Header Ads Widget

ಇಂದ್ರಾಳಿ ರುದ್ರಭೂಮಿಗೆ ಅಂತ್ಯ ಸಂಸ್ಕಾರ ಧಾಮ

ಮಣಿಪಾಲ್ ಟೌನ್ ರೋಟರಿ ಕ್ಲಬ್ ನ ದಶಮಾನೋತ್ಸವ ಸಂಧರ್ಭದಲ್ಲಿ, ಸಂಸ್ಥೆಯ ಮಾಜೀ ಅಧ್ಯಕ್ಷ ರೋ. ಬೆಲ್ಪತ್ರೆ ಗಣೇಶ ನಾಯಕ್ ಮತ್ತು ಶ್ರೀಮತಿ ಶೈಲಾ ಜಿ. ನಾಯಕ್ ಅವರ ವೈವಾಹಿಕ ಜೀವನದ 50 ವರ್ಷಾಚರಣೆಯ ಸಂದರ್ಭದಲ್ಲಿ‌ ಇಂದ್ರಾಳಿ ರುದ್ರಭೂಮಿಗೆ ರೂ. 15.00ಲಕ್ಷ ವೆಚ್ಚದಲ್ಲಿ ಅಂತ್ಯ ಸಂಸ್ಕಾರ ಧಾಮ ಕಟ್ಟಿಸಿ ಕೊಟ್ಟಿರುವುದು ಅತ್ಯಂತ ಪ್ರಶಂಸನೀಯ ಸಮಾಜಸೇವೆಯಂದು ಮಾಹೆ ಸಹ ಕುಲಾಧಿಪತಿ ಡಾ. ಎಚ್.ಎಸ್.ಬಲ್ಲಾಳ್‌ ಅವರು ನುಡಿದರು. 

ಸರಕಾರವೇ ಎಲ್ಲವನ್ನು ನೀಡುತ್ತದೆ ಎಂದು ಕಾಯುವುದಕ್ಕಿಂತ; ಖಾಸಗಿ ಸಂಸ್ಥೆಗಳು ಮತ್ತು‌ ಸಾರ್ವಜನಿಕರು ಸರಕಾರದೊಂದಿಗೆ ಸೇರಿ ಈರೀತಿಯ ಅತೀ ತುರ್ತು ಮತ್ತು ಅವಶ್ಯಕ ಕಾರ್ಯಗಳನ್ನು ನಡೆಸುವ ಅಗತ್ಯವಿದೆಯಂದು ಧಾಮವನ್ನು ಸಾಂಕೇತಿಕವಾಗಿ ಲೋಕಾರ್ಪಣೆ ಮಾಡಿ ಕರೆಕೊಟ್ಟರು.

ರೋ. ಜಿಲ್ಲಾ ಗವರ್ನರ್ ರೋ. ದೇವಾನಂದರು‌ ಶಿಲಾ ಫಲಕವನ್ನು‌ ಅನಾವರಣಗೊಳಿಸಿ, ರೋಟರಿಯ ಚರಿತ್ರೆಯಲ್ಲಿ ಈ ಯೋಜನೆಯು ವಿಶಿಷ್ಟ, ಅಪೂರ್ವ ಮತ್ತು ಅರ್ಥಪೂರ್ಣವಾದದ್ದು. ಪಾರ್ಥೀವ ಶರೀರದ ಅಂತಿಮದರ್ಶನ, ಅಗ್ನಿ ಸಂಸ್ಕಾರ ಪೂರ್ವ ವಿಧಿ ನಿಯಮಗಳ ನಡೆಸುವ ವ್ಯವಸ್ಥೆ, ವಾಸ್ತವ್ಯ ನಿಬಿಡವಾಗುತ್ತಿರುವ ಮಣಿಪಾಲ ಉಡುಪಿಯ ಕುಟುಂಬಗಳಿಗೆ ಇದು ಮಹತ್ತರ ಸಹಾಯವನ್ನು ಮಾಡುತ್ತದೆ ಎಂದು ನುಡಿದರು. 

ನಗರ ಸಭಾ ಅಧ್ಯಕ್ಷರಾಗಿರುವ ಶ್ರೀ ಪ್ರಭಾಕರ ಪೂಜಾರಿಯವರು ನಗರದ ಜನತೆಗೆ ಇದೊಂದು ಅತ್ಯಮೂಲ್ಯ ಕೊಡುಗೆ ಎಂದು ನುಡಿದರು. 

ಮಾಜಿ ಅಧ್ಯಕ್ಷೆ ಶ್ರೀಮತಿ ಸುಮಿತ್ರಾ ನಾಯಕ್ ಅವರು ಮೃತರ ಅಂತಿಮ ಸಂಸ್ಕಾರ ವ್ಯವಸ್ಥಿತವಾಗಿ ನಡೆಸುವ ಯೋಜನೆಯನ್ನು ಉಡುಪಿ ನಗರಸಭೆ ಜನತೆಯ ಪರವಾಗಿ ಕೊಂಡಾಡುತ್ತದೆ ಎಂದು ನುಡಿದರು.

ದಾನಿಗಳಾದ ರೋ.ಬೆಲ್ಪತ್ರೆ ಗಣೇಶ್ ನಾಯಕ್ ಅವರು ಪ್ರಾಸ್ತಾವಿಕ ಭಾಷಣ ಮಾಡಿದರು.

ವೇದಿಕೆಯಲ್ಲಿ ಶ್ರೀಮತಿ ಶೈಲಾ ಜಿ ನಾಯಕ್, ರೋ. ಜಗನ್ನಾಥ ಕೋಟೆ, ರೊ. ನಾಗರಾಜ ಶೆಟ್ಟಿ, ರೊ. ನವೀನ್ ಕುಮಾರ್ ಕೂಡಮರ, ಸ್ಥಾಯಿ ಸಮಿತಿ ಅಧ್ಯಕ್ಷ ಶ್ರೀಯುತ ಸುಂದರ್ ಜಿ. ಕಲ್ಮಾಡಿ, ನಗರ ಸಭಾ ಸದಸ್ಯರಾದ ಶ್ರೀಯುತ ಗಿರೀಶ್ ಕಾಂಚನ್, ಶ್ರೀಯುತ ಅಶೋಕ್ ನಾಯಕ್, ಶ್ರೀಯುತ ರಾಜು, ಶ್ರೀಮತಿ ಭಾರತಿ, ರುದ್ರಭೂಮಿ ವ್ಯವಸ್ಥಾಪಕ ಶ್ರೀ ಪ್ರಶಾಂತ್ ಉಪಸ್ಥಿತರಿದ್ದರು. 

ಕಟ್ಟಡ ನಿರ್ಮಾಣ ಕಾರ್ಯವನ್ನು ಮಾಡಿದ ರೋ. ನಿತ್ಯಾನಂದ ನಾಯಕ್, ರೋ. ಗೋಪಾಲ ಗಾಣಿಗ, ಮತ್ತು ಅಶೊಕ್ ನಾಯಕ್ ಅವರನ್ನು ಗೌರವಿಸಲಾಯಿತು.

ಅಧ್ಯಕ್ಷ ಡಾ. ಮನೋಜ್ ಕುಮಾರ್ ನಾಗಸಂಪಿಗೆಯವರು ಸ್ವಾಗತಿಸಿದರು. ರೋ. ಸಚ್ಚಿದಾನಂದ ನಾಯಕ್ ಅವರು ಕಾರ್ಯಕ್ರಮ ನಿರ್ವಹಿಸಿದರು ಮತ್ತು ರೋ. ನಿತ್ಯಾನಂದ ನಾಯಕ್ ಅವರು ಧನ್ಯವಾದವನ್ನಿತ್ತರು.