Header Ads Widget

ಕ್ರೀಡೆ ಜೀವನದ ಅವಿಭಾಜ್ಯ ಅಂಗ- ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್

ಕ್ರೀಡೆ ಜೀವನದ ಅವಿಭಾಜ್ಯ ಅಂಗ. ಅದರಿಂದ ಸಾಮಾಜಿಕ ವಿಕಸನ ಸಾಧ್ಯ ಎಂದು ಕರ್ನಾಟಕ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಹೇಳಿದರು.ಗುರುವಾರ ಅಜ್ಜರಕಾಡು ಜಿಲ್ಲಾ ಮಹಾತ್ಮಾ ಗಾಂಧಿ ಕ್ರೀಡಾಂಗಣದಲ್ಲಿ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಕರ್ನಾಟಕ ಒಲಿಂಪಿಕ್ ಸಂಸ್ಥೆ ಹಾಗೂ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲಾಡಳಿತ ಆಯೋಜಿಸಿದ್ದ ಕರ್ನಾಟಕ ಕ್ರೀಡಾಕೂಟದ ಸಮಾರೋಪ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದರು.

ನಮ್ಮ ದೇಹವನ್ನು ಆರೋಗ್ಯಕರವಾಗಿ ಮತ್ತು ಕ್ರಿಯಾಶೀಲವಾಗಿ ಇರಿಸುವಲ್ಲಿ ಕ್ರೀಡೆಗಳು ಪ್ರಮುಖ ಪಾತ್ರ ವಹಿಸುತ್ತದೆ. ಒತ್ತಡ ಮತ್ತು ಆತಂಕ ಕಡಿಮೆ ಮಾಡಿ, ಮನಸ್ಸನ್ನು ಕೇಂದ್ರೀಕರಿಸುವ ಸಾಮರ್ಥ್ಯವನ್ನು ಕ್ರೀಡೆ ಹೆಚ್ಚಿಸುತ್ತದೆ ಮತ್ತು ನಿರ್ಧಾರ ತೆಗೆದುಕೊಳ್ಳುವ ಸಾಮರ್ಥ್ಯ ಹೆಚ್ಚಿಸಿ, ಜೀವನದಲ್ಲಿ ಶಕ್ತಿ ಮತ್ತು ಉತ್ಸಾಹವನ್ನು ತುಂಬುತ್ತದೆ.

ಮನರಂಜನೆಯ ಜೊತೆಗೆ ದೈಹಿಕ, ಮಾನಸಿಕ, ಬೌದ್ಧಿಕ ಮತ್ತು ಸಾಮಾಜಿಕ ಬೆಳವಣಿಗೆಯಲ್ಲೂ ಪ್ರಮುಖ ಪಾತ್ರ ವಹಿಸುವ ಕ್ರೀಡೆ, ಜೀವನದ ತತ್ವಶಾಸ್ತ್ರವಾಗಿದೆ. ಶಿಸ್ತು, ಸಂಯಮ, ಹೋರಾಟ ಮತ್ತು ಸಕಾರಾತ್ಮಕ ಮನೋಭಾವ ಮೈಗೂಡಿಸಿಕೊಳ್ಳಲು ನಮ್ಮನ್ನು ಕ್ರೀಡೆ ಪ್ರೇರೇಪಿಸುತ್ತವೆ ಎಂದು ಗೆಹ್ಲೋಟ್ ಅಭಿಪ್ರಾಯ ವ್ಯಕ್ತಪಡಿಸಿದರು.

ಭಾರತದಲ್ಲಿ ಕ್ರೀಡೆಗಳನ್ನು ಉತ್ತೇಜಿಸಲು ಕೇಂದ್ರ ಯುವ ಮತ್ತು ಕ್ರೀಡಾ ಸಚಿವಾಲಯದಡಿ ಕಾರ್ಯನಿರ್ವಹಿಸುತ್ತಿರುವ ಭಾರತೀಯ ಕ್ರೀಡಾ ಪ್ರಾಧಿಕಾರ, ಕ್ರೀಡಾ ಚಟುವಟಿಕೆಗಳಿಗೆ ಪರಿಣಾಮಕಾರಿ ಯೋಜನೆಗಳನ್ನು ಸಿದ್ಧಪಡಿಸಿ ಜಾರಿಗೊಳಿಸಿದೆ. ಖೇಲೋ ಇಂಡಿಯಾ ಅಭಿಯಾನ ಕ್ರೀಡೆಯತ್ತ ಯುವಜನತೆಯನ್ನು ಆಕರ್ಷಿಸುವಲ್ಲಿ ಮತ್ತು ದೇಶದ ಮೂಲೆ ಮೂಲೆಯ ಯುವ ಪ್ರತಿಭೆಗಳನ್ನು ಗುರುತಿಸುವಲ್ಲಿ ಪ್ರಮುಖ ಪಾತ್ರ ವಹಿಸಿದೆ. ಅದರ ಫಲಿತಾಂಶ ಇಂದು ನಮ್ಮೆಲ್ಲರ ಮುಂದಿದೆ. ಭಾರತೀಯ ಆಟಗಾರರು ಏಷ್ಯನ್, ಒಲಿಂಪಿಕ್ ಮತ್ತು ಪ್ಯಾರಾಒಲಿಂಪಿಕ್ ಕ್ರೀಡಾಕೂಟಗಳಲ್ಲಿ ಅತ್ಯುತ್ತಮ ಪ್ರದರ್ಶನ ನೀಡುವ ಮೂಲಕ ದೇಶಕ್ಕೆ ಕೀರ್ತಿ ತಂದಿದ್ದಾರೆ ಎಂದು ಶ್ಲಾಘಿಸಿದರು.


ಕ್ರೀಡೆಯಲ್ಲಿ ದಿವ್ಯಾಂಗ ಆಟಗಾರರನ್ನು ಪ್ರೋತ್ಸಾಹಿಸಲು ದೇಶದಲ್ಲಿ ದಿವ್ಯಾಂಗರಿಗಾಗಿ ಕ್ರೀಡಾ ಕೇಂದ್ರಗಳನ್ನು ಸ್ಥಾಪಿಸಲಾಗುತ್ತಿದೆ. ಅವುಗಳಲ್ಲೊಂದಾಗಿರುವ ಮಧ್ಯಪ್ರದೇಶದ ಗ್ವಾಲಿಯರ್ ಕೇಂದ್ರದಲ್ಲಿ ದಿವ್ಯಾಂಗ ಆಟಗಾರರಿಗೆ ತರಬೇತಿ ನೀಡಿ, ಅವರನ್ನು ಕ್ರೀಡೆಗೆ ಸಿದ್ಧಪಡಿಸಲಾಗುತ್ತಿದೆ.


ಕರ್ನಾಟಕ ಸರ್ಕಾರ ವಿವಿಧ ಯೋಜನೆಗಳ ಮೂಲಕ ಕ್ರೀಡಾ ಚಟುವಟಿಕೆಗಳನ್ನು ಉತ್ತೇಜಿಸುತ್ತಿದೆ. ರಾಜ್ಯ ಅನೇಕ ಶ್ರೇಷ್ಠ ಆಟಗಾರರನ್ನು ಹುಟ್ಟುಹಾಕಿದೆ. ಜಾಗತಿಕ ಮಟ್ಟದಲ್ಲಿ ರಾಜ್ಯ ಮತ್ತು ದೇಶಕ್ಕೆ ಕೀರ್ತಿ ತಂದವರು ಕ್ರೀಡಾ ಸ್ಫೂರ್ತಿಯನ್ನು ಮುನ್ನಡೆಸಬೇಕು ಎಂದು ಕರೆ ನೀಡಿದರು.

ವಿವಿಧ ಹಂತಗಳಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿದ ಆಟಗಾರರನ್ನು ಪುರಸ್ಕರಿಸುವ ಜೊತೆಗೆ ವಿವಿಧ ಸರ್ಕಾರಿ ಸೇವೆಗಳಲ್ಲಿ ಮೀಸಲಾತಿ ನೀಡುತ್ತಿದೆ. ಆಟಗಾರರಿಗೆ ಅಂತಾರಾಷ್ಟ್ರೀಯ ಮಟ್ಟದ ಆಧುನಿಕ ಕ್ರೀಡಾ ಸೌಲಭ್ಯಗಳನ್ನೂ ಒದಗಿಸುತ್ತಿದೆ. ಬೆಂಗಳೂರಿನ ಕಂಠೀರವ ಸ್ಟೇಡಿಯಂ ನವೀಕರಿಸಲಾಗಿದೆ. ಅತ್ಯಾಧುನಿಕ ಕ್ರೀಡಾ ವಿಜ್ಞಾನ ಕೇಂದ್ರ ಸ್ಥಾಪಿಸುವುದರೊಂದಿಗೆ ಅಂತಾರಾಷ್ಟ್ರೀಯ ಗುಣಮಟ್ಟದ ಅತ್ಯಾಧುನಿಕ ಕ್ರೀಡಾ ಸೌಲಭ್ಯಗಳನ್ನು ಹೊಂದಲು ವಿಸ್ತರಿಸಲಾಗಿದೆ. ಎಸ್ಎಐ ಶೂಟಿಂಗ್ ಶ್ರೇಣಿಯನ್ನು ಅತ್ಯಾಧುನಿಕ ಸೌಲಭ್ಯಗಳೊಂದಿಗೆ ನವೀಕರಿಸಲಾಗಿದೆ. ಈ ಆಧುನಿಕ ಸೌಲಭ್ಯಗಳನ್ನು ಹೊಂದಿರುವ ಕ್ಯಾಂಪಸ್‌ಗಳು ಹೊಸ ಕ್ರೀಡಾ ಪ್ರತಿಭೆಗಳನ್ನು ಅಭಿವೃದ್ಧಿಪಡಿಸಲು ಸಹಾಯ ಮಾಡುತ್ತವೆ ಎಂದರು.



ಗೃಹಸಚಿವ ಡಾ. ಜಿ.ಪರಮೇಶ್ವರ್ ಮಾತನಾಡಿ ಜಾತಿ, ಧರ್ಮ ಇಲ್ಲದ ಒಂದೇ ಒಂದು ಕ್ಷೇತ್ರ ಕ್ರೀಡೆ. ಈ ಕ್ಷೇತ್ರದಲ್ಲಿ ಇಂದಿನ ಯುವಪೀಳಿಗೆ ಹೆಚ್ಚು ತೊಡಗಿಸಿಕೊಂಡಲ್ಲಿ ಜಾತಿಗಳ ಭೇದ ಭಾವಗಳನ್ನು ತೊಲಗಿಸಬಹುದು ಎಂದರು.


ಯುವಜನತೆ ಹೆಚ್ಚು ಮದ್ಯವಸ್ಯನಿಗಳಾಗುತ್ತಿದ್ದಾರೆ. ಕೆಲವು ಕಾಲೇಜುಗಳಲ್ಲೇ ವಿದ್ಯಾರ್ಥಿಗಳನ್ನು ವ್ಯಸನಿಯಾಗಿಸಲಾಗುತ್ತಿದೆ. ಅದರ ವಿರುದ್ದ ಪೋಲಿಸ್ ಇಲಾಖೆ ದೊಡ್ಡ ಮಟ್ಟದಲ್ಲಿ ಸಮರ ಸಾರಿದೆ. ಅದೆಲ್ಲದರಿಂದ ವಿದ್ಯಾರ್ಥಿಗಳು ದೂರ ಇರುವಂತಾಗಲು ಕ್ರೀಡೆಯಲ್ಲಿ ಭಾಗವಹಿಸಲು ಪ್ರೋತ್ಸಾಹ ನೀಡಿ ಎಂದರು.

ಅಧ್ಯಕ್ಷತೆ ವಹಿಸಿದ್ದ ಉಡುಪಿ ಶಾಸಕ ಯಶಪಾಲ್ ಸುವರ್ಣ, ಉಡುಪಿಗೊಂದು ಸುಸಜ್ಜಿತ ಕ್ರಿಕೆಟ್ ಕ್ರೀಡಾಂಗಣ ಒದಗಿಸುವಂತೆ ಮನವಿ ಮಾಡಿದರು.

ಸಂಸದ ಕೋಟ ಶ್ರೀನಿವಾಸ ಪೂಜಾರಿ, ಶಾಸಕರಾದ ಗುರ್ಮೆ ಸುರೇಶ್ ಶೆಟ್ಟಿ, ಗುರುರಾಜ್ ಗಂಟಿಹೊಳೆ ಮತ್ತು ಕಿರಣ್ ಕುಮಾರ್ ಕೊಡ್ಗಿ, ವಿಧಾನ ಪರಿಷತ್ ಸದಸ್ಯ ಡಾ. ಮಂಜುನಾಥ ಭಂಡಾರಿ, ನಗರಸಭಾ ಅಧ್ಯಕ್ಷ ಪ್ರಭಾಕರ ಪೂಜಾರಿ, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ದಿನಕರ ಹೇರೂರು, ಫೀಬಾ ಏಷ್ಯಾ ಮತ್ತು ಕರ್ನಾಟಕ ಒಲಿಂಪಿಕ್ ಸಂಸ್ಥೆ ಅಧ್ಯಕ್ಷ ಡಾ.ಕೆ.ಗೋವಿಂದರಾಜ್, ಮಾಜಿ ಸಚಿವರಾದ ಅಭಯಚಂದ್ರ ಜೈನ್, ವಿನಯ ಕುಮಾರ್ ಸೊರಕೆ, ಗೇರು ಅಭಿವೃದ್ಧಿ ನಿಗಮ ಅಧ್ಯಕ್ಷೆ ಮಮತಾ ಡಿ.ಎಸ್. ಗಟ್ಟಿ, ತುಳು ಅಕಾಡೆಮಿ ಅಧ್ಯಕ್ಷ ತಾರಾನಾಥ ಗಟ್ಟಿ, ಕೊಂಕಣಿ ಅಕಾಡೆಮಿ ಅಧ್ಯಕ್ಷ ಜೋಕಿಂ ಸ್ಟ್ಯಾನ್ಲಿ ಅಲ್ವಾರಿಸ್, ಬ್ಯಾರಿ ಅಕಾಡೆಮಿ ಅಧ್ಯಕ್ಷ ಉಮರ್ ಯು.ಎಚ್, ಮಣಿಪಾಲ ಮಾಹೆ ಸಹಕುಲಾಧಿಪತಿ ಡಾ.ಎಚ್.ಎಸ್.ಬಲ್ಲಾಳ್, ಸಹಕುಲಪತಿ ಲೆ.ಜ.ಡಾ.ಎಮ್.ಡಿ ವೆಂಕಟೇಶ್, ಪಶ್ಚಿಮ ವಲಯ ಐಜಿಪಿ ಅಮೃತ್ ಸಿಂಗ್, ಜಿಲ್ಲಾ ಎಸ್ಪಿ ಡಾ.ಅರುಣ್, ಕರಾವಳಿ ಕಾವಲುಪಡೆ ಎಸ್ಪಿ ಮಿಥುನ್, ಎಎನ್ಎಫ್ ಎಸ್ಪಿ ಜಿತೇಂದ್ರ ದಯಾಮ, ಜಿ.ಪಂ ಸಿಇಓ ಪ್ರತೀಕ್ ಬಾಯಲ್, ದ.ಕ. ಜಿಲ್ಲಾಧಿಕಾರಿ ಮುಲೈ ಮುಗಿಲನ್ ಮೊದಲಾದವರಿದ್ದರು.

ಉಡುಪಿ ಜಿಲ್ಲಾಧಿಕಾರಿ ಡಾ.ವಿದ್ಯಾಕುಮಾರಿ ಸ್ವಾಗತಿಸಿದರು. ಯುವಜನ ಸೇವೆ ಮತ್ತು ಕ್ರೀಡಾಧಿಕಾರಿ ಡಾ.ರೋಶನ್ ಶೆಟ್ಟಿ ಕ್ರೀಡಾಳುಗಳ ಪಟ್ಟಿ ವಾಚಿಸಿದರು.