ಉಡುಪಿಯ ಕಲ್ಪನಾ ಟಾಕೀಸ್ ನ ಮುಖ್ಯ ರಸ್ತೆಯಲ್ಲಿ ಮುಂಭಾಗದಲ್ಲಿ ಯುವಕನೊಬ್ಬ ಭೀಕರ ಮಾನಸಿಕ ಅಸ್ವಸ್ಥತೆಗೆ ಒಳಗಾಗಿ ಸಾರ್ವಜನಿಕರಲ್ಲಿ ಆತಂಕ ಮೂಡಿಸಿದ್ದು ರಾತ್ರಿಯ ಹೊತ್ತು ಭಯದ ವಾತಾವರಣ ಸೃಷ್ಟಿಸಿದ್ದ. ಮಾತನಾಡಿಸುವ ಸಂದರ್ಭದಲ್ಲಿ ಹಲ್ಲೆ ನಡೆಸಿ ತಪ್ಪಿಸಿ ಓಡಿ ಹೋಗಲು ಪ್ರಯತ್ನಿಸುತ್ತಿದ್ದ. ದುರಂತ ಅರಿತ ಸಾರ್ವಜನಿಕರು ಈ ಬಗ್ಗೆ ಪೊಲೀಸ್ ಇಲಾಖೆಗೆ ದೂರು ನೀಡಿದ್ದು, ಪೊಲೀಸರ ವಿನಂತಿಯ ಮೇರೆಗೆ ವಿಶು ಶೆಟ್ಟಿಯವರು ಬಂದು ಸಾರ್ವಜನಿಕರ ಸಹಾಯದಿಂದ ರಕ್ಷಿಸಿ ಬಾಳಿಗ ಆಸ್ಪತ್ರೆಗೆ ದಾಖಲಿಸುವ ಮುಖಾಂತರ ದುರಂತ ತಪ್ಪಿಸಿದ್ದಾರೆ.
ಯುವಕ ಸತಿಂದರ್ ಸಿಂಗ್ (35) ಕೊಲ್ಕತ್ತಾ ಮೂಲದವನೆಂದು ತಿಳಿಸಿದ್ದಾನೆ. ಮಾನಸಿಕ ಅಸ್ಥಿರತೆ ತುಂಬಾ ಜೋರಾಗಿದ್ದು ಈತ ಕಾರ್ಮಿಕನಾಗಿ ಬಂದಿರಬಹುದು ಎಂಬ ಸಂದೇಹವಿದೆ. ರಕ್ಷಣಾ ಸಮಯದಲ್ಲಿ ಕಬ್ಬಿಣದ ತುಂಡೊಂದನ್ನು ನುಂಗಲು ಹೋಗಿದ್ದು, ತಪ್ಪಿಸಲು ಹರ ಸಾಹಸ ಪಡಬೇಕಾಯಿತು. ಯುವಕನನ್ನು ವಾಹನದಲ್ಲಿ ಆಸ್ಪತ್ರೆಗೆ ಕರೆದುಕೊಂಡು ಹೋಗುವ ಸಮಯದಲ್ಲಿ ನನ್ನನ್ನು ಬಿಡಿ, ನಾನು ಆತ್ಮಹತ್ಯೆ ಮಾಡಿಕೊಳ್ಳುತ್ತೇನೆ. ನಾನು ಆತ್ಮಹತ್ಯೆ ಮಾಡಿಕೊಳ್ಳಲು ಬಂದಿದ್ದೇನೆ ಎಂದು ಯುವಕ ಹೇಳುತ್ತಿದ್ದ. ಸಂಬಂಧಿಕರು ಯಾರಾದರೂ ಇದ್ದಲ್ಲಿ ಬಾಳಿಗಾ ಆಸ್ಪತ್ರೆ ಸಂಪರ್ಕಿಸುವಂತೆ ಕೋರಲಾಗಿದೆ.
ರಕ್ಷಣಾ ಸಮಯ ಪೊಲೀಸ್ ಹೆಚ್ ಸಿ ರಾಜೇಶ್, ರಿಕ್ಷಾ ಚಾಲಕ ಮಂಜುನಾಥ್, ಶ್ರೀರಾಮ ಹಾಗೂ ಸಾರ್ವಜನಿಕರು ಸಹಕರಿಸಿದ್ದಾರೆ.