ಬಾಲಿವುಡ್ ಸಿನೆಮಾ ಸ್ಪೆಷಲ್ 26 ಮಾದರಿಯ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನಲ್ಲಿ ನಡೆದಿದೆ. ನಾವು ಇಡಿ ಅಧಿಕಾರಿಗಳು ಎಂದು ನಂಬಿಸಿ ಉದ್ಯಮಿಯ ಮನೆಗೆ ದಾಳಿ ನಡೆಸಿ ತಂಡವೊಂದು ಬರೋಬ್ಬರಿ 30 ಲಕ್ಷ ಲೂಟಿ ಮಾಡಿದೆ.
ವಿಟ್ಲ ಪೋಲೀಸ್ ಠಾಣೆ ವ್ಯಾಪ್ತಿಯ ಬೋಳಂತೂರು ಎಂಬಲ್ಲಿ ಸಿಂಗಾರಿ ಬೀಡಿ ಸಂಸ್ಥೆ ಅನೇಕ ವರ್ಷಗಳಿಂದ ಕಾರ್ಯ ನಿರ್ವಹಿಸುತ್ತಿದ್ದು, ಶುಕ್ರವಾರ ಅವರ ಮನೆಗೆ ತಮಿಳುನಾಡು ಮೂಲದ ಕಾರ್ ನಲ್ಲಿ ಆಗಮಿಸಿದ ತಂಡವೊಂದು ದಿಡೀರ್ ದಾಳಿ ನಡೆಸಿ ಇಡಿ ಅಧಿಕಾರಿಗಳು ಎಂದು ನಂಬಿಸಿ ಮನೆಯಲ್ಲಿದ್ದ ಸುಮಾರು 30 ಲಕ್ಷ ರೂಪಾಯಿಗಳನ್ನು ದೋಚಿ ಪರಾರಿಯಾಗಿದ್ದಾರೆ. ಸಿಂಗಾರಿ ಬೀಡಿ ಸಂಸ್ಥೆಯ ಮಾಲಕ ಬೋಳಂತೂರು ಸಮೀಪದ ನಾರ್ಶ ನಿವಾಸಿ ಸುಲೈಮಾನ್ ಹಾಜಿ ಮನೆಯಲ್ಲಿ ಕೃತ್ಯ ನಡೆದಿದೆ.
ಮೂಲಗಳ ಪ್ರಕಾರ ಶುಕ್ರವಾರ ತಡರಾತ್ರಿ 7 ಜನರ ತಂಡ ಮಾರುತಿ ಎರ್ಟಿಗಾ ಕಾರಿನಲ್ಲಿ ಬಂದು ಸುಲೈಮಾನ್ ಅವರ ಮನೆಯ ಕದ ತಟ್ಟಿದ್ದಾರೆ. ತಮ್ಮನ್ನು ತಾವು ಇಡಿ ಅಧಿಕಾರಿಗಳು ಎಂದು ಪರಿಚಯಿಸಿಕೊಂಡ ಈ ಖದೀಮರು, ತಮ್ಮ ಆಸ್ತಿ ಹಾಗೂ ಬ್ಯಾಂಕ್ ವಹಿವಾಟಿನ ಲೆಕ್ಕ ಕೊಡುವಂತೆ ಕೇಳಿದ್ದಾರೆ ಎನ್ನಲಾಗಿದೆ. ಇದಲ್ಲದೇ ತನಿಖೆಗೆ ಸಹಕರಿಸದಿದ್ದರೇ, ಬಂಧಿಸುವುದಾಗಿ ಹೆದರಿಸಿದ್ದಾರೆ. ಸುಮಾರು ಎರಡೂವರೆ ಗಂಟೆಗಳ ಕಾಲ ಈ ತಂಡ ತನಿಖೆಯ ನಾಟಕವಾಡಿದೆ. ಮುಂಜಾನೆ ಸಮಯ ಅವರು ಮನೆಯಿಂದ ಸುಮಾರು 30 ಲಕ್ಷ ರೂಪಾಯಿ ಹಣವನ್ನು ಸುಲಿಗೆ ಮಾಡಿ ಕಾರಿನಲ್ಲಿ ಪರಾರಿಯಾಗಿರುವುದಾಗಿ ಸುದ್ದಿಯಾಗಿದೆ. ಇವರು ಹಿಂದಿ ಇಂಗ್ಲೀಷ್ ಹಾಗೂ ಕನ್ನಡ ಮಾತನಾಡುತ್ತಿದ್ದರು ಎಂದು ಹೇಳಲಾಗುತ್ತಿದೆ.
ದುಷ್ಕರ್ಮಿಗಳು ಬಂದ ಕಾರು ತಮಿಳುನಾಡು ರಿಜಿಸ್ಟ್ರೇಷನ್ ಹೊಂದಿತ್ತು ಎಂದು ತಿಳಿದು ಬಂದಿದೆ. ಘಟನೆಯ ಮಾಹಿತಿ ಬಹಿರಂಗವಾಗುತ್ತಲೇ ವಿಟ್ಲ ಪೊಲೀಸರು ಘಟನಾ ಸ್ಥಳಕ್ಕೆ ಧಾವಿಸಿದ್ದು. ಆರೋಪಿಗಳ ಪತ್ತೆಗೆ ಅಲರ್ಟ್ ಆಗಿದ್ದಾರೆ. ಪರಿಸರದ ಎಲ್ಲ ರಸ್ತೆಗಳಲ್ಲಿ ನಾಕಬಂದಿ ನಡೆಸಿ ಆರೋಪಿಗಳಿಗಾಗಿ ಶೋಧ ನಡೆಸುತ್ತಿದ್ದಾರೆ.