್ಲಿ ಪತ್ರಿಕಾಗೋಷ್ಠಿ ನಡೆಸಿ 'ನಾವು ಜಿಲ್ಲಾ ಪೊಲೀಸ್ ಅಧೀಕ್ಷಕರಿಗೆ ಆನಮತಿ ಕೇಳಿಲ್ಲ, ಕೇವಲ ಮಾಹಿತಿಯನ್ನು ನೀಡಿದ್ದು, ಅವರು ಬಂದೋಬಸ್ತ್ ಕೊಡದೇ ಇದ್ದಲ್ಲಿ ದೊಡ್ಡ ಮಟ್ಟದಲ್ಲಿ ಹೋರಾಟ ಮಾಡುತ್ತೇವೆ' ಎಂದು ಶಾಂತಿ ಕದಡುವ ವಿಡಿಯೋ ವೈರಲ್ ಮಾಡಿರುವುದಾಗಿ ದೂರಲಾಗಿದೆ.
ಇವರು ಸಾರ್ವಜನಿಕವಾಗಿ ಹೇಳಿಕೆಯನ್ನು ನೀಡಿ ಶಾಂತಿ-ಸುವ್ಯವಸ್ಥೆಯನ್ನು ಭಂಗ ತರುವಂತೆ ಪತ್ರಿಕಾಗೋಷ್ಠಿಯ ವಿಡಿಯೋವನ್ನು ಹರಿ ಬಿಟ್ಟು ಸಾರ್ವಜನಿಕರಿಗೆ ಸುಳ್ಳು ಮಾಹಿತಿ ನೀಡಿ ಗಲಭೆ-ಗೊಂದಲ ಉಂಟು ಮಾಡುವಂತೆ ಮಾಡಲು ಪ್ರಚೋದನೆ ನೀಡಿರುವುದು ಕಂಡು ಬಂದಿದೆ ಎಂದು ದೂರದಲ್ಲಿ ತಿಳಿಸಲಾಗಿದೆ.
ಅದರಂತೆ ಆರೋಪಿಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕೆಂದು ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಪೊಲೀಸ್ ಉಪನಿರೀಕ್ಷಕ ನೀಡಿದ ದೂರಿನಂತೆ ಬಿಎನ್ ಎಸ್ ಯು/ಎಸ್ 189, 62, 353(2) ರಂತೆ ಪ್ರಕರಣ ದಾಖಲಿಸಲಾಗಿದೆ ಎಂದು ತಿಳಿದು ಬಂದಿದೆ