Header Ads Widget

ಗುರು ಇಲ್ಲದೆ ವಿದ್ಯೆ ಕಲಿತು ಗುರಿ ಸಾಧಿಸಿದ ಗಾರುಡಿಗ~ ರಾಜೇಶ್ ಭಟ್ ಪಣಿಯಾಡಿ

ಜಗತ್ತನ್ನೇ ಬೆರಗುಗೊಳಿಸುವ ಚಾಕ್ಷುಷೀ  ವಿದ್ಯಾ ಪರಿಣಿತ... ಸೃಜನಶೀಲ ಕಲಾ ಪ್ರಾಕಾರಗಳ ಕರಗತ ಮಾಡಿಕೊಂಡ ಸರಳ ಜೀವನದ ಸರಳ ವ್ಯಕ್ತಿ.. ದೇವಳಗಳ ನಗರಿ ಕೃಷ್ಣನೂರು ಉಡುಪಿಯ  ಸಮೀಪ    ಸುಮನಸಿನ ಸಮಬಾಳ್ವೆಯ ಸುಮಗಳಂತಿರುವ  ಸುಂದರ ಕುಟುಂಬದ ಕುಡಿಗಳೊಂದಿಗೆ ಹರ್ಷದ ಮುಂದಿನ ಹಸಿರು ತಾಣದಲ್ಲಿ ಮನೆ ಮಾಡಿಕೊಂಡು  ಸದಾ ಹರುಷದಿಂದ ನೆಲೆನಿಂತು  ಎಲ್ಲರೊಳಗೆ ಒಂದಾಗಿ ಆತ್ಮೀಯತೆಯಿಂದ ಬೆರೆಯುತ್ತ ತಾನೊಬ್ಬ ಅಂತರ್ ರಾಷ್ಟ್ರೀಯ ಮಟ್ಟದ ಜಾಧೂ ಕಲಾವಿದ ಎಂಬ ಒಂದಿಷ್ಟೂ ಗರ್ವವಿಲ್ಲದೆ ಸರಳ ಸುಖೀ ಜೀವನ ನಡೆಸುತ್ತ  ಬಂದಿರುವ ಶಂಕರ ನಾರಾಯಣ ಭಟ್  ನಾಮಾಂಕಿತ 

ಗುಣ ಸಂಪನ್ನ ಪ್ರೊಫೆಸರ್ ಶಂಕರ್...  ಇವರು ನಮ್ಮ ಒಡನಾಟದಲ್ಲಿರುವುದು ನಮಗದು ಅತೀವ ಹೆಮ್ಮೆಯ ವಿಷಯ ಅಲ್ಲವೇ... ಹಠ ಸಾಧನೆ ಹೊಸ ಕಲ್ಪನೆ ಅವರಿಗೆ ಬಾಳ ಪಯಣದ ದಾರಿದೀಪ. ಈ ಕಲ್ಪನೆ ಸುರುವಾಗಿದ್ದೇ ಬೀದಿ ಬದಿಯಲ್ಲಿ... ಹೊತ್ತಿನ ಕೂಳಿಗಾಗಿ ಜೀವನ ಸವೆಸುತ್ತ ದೇಹವನ್ನು ದಂಡಿಸುತ್ತ ಪ್ರೇಕ್ಷಕರಿಗೆ ಖುಷಿ ಕೊಡುವ ಡೊಂಬರಾಟದವರನ್ನು ಕಂಡು- ಮತ್ತು ಅವರ ಚಾಕ ಚಕ್ಯತೆಯನ್ನು ಕಂಡು. 


ತನ್ನೂರು ಬೆಳ್ತಂಗಡಿಯಲ್ಲೇ ವಿದ್ಯಾರ್ಜನೆಯ ಸಂದರ್ಭದಲ್ಲಿ 10 ವರ್ಷದವನಾಗಿರುವಾಗಲೇ ಜಗದ ಸೋಜಿಗಗಳನ್ನು ಅಲ್ಲಿ ಇಲ್ಲಿ ಕಂಡು ಮನದ ಮೂಲೆಯಲ್ಲಿ ಕನಸು ಕಟ್ಟಿಕೊಂಡರು . ಆಗಲೇ ಜಗದ ವಿಸ್ಮಯಗಳು ಕಣ್ಣ ಮುಂದೆ ಹಾದು ಹೋಗಲಾರಂಭಿಸಿತ್ತು. ಕೂಡಲೇ ಇಂದ್ರಜಾಲ ಮಹೇಂದ್ರಜಾಲ ವಿದ್ಯಾರಹಸ್ಯ ಎಂಬ ಹೊತ್ತಗೆ ಕೈ ಸೇರಿತ್ತು. ಆದರೆ ಪ್ರಯೋಗ ಮಾತ್ರ ಕೈ ತಪ್ಪಿ ಅಪ್ಪ ಅಮ್ಮನ ಮುಂದೆ ನಗೆ ಪಾಟಲಾಗಿದ್ದಂತೂ ಸುಳ್ಳಲ್ಲ.  ನಡೆಯುವಾಗ ಎಡವುದು ಸಹಜ... 


ನಂತರ  ಸಾವರಿಸಿಕೊಂಡು ಇವರು ಮುಂದೆ ನಡೆದದ್ದೇ ನಡೆದದ್ದು... ಹಿಂದೆ ನೋಡಲೇ ಇಲ್ಲ...ಆ ಕಾಲದ ಜಾದೂ ಲೋಕದ ತಾರೆಗಳಾದ  ಪಿ. ಸಿ. ಸರ್ಕಾರ್, ಗೋಗಿಯಾ ಪಾಷಾ, ಕೆ. ಲಾಲ್ ಮುಂತಾದವರ ಸಮಾನಾಂತರಕ್ಕೆ ಏರುವ ಕನಸು ಕಣ್ಣ ಮುಂದಿತ್ತು. ಆ ಆಶಯಗಳ ಗೋಪುರಕ್ಕೆ ಪಂಚಾಂಗ ಕಟ್ಟಲು ಸಹಕರಿಸಿದವರು ಮಾನ್ಯ ಕೆ. ಕೆ. ಪೈಯವರು... ಆವತ್ತು ನೀಡಿದ 50000 ರೂಗಳ ಸಾಲ ಮತ್ತು ಬೆಂಗಳೂರಿನ ಎಸ್ಕೆ ಅಪ್ಪಯ್ಯರವರು ಅದೇ ಬೆಲೆಗೆ ನೀಡಿದ ಸಕಲ ಸಲಕರಣೆಗಳು ಸಾಧನೆಯ ಶಿಖರ ಏರಲು ಮೆಟ್ಟಲಾಯಿತು. ದೇಶದ ತುಂಬೆಲ್ಲ ಶಂಕರರ ಮಾಯಾಜಾಲ ಹರಡಿ ಕೊಂಡಿತು. ಒಂದಷ್ಟು ಹೆಸರು ಪಡೆಯಿತು. 


ಅದರ ಪ್ರಭೆ ದೇಶದ ಗಡಿ ದಾಟಿ ಗಲ್ಫ್ ರಾಷ್ಟ್ರಗಳಿಗೂ ಹಬ್ಬಿತು. ಆಗ ಇವರಿಗೆ ಸಾಥ್ ಕೊಟ್ಟದ್ದು ಅಪ್ಪನನ್ನು ಮೀರಿಸುವ ಚಾಣಾಕ್ಷತೆ ಹೊಂದಿದ್ದ ಪುಟ್ಟ ಬಾಲಕ, ಹೆಸರಿಗೆ ತಕ್ಕಂತೆ ತೇಜಸ್ಸನ್ನು ಹೊಂದಿದ್ದ ಮಗ ತೇಜಸ್ವಿ. ಅಪ್ಪ ಮಗನ ಹೆಸರು ಜಗತ್ತಿನ ಶ್ರೇಷ್ಟ ಜಾದೂಗಾರರಾದ ಡೇವಿಡ್ ಕಾಪರ್ ಫೀಲ್ಡ್ , ಡಗ್ ಹಾನಿಂಗ್, ಡೀನ್ ಗುನ್ನರ್ ಸನ್ ರಂತಹ ಘಟಾನುಘಟಿಗಳನ್ನೂ ತಲುಪಿತ್ತು. ಈ ಯಕ್ಷ ಗಂಧರ್ವ ವಿದ್ಯೆ ವಿಶ್ವದ ಕನಿಷ್ಟ 14 ದೇಶಗಳಲ್ಲಿ ಕಲಾಪ್ರದರ್ಶನ ನೀಡುವಲ್ಲಿ ಸಹಕಾರಿಯಾಯ್ತು. ಅಲ್ಲದೆ ತನ್ನ ನೆಲ ..ದಕ್ಷಿಣ ಕನ್ನಡ ಜಿಲ್ಲೆಗೆ ಸಮಗ್ರವಾಗಿ ಆಧುನಿಕ ಜಾದೂ ಕಲೆಯನ್ನು ಪರಿಚಯಿಸಿದ ಕೀರ್ತಿ ಅವರ ತಲೆಯ ಕಿರೀಟವನ್ನು ಅಲಂಕರಿಸಿತ್ತು. 


ಅಲ್ಲದೆ ನಮ್ಮ ರಾಜ್ಯದಲ್ಲಿ ನಮ್ಮ ನೆಲದಲ್ಲಿ ಮೂರು ಬಾರಿ 1994, 1997 ಹಾಗೂ 2001ರಲ್ಲಿ ಅಂತರ್ ರಾಷ್ಟ್ರೀಯ ಸಮ್ಮೇಳನವನ್ನು ಹಮ್ಮಿಕೊಂಡು ಭಾರತದ ಕೀರ್ತಿಯನ್ನು ಜಗತ್ತಿಗೆ ಹರಡಿಸುವಲ್ಲಿ ಯಶಸ್ವಿಯಾದರು ಶಂಕರ್. ಜಗತ್ತಿನ ಶ್ರೇಷ್ಟ  ಜಾದೂ ಕಲಾವಿದರು ಉಡುಪಿಗೆ ಬಂದಿಳಿದಾಗ ಜನ ಸಾಗರಕ್ಕೆ ಎಲ್ಲಿಲ್ಲದ ಹರ್ಷ. 


ಅಲ್ಲದೆ ಆ ಸಮೇಳನಗಳ ಮೂಲಕ ಅವರ ಕನಸಿನ ಕೂಸಿಗೂ  ಗಿಲಿಗಿಲಿ ಎಂಬ ಹೆಸರು ಖಾಯಂ ಆಯ್ತು. ಈ ಮಧ್ಯೆ ಮಾನ್ಯ ಕೆ.ಕೆ.ಪೈಯವರ ಅನುಜ್ಞೆ ಯಂತೆ 27 ವರ್ಷ ಸಿಂಡಿಕೇಟ್ ಬ್ಯಾಂಕ್ ನಲ್ಲಿ ವೃತ್ತಿಜೀವನಕ್ಕೆ ಕಾಲಿಟ್ಟು ಆಲ್ಲಿಯೂ ತನ್ನ ಕಲೆಯನ್ನು ಸಂಸ್ಥೆಯ ಸರ್ವತೋಮುಖ ಅಭಿವೃದ್ಧಿಗೆ ಬಳಸಿ ವಾಣಿಜ್ಯ ಕ್ಷೇತ್ರದಲ್ಲಿ ಸೈ ಎನಿಸಿಕೊಂಡರು. ಹೀಗೆ ಇವರ ಅವಿಷ್ಕಾರಗಳ ಪಟ್ಟಿಯಲ್ಲಿ ಹಲವು ಸೋಜಿಗಗಳು ವಿಸ್ಮಯಗಳು, ಸಾಮಾಜಿಕ ಕಳಕಳಿಗಳು ಮನೆ ಮಾಡಿಕೊಂಡವು.  1965 ರಲ್ಲಿ ಕೋವಿಯಿಂದ ಹಾರಿಸಿದ ಗುಂಡನ್ನು ಕೈಯಲ್ಲಿ ಹಿಡಿದು ಪೋಲೀಸ್ ಆಫೀಸರ್ ರನ್ನೇ ದಂಗು ಬಡಿಸಿ ದ್ದರು ಶಂಕರ್. 


ಪಿ. ಸಿ. ಸರ್ಕಾರ್ ನಿಂತ ರೈಲು ಬಂಡಿಯನ್ನು ಮಾಯ ಮಾಡಿದರೆ ನಮ್ಮ ಪ್ರೊಫೆಸರ್ ಕೃಪ್ಣ ಮಠದ ಆನೆ ಲಕ್ಷ್ಮೀಶನನ್ನೇ ಕಿಕ್ಕಿರಿದ ಜನ ಸಾಗರದ ಮುಂದೆ ಮಾಯ ಮಾಡಿದ್ದು   ದಂಗಾದ ಶೀರೂರು ಸ್ವಾಮೀಜಿ ಯವರಿಗೆ ಲಕ್ಷ್ಮೀಶನನ್ನು ತಮ್ಮ ಆನೆ ಕಟ್ಟುವ ಸ್ಥಳದಲ್ಲಿ ಪ್ರತ್ಯಕ್ಷಗೊಳಿಸಿ ಬೆರಗು ಗೊಳಿಸಿ ಬಿಟ್ಟಿದ್ದರು. 


ಮಲ್ಪೆ ಸಾಗರ ತಟದಲ್ಲಿ ಇಂಡಿಯನ್ ರೋಪ್ ಟ್ರಿಕ್ಸ್ ತೋರಿಸಿ ಸಾಗರದೋಪಾದಿ ನೆರೆದ ಜನರ ಬಾಯಿ ಹಾಗು ಹುಬ್ಬೇರುವಂತೆ ಮಾಡಿದ್ದರು. ಯಕ್ಷಗಾನ ಪಾತ್ರ ಹಾಗೂ ತಾಳಮದ್ದಲೆಯಲ್ಲಿ ಅರ್ಥ ಹೇಳುತ್ತಿದ್ದ ಶಂಕರ್ ರವರು ಸರಳ ಮಂಚ ಶರಶಯ್ಯೆಯ ಭೀಷ್ಮ ನನ್ನು ನಿಜ ಬಾಣಗಳ ಸಹಿತ ತೋರಿಸಿ ತೆಗೆದು ಇಂದ್ರ ಜಾಲದ ಪ್ರಕ್ರಿಯೆಯನ್ನು ಯಕ್ಷಗಾನ ದಲ್ಲಿ ಅಳವಡಿಸಿ ಕಲಾ ಪ್ರೇಮಿಗಳಿಂದ ಭಳಿರೇ ಎನಿಸಿಕೊಂಡರು.


ಸಾಮಾಜಿಕ ಪಿಡುಗನ್ನು ನಿವಾರಿಸುವ ನಿಟ್ಟಿನಲ್ಲಿ ಮದ್ಯವರ್ಜನೆಗೆ ಜಾಧೂವನ್ನು ಬಳಸಿ ಯಶಸ್ವಿಯಾಗಿ ಧರ್ಮಸ್ಥಳದ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆಯವರ ಪ್ರೀತಿಗೆ ಪಾತ್ರರಾದರು. ಚಿರಂತನ ಟ್ರಸ್ಟ್, ಕೊರೋನಾ ಸಮಯದಲ್ಲಿ ಪ್ರಾರಂಭಿಸಿದ ಯೂಟ್ಯೂಬ್ ಚಾನಲ್ ಕಾರ್ಯಕ್ರಮ ಶಂಕರರ ಸಾಮಾಜಿಕ ಕಳಕಳಿಗೆ ಸಾಕ್ಷಿಯಾಯ್ತು.  , ಸ್ಟ್ರೀಟ್ ಮೆಜಿ ಶ್ಯನ್ಸ್ ರ ಬಾಳಲ್ಲಿ ಹೊಸ ಪ್ರಭೆಯನ್ನು ತುಂಬಿದವರು ಇವರು ಮತ್ತು ಅವರಿಗಾಗಿ ಆಲ್ ಇಂಡಿಯಾ ಮೆಜಿ ಶ್ಯನ್ಸ್  ಕಾನ್ಫರೆನ್ಸ್ ನ್ನು ಹಮ್ಮಿಕೊಂಡದ್ದು ಅವರ ಮೇಲಿನ ಗೌರವಕ್ಕೆ ಹಿಡಿದ ಕೈಗನ್ನಡಿಯಾಯ್ತು. 


ಪ್ರೊ ಶಂಕರ್. : "ಎನ್ ಲೈಟನ್ ತ್ರೂ ಎಂಟರ್ಟೈನ್ಮೆಂಟ್ " ಎಂಬ  ಕಾರ್ಯಕ್ರಮದಡಿಯಲ್ಲಿ ಆಧ್ಯಾತ್ಮಕ್ಕೆ ಇಂದ್ರಜಾಲವನ್ನು ಪರಿಚಯಿಸಿ ದೇಶದ ತುಂಬ ಪ್ರದರ್ಶನ ನೀಡುತ್ತ ಜನರಲ್ಲಿ ಧನಾತ್ಮಕ ಬದಲಾವಣೆಗಳನ್ನು ತರುವ ಮೂಲಕ ಚಿರಪರಿಚಿತರಾದರು. ತಿಹಾರ್ ಜೈಲ್ ನಲ್ಲಿ ಮಾಡಿದ ಮಾಯಾ ಜಾಲದ ಗುಣಗಾನ ದೇಶದ ಶ್ರೇಷ್ಟ ಪತ್ರಿಕೆಗಳಲ್ಲೆಲ್ಲ ದೊಡ್ಡ ಅಕ್ಷರಗಳಲ್ಲಿ ರಾರಾಜಿಸಿದ್ದವು.


ಶ್ರೇಷ್ಠ ಚಿತ್ರ ನಿರ್ದೇಶಕ ಜಿ ವಿ ಅಯ್ಯರ್ ಅವರು ತಮ್ಮ ಚಿತ್ರದಲ್ಲಿ ಶಂಕರರ ಚಾಕಚಕ್ಯತೆಯನ್ನು ಅಳವಡಿಸಿಕೊಂಡಿದ್ದರು. ಶಂಕರ್ ರವರು ಚಿಕ್ಕಂದಿನಿಂದಲೂ ಹಲವಾರು ನಾಟಕಗಳಲ್ಲಿ ಅಭಿನಯಿಸಿ ಒಬ್ಬ ನಟ ನಾಗಿಯೂ ಗುರುತಿಸಿಕೊಂಡಿದ್ದರು.  ಅನಂತ್ ನಾಗ್ ಸುಂದರ ಕೃಷ್ಣ ಅರಸರಂತಹ ಪ್ರತಿಭಾನ್ವಿತ ಚಿತ್ರನಟ ರ ಜೊತೆ ಸಿನಿಮಾದಲ್ಲೂ ಅಭಿನಯಿಸಿ ಚಿತ್ರರಂಗಕ್ಕೂ ಲಗ್ಗೆ ಇಟ್ಟಿದ್ದರು.


 ಮಹಾರಾಜ ಕಾಲೇಜಿನಲ್ಲಿ ಓದುತ್ತಿದ್ದಾಗ ತಮ್ಮ ತುಂಟತನದ ಜೊತೆಗೆ ಜಾದುವಿನ ಪ್ರಯೋಗವನ್ನು  ಗೆಳೆಯರೊಂದಿಗೆ ಶಿಕ್ಷಕರೊಂದಿಗೆ ಹಾಸ್ಟೆಲ್ನ ವಾರ್ಡನ್ ರೊಂದಿಗೆ ಹಂಚಿಕೊಂಡದ್ದುಂಟು . ಇವರ ಮನಃಶಾಸ್ತ್ರ ಅಧ್ಯಯನ ಜಾದೂ ಜಗತ್ತಿನ ಹೊಸ ಅನ್ವೇಷಣೆಗೆ ಒಂದಷ್ಟು ಪುಷ್ಠಿ ನೀಡಿತ್ತು.


ಅಂದು 2001 ರಲ್ಲಿ ಹಮ್ಮಿಕೊಂಡಿದ್ದ ಅಂತರ್ ರಾಷ್ಟ್ರೀಯ ಜಾದೂ ಸಮ್ಮೇಳನ ಸಾಕಷ್ಟು ಹೆಸರು ಮಾಡಿದ್ದೇನೋ ನಿಜ. ಆದರೆ ಅದಕ್ಕೆ ತಕ್ಕಂತೆ ಸಾಕಷ್ಟು ಧನ ಸಂಗ್ರಹ ಆಗದೆ ಇದ್ದಾಗ ತನ್ನ ನಿವೃತ್ತಿಗೆ ಸಂಬಂಧ ಪಟ್ಟ ಹಣವನ್ನು ವ್ಯಯಿಸಿದ್ದಲ್ಲದೆ ತನ್ನ ಮನೆಯನ್ನೂ ಅಡವಿಡುವ ಸಂದರ್ಭ ಎದುರಾ ದರೂ ಧೃತಿಗೆಡದೆ ಪರಿಸ್ಥಿತಿಯನ್ನು ಶಾಂತತೆಯಲ್ಲಿ ನಿಭಾಯಿಸಿದ ಛಲಗಾರ ಪ್ರೊ. ಶಂಕರ್.  ಆ ಒಂದು ಕಾರ್ಯಕ್ರಮವನ್ನು  ಡಾ. ಶಿವರಾಮ ಕಾರಂತರು ಆರೋಗ್ಯ ಹದಗೆಟ್ಟಿದ್ದರೂ ಕೂಡ ವೀಕ್ಷಿಸಿದ್ದರಂತೆ... ಪ್ರೊ ಶಂಕರ್ ಹೀಗೆ ಕುಶಲೋಪರಿ ಮಾತನಾಡುತ್ತಾ ನಿಮಗೆ ಆಯಾಸವಾಗಿರಬಹುದು ಎಂದಾಗ ಕಾರಂತರು " ದೇಹಕ್ಕೆ ಆಯಾಸವಾದರೂ ಮನಸ್ಸಿಗೆ ತುಂಬ ಖುಷಿ ಕೊಟ್ಟ ಕಾರ್ಯಕ್ರಮವಪ್ಪಾ " ಎಂದರಂತೆ. 


ಅಲ್ಲದೆ ಈ ಬಗ್ಗೆ ಶಂಕರ್ ಒಂದಷ್ಟು ಸಾಲಮಾಡಿದ್ದಾರೆ ಎಂದು ತಿಳಿದವರೇ ಅವರನ್ನು ಮನೆಗೆ ಕರೆಸಿ ತನಗೆ ಬಂದ ಪೇಟವನ್ನು ಅವರಿಗೆ ತೊಡಿಸಿ ಇದು ನಿನ್ನ ತಲೆಯಲ್ಲಿದ್ದರೆ ಯೇ ಚೆನ್ನ ಎನ್ನುತ್ತ ತನ್ನ ಬ್ಯಾಂಕ್ ಖಾತೆಯಲ್ಲಿ ಉಳಿದದ್ದ ರೂಪಾಯಿ 5000 ದ ಮೊತ್ತವನ್ನು ಅವರಿಗೆ ಕೊಟ್ಟು ನಿಮ್ಮ ನಷ್ಟದಲ್ಲಿ ನನ್ನದೂ ಒಂದಿಷ್ಟು ಪಾಲಿರಲಿ ಎಂದಾಗ ಶಂಕರ್ ರವರು ಭಾವಪರವಶರಾಗಿದ್ದರಂತೆ. ಅದಕ್ಕೆ ಪ್ರತಿಯಾಗಿ ಶಂಕರ್ ರವರು ಕಾರಂತರ ಕೊನೆಯ ದಿನಗಳಲ್ಲಿ ಅವರ ಜೊತೆಗಿದ್ದು ಸಹಕರಿಸಿದ್ದರಂತೆ.


ಇನ್ನು ಶಂಕರ್ ರ  ವಂಶವೃಕ್ಷದ ರೆಂಬೆಕೊಂಬೆಗಳ ಹೆಸರುಗಳು ಕೇಳಲು ಬಲು ಅಂದ... ಲಕ್ಷ್ಮೀಶಂಕರ್,  ತೇಜಸ್ವಿ, ಯಶಸ್ವಿನಿ, ವರ್ಚಸ್ವಿ, ನಿಹಾರಿಕಾ,  ಭಾರವಿ ಇನ್ನೂ ಹಲವು ನೆನಪಿಗೆ ಬರುತ್ತಿಲ್ಲ... ಅಲ್ಲದೆ ಇವರ ಮನೆಯ ಆತಿಥ್ಯ ಇತರರಿಗೆ ಅದರ್ಶ.


ಇವರ ಇನ್ನೊಂದು ವಿಶೇಷತೆ ಎಂದರೆ ಯಾವುದೇ ಜಾದೂ ಕಾರ್ಯಕ್ರಮವಿರಲಿ ಇಡೀ ಸಂಸಾರವೇ ವೇದಿಕೆಯಲ್ಲಿ ಕಾಣಿಸಿಕೊಳ್ಳುತ್ತದೆ.  ಜಾದೂ ಲೋಕದಲ್ಲಿ ಈ ರೀತಿಯ ಅನುಬಂಧ ಬೇರೆಲ್ಲೂ ಕಾಣ ಸಿಗಲಿಕ್ಕಿಲ್ಲ ಎನ್ನುವುದು ನನ್ನ ಅನಿಸಿಕೆ.


ಹೀಗೆ ಇವರ ಯಶೋ ಗಾಥೆಗೆ ಕೊನೆ ಹುಡುಕುವುದು ಆಗದ ಮುಗಿಯದ ಮಾತು. ಭೂಮಿ ಅಗೆದಷ್ಟು ನೀರು, ಲೋಹವನ್ನು ತಿಕ್ಕಿದಷ್ಟು ಹೊಳಪು ಎಂಬಂತೆ ಶಂಕರ್ ರ ಕಥನ  ಬರೆದಷ್ಟು ಮುಗಿಯದ ಅಕ್ಷಯ ಪಾತ್ರೆ - ಸಾಧನೆಯ ಕಳಸ ತುಂಬ ತುಂಬಿ ತುಳುಕುತ್ತಿರುವ ಧಾನ್ಯಗಳಂತೆ  - ಬರೆಯಲು ಪದಗಳೇ ದೊರಕದು ನನ್ನ ಪುಸ್ತಕದ ಪುಟದಲ್ಲಿ ಇವರನ್ನು ಹೊಗಳಲು...


ಜಾದೂ ಲೋಕದಲ್ಲಿ ಹೊಸ ಕ್ರಾಂತಿಯ ಅಲೆಯನ್ನು ಎಬ್ಬಿಸಿಯೂ ಪ್ರಶಸ್ತಿಗಳ ಹಿಂದೆ ಹೋಗದೆ  ನಮ್ಮ ನೆಲದ ಮಣ್ಣಿಗೆ ಬೆಲೆ ತಂದುಕೊಟ್ಟ ಬೆಳ್ಳಿ ಕೂದಲಿನ ಸದಾ ನಗು ಮೊಗದ ಸೌಮ್ಯ ಸ್ವಭಾವದ ಹರೆಯ 74 ರಲ್ಲೂ 47ರ  ಸುಂದರ  ತರುಣನಂತಿರುವ ಮಹಾನ್ ಸಾಧಕನಿಗೆ 14.12.2024ರಂದು  ನಮ್ಮೂರ ಪ್ರೀತಿ ಪೂರ್ವಕ ಸನ್ಮಾನ... ಅವರ ಮುಂದಿನ ಜೀವನ ಪಯಣ ಸುಗಮ ಸುಖ ಪ್ರದವಾಗಿರಲಿ ಎನ್ನುವುದು ನಮ್ಮೆಲ್ಲರ ಆಶಯ.


ನನ್ನ ಮಸ್ತಕದ ಪುಸ್ತಕದಿಂದ ಆಯ್ದು ಬರೆದ ಕೆಲವು ಸಾಲುಗಳು~ ರಾಜೇಶ್ ಭಟ್ ಪಣಿಯಾಡಿ