ಬೆಂಗಳೂರಿನ ಭರತ ನೃತ್ಯ ಸಂಗೀತಾ ಅಕಾಡೆಮಿ ಮತ್ತು ಮೈಸೂರಿನ ನೂಪುರ ಕಲಾವಿದರು ಸಾಂಸ್ಕೃತಿಕ ಟ್ರಸ್ಟ್ ನ ಸಂಯುಕ್ತ ಆಶ್ರಯದಲ್ಲಿ ಎಂ.ಜಿ.ಎಂ. ಕಾಲೇಜಿನ ಸಹಯೋಗದೊಂದಿಗೆ ಎರಡು ದಿನಗಳ “ನೃತ್ಯ ಮತ್ತು ಪ್ರದರ್ಶನ ಕಲೆಗಳ ರಾಷ್ಟ್ರೀಯ ಸಮ್ಮೇಳನ”ವನ್ನು ಇದೇ ಡಿ. 14 ಮತ್ತು 15 ರಂದು ಉಡುಪಿ ಎಂಜಿಎಂ ಕಾಲೇಜಿನ ರವೀಂದ್ರ ಮಂಟಪದಲ್ಲಿ ಆಯೋಜಿಸಲಾಗಿದೆ ಎಂದು ನೂಪುರ ಕಲಾವಿದರು ಸಾಂಸ್ಕೃತಿಕ ಟ್ರಸ್ಟ್ ನ ಅಧ್ಯಕ್ಷ ಪ್ರೊ. ಕೆ. ರಾಮಮೂರ್ತಿ ರಾವ್ ತಿಳಿಸಿದರು.
ಉಡುಪಿಯಲ್ಲಿಂದು ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಡಿ. 14ರಂದು ಬೆಳಿಗ್ಗೆ 10 ಗಂಟೆಗೆ ಮೃದಂಗ ವಿದ್ವಾಂಸ ಅನೂರು ಅನಂತ ಕೃಷ್ಣ ಶರ್ಮ ಸಮ್ಮೇಳನವನ್ನು ಉದ್ಘಾಟಿಸಲಿದ್ದಾರೆ.
ಎಂ.ಜಿ.ಎಂ ಕಾಲೇಜಿನ ಪ್ರಾಶುಂಪಾಲ ಪ್ರೊ. ಲಕ್ಷ್ಮೀ ನಾರಾಯಣ ಕಾರಂತ ಅಧ್ಯಕ್ಷತೆ ವಹಿಸಲಿದ್ದಾರೆ. ಸಂಸದ ಕೋಟಾ ಶ್ರೀನಿವಾಸ ಪೂಜಾರಿ, ಕರ್ನಾಟಕ ಕರಾವಳಿ ನೃತ್ಯ ಕಲಾ ಪರಿಷತ್ತಿನ ಅಧ್ಯಕ್ಷ ಪ್ರವೀಣ್ ಯು.ಕೆ ಮುಖ್ಯ ಅತಿಥಿಗಳಾಗಿ ಆಗಮಿಸಲಿದ್ದಾರೆ ಎಂದರು.ಉದ್ಘಾಟನಾ ಸಮಾರಂಭದ ನಂತರ ವಿದ್ವಾನ್ ಆನೂರು ಅನಂತ ಕೃಷ್ಣ ಶರ್ಮ ಅವರು ಸಂಗೀತ ಮತ್ತು ನೃತ್ಯದಲ್ಲಿ ಮೃದಂಗದ ಪಾತ್ರ ಎಂಬ ವಿಷಯದ ಕುರಿತು, ಪ್ರೊ. ಕೆ. ರಾಮಮೂರ್ತಿ ರಾವ್ ಅವರು ಕಲಾವಿಮರ್ಶೆ ಎಂಬ ವಿಷಯ ಕುರಿತು, ಡಾ. ಪದ್ಮನಿ ಶ್ರೀಧರ್ ಅವರು ಸೂಳಾಧಿಗಳು ಎಂಬ ವಿಷಯದ ಕುರಿತು ಹಾಗೂ ದಾಮೋದರ ಪಂಡಿತ್ ಅವರು ಸಂಗೀತ ದರ್ಪಣದ್ ಬಗ್ಗೆ ಮಾತನಾಡಲಿದ್ದಾರೆ.
ಸಂಜೆ ನೃತ್ಯಾನಿಕೇತನ ಕೊಡವೂರಿನ ವಿದ್ವಾನ್ ಸುಧೀರ್ ಕೊಡವೂರು ಹಾಗೂ ಮಾನಸಿ ಸುಧೀರ್ ನೇತೃತ್ವದಲ್ಲಿ ನೃತ್ಯ ಪ್ರದರ್ಶನ ನಡೆಯಲಿದೆ ಎಂದು ಮಾಹಿತಿ ನೀಡಿದರು.
ಎರಡನೇಯ ದಿನ ಬೆಳಿಗ್ಗೆ ಯಕ್ಷಗಾನ ಮತ್ತು ಭರತ ನಾಟ್ಯದ ಸಾಮ್ಯತೆ ಹಾಗು ವೈಷಮ್ಯದ ಬಗ್ಗೆ ವಿದೂಷಿ ಸುಮಂಗಲ ರತ್ನಕರಾ ರಾವ್ ಅವರು ಪ್ರಧಾನ ಭಾಷಣ ಮಾಡಲಿದ್ದಾರೆ. ನಂತರ ಶಾಸ್ತ್ರೀಯ ಸಂಗೀತ ಮತ್ತು ನೃತ್ಯ ಕಲೆಗಳನ್ನು ಹೆಚ್ಚು ಜನಪ್ರಿಯತೆ ಗಳಿಸುವ ಬಗ್ಗೆ ವಿದೂಷಿ ಸುಮಂಗಲ ರತ್ನಕರಾ ರಾವ್ ಅವರ ನೇತೃತ್ವದಲ್ಲಿ ಸಮೂಹ ಚರ್ಚೆ ನಡೆಯಲಿದ್ದು, ನೃತ್ಯ ಗುರುಗಳಾದ ಚಂದ್ರಶೇಖರ್ ನಾವಡ, ವಿದ್ಯಾಶ್ರೀ ರಾಧಕೃಷ್ಣ, ದೀಪಕ್ ಕುಮಾರ್, ಸುಧೀರ್ ಕೊಡವೂರು ಭಾಗವಹಿಸಲಿದ್ದಾರೆ.
ಸಂಜೆ 5 ಗಂಟೆಗೆ ಸಮಾರೋಪ ಸಮಾರಂಭ ನಡೆಯಲಿದ್ದು, ಬೆಂಗಳೂರು ನಗರ ವಿಶ್ವವಿದ್ಯಾನಿಲಯದ ಮಾಜಿ ಕುಲ ಸಚಿವ ಪ್ರೊ. ಶಿವರಾಮ್ ಅಧ್ಯಕ್ಷತೆ ವಹಿಸಲಿದ್ದಾರೆ. ಬಳಿಕ ಬೆಂಗಳೂರಿನ ಕೌಸಲ್ಯ ನಿವಾಸ್ ತಂಡದವರಿಂದ “ಹನುಮಾನ್ ಚಾಲೀಸ್” ಮತ್ತು ಡಾ. ಶುಭಾರಾಣಿ ಬೋಳಾರ್ ಅವರ ಶಿಷ್ಯರಿಂದ “ಮೋಕ್ಷ” ಎಂಬ ನೃತ್ಯ ರೂಪಕದ ಪ್ರದರ್ಶನ ನಡೆಯಲಿದೆ ಎಂದರು.
ಸುದ್ದಿಗೋಷ್ಠಿಯಲ್ಲಿ ಬೆಂಗಳೂರಿನ ಭರತ ನೃತ್ಯ ಸಂಗೀತಾ ಅಕಾಡೆಮಿಯ ನಿರ್ದೇಶಕಿ ಡಾ. ಶುಭಾರಾಣಿ ಬೋಳಾರ್, ಎಂಜಿಎಂ ಕಾಲೇಜಿನ ಪ್ರಾಂಶುಪಾಲ ಪ್ರೊ. ಲಕ್ಷ್ಮೀನಾರಾಯಣ ಕಾರಂತ, ವೈಕುಂಠ ಬಾಳಿಗ ಕಾಲೇಜಿನ ನಿರ್ದೇಶಕಿ ಡಾ. ಕೆ. ನಿರ್ಮಲಾ ಕುಮಾರಿ, ವಿದೂಷಿ ವೀಣಾ ಸಾಮಗ ಉಪಸ್ಥಿತರಿದ್ದರು.