ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ ನೀಡುವ ರಾಜ್ಯಮಟ್ಟದ ಉತ್ತಮ ಸಂಘ ಪ್ರಶಸ್ತಿಗೆ ಉಡುಪಿ ಜಿಲ್ಲಾ ಕಾರ್ಯನಿರತ ಪತ್ರಕರ್ತ ಸಂಘವು ಆಯ್ಕೆಯಾಗಿದೆ ಎಂದು ಸಂಘದ ಜಿಲ್ಲಾಧ್ಯಕ್ಷ ರಾಜೇಶ್ ಶೆಟ್ಟಿ ಅಲೆವೂರು ತಿಳಿಸಿದ್ದಾರೆ.
ಉಡುಪಿ ಪತ್ರಿಕಾ ಭವನದಲ್ಲಿ ಜ.16ರಂದು ಕರೆಯಲಾದ ಸುದ್ದಿಗೋಷ್ಠಿ ಯಲ್ಲಿ ಮಾತನಾಡಿದ ಅವರು, ಉಡುಪಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ರಜತ ಮಹೋತ್ಸವ ಹಿನ್ನೆಲೆ ಮತ್ತು 2024ನೇ ಸಾಲಿನಲ್ಲಿ ಸಂಘ ಹಮ್ಮಿ ಕೊಂಡಿರುವ ನಿರಂತರ ಹಾಗೂ ಅತ್ಯುತ್ತಮ ಕಾರ್ಯ ಚಟುವಟಿಕೆ ಪರಿಗಣಿಸಿ ಈ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ. ತುಮಕೂರಿನಲ್ಲಿ ಜನವರಿ 18 ಮತ್ತು 19ರಂದು ನಡೆಯಲಿರುವ 39ನೇ ರಾಜ್ಯ ಪತ್ರಕರ್ತರ ಸಮ್ಮೇಳನದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುತ್ತದೆ ಎಂದರು.
ಉಡುಪಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘವು 2024ನೇ ಸಾಲಿನಲ್ಲಿ ಪತ್ರಕರ್ತರ ಕ್ಷೇಮಾಭಿವೃದ್ಧಿ ನಿಧಿಗೆ ಚಾಲನೆ, ಸಂವಾದ, ಸ್ಥಾಪನಾ ದಿನಾಚರಣೆ, ಚುನಾವಣಾ ಮಾಹಿತಿ ಕಾರ್ಯಾಗಾರ, ಸಾಮಾಜಿಕ ಬದ್ಧತೆಯ ಕಾರ್ಯಕ್ರಮ, ಪತ್ರಕರ್ತರ ಪರ ಹೋರಾಟ, ಚರ್ಚಾ ಕಾರ್ಯಕ್ರಮ ಪತ್ರಿಕಾ ದಿನಾಚರಣೆ, ಜನಜಾಗೃತಿ ಕಾರ್ಯಕ್ರಮ, ಗ್ರಂಥಾಲಯ ಉದ್ಘಾಟನೆ, ವಾರ್ಷಿಕ ಪ್ರವಾಸ, ರಜತ ಕ್ರೀಡಾ ಸಂಭ್ರಮ ಸೇರಿದಂತೆ ಹಲವು ಕಾರ್ಯಕ್ರಮಗಳನ್ನು ಯಶಸ್ವಿಯಾಗಿ ನಡೆಸಿದೆ.
ಅಲ್ಲದೆ ಉಡುಪಿ ಪತ್ರಕರ್ತರ ಸಂಘವು 2024 ನೇ ಸಾಲಿನ ಉಡುಪಿ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿಗೂ ಕೂಡ ಭಾಜನವಾಗಿದೆ. ಅದೇ ರೀತಿ ಕರ್ನಾಟಕ ರಾಜ್ಯ ಕಾರ್ಯನಿರತ ಪತ್ರಕರ್ತರ ಸಂಘವು ತುಮಕೂರಿನಲ್ಲಿ ನಡೆಸಿದ ರಾಜ್ಯ ಮಟ್ಟದ ಪತ್ರಕರ್ತರ ಕ್ರೀಡಾಕೂಟದಲ್ಲಿ ಉಡುಪಿ ತಂಡವು ಸಮಗ್ರ ಪ್ರಶಸ್ತಿಯನ್ನು ಗೆದ್ದುಕೊಂಡಿದೆ. ಈ ಎಲ್ಲಾ ಸಾಧನೆಯನ್ನು ಪರಿಗಣಿಸಿ ರಾಜ್ಯ ಅತ್ಯುತ್ತಮ ಸಂಘ ಪ್ರಶಸ್ತಿಯನ್ನು ಜಿಲ್ಲಾ ಸಂಘಕ್ಕೆ ನೀಡಲಾಗಿದೆ ಎಂದು ಅವರು ಮಾಹಿತಿ ನೀಡಿದರು.
ಜಿಲ್ಲಾ ಸಂಘದ ಸದಸ್ಯ ಕಾರ್ಕಳದ ಹರಿಪ್ರಸಾದ್ ನಂದಳಿಕೆ ಅವರಿಗೆ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ ನೀಡುವ ವಾರ್ಷಿಕ ಆರ್ ಎಲ್ ವಾಸುದೇವ ರಾವ್ ಪ್ರಶಸ್ತಿ (ಅರಣ್ಯ ಅತ್ಯುತ್ತಮ ವರದಿ)ಗೆ ಆಯ್ಕೆಯಾಗಿದ್ದಾರೆ ಎಂದು ಅವರು ತಿಳಿಸಿದರು.
39ನೇ ರಾಜ್ಯ ಸಮ್ಮೇಳನ: ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಆಶ್ರಯದಲ್ಲಿ ತುಮಕೂರು ಜಿಲ್ಲಾ ಶಾಖೆಯು ಆತಿಥ್ಯದೊಂದಿಗೆ 39ನೇ ರಾಜ್ಯ ಸಮ್ಮೇಳನವನ್ನು ತುಮಕೂರಿನಲ್ಲಿ ಜ.18 ಮತ್ತು 19ರಂದು ಆಯೋಜಿಸಲಾಗಿದೆ ಎಂದು ರಾಜೇಶ್ ಶೆಟ್ಟಿ ಅಲೆವೂರು ತಿಳಿಸಿದ್ದಾರೆ.
ಜ.18 ರಂದು ಬೆಳಗ್ಗೆ 8.30ಕ್ಕೆ ಮೆರವಣಿಗೆಗೆ ಗೃಹ ಸಚಿವ ಡಾ.ಪರಮೇಶ್ವರ್ ಚಾಲನೆ ನೀಡಲಿದ್ದಾರೆ. ಬೆಳಗ್ಗೆ 11 ಗಂಟೆಗೆ ಸಿದ್ದಾರ್ಥ ತಾಂತ್ರಿಕ ಮಹಾ ವಿದ್ಯಾಲಯದ ಆವರಣದಲ್ಲಿ ನಿರ್ಮಿಸಲಾಗಿರುವ ವೇದಿಕೆಯಲ್ಲಿ ಸಿದ್ದಗಂಗಾ ಮಠದ ಸಿದ್ದಲಿಂಗಸ್ವಾಮೀಜಿ ದಿವ್ಯ ಸಾನಿಧ್ಯದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸಮ್ಮೇಳನವನ್ನು ಉದ್ಘಾಟಿಸಲಿದ್ದಾರೆ. ಅಧ್ಯಕ್ಷತೆಯನ್ನು ಸಂಘದ ರಾಜ್ಯ ಅಧ್ಯಕ್ಷ ಟಿ.ವಿ.ಶಿವಾನಂದ ತಗಡೂರು ವಹಿಸಲಿರುವರು.
ಎರಡು ದಿನಗಳ ಸಮ್ಮೇಳನದಲ್ಲಿ ಪತ್ರಿಕೋದ್ಯಮಕ್ಕೆ ಸಂಬಂಧಿಸಿದಂತೆ ಮಹತ್ವದ ಸಂವಾದ ಮತ್ತು ಗೋಷ್ಟಿಗಳು ನಡೆಯಲಿವೆ. ಸಮ್ಮೇಳನದಲ್ಲಿ ಕಾರ್ಯನಿರತ ಪತ್ರಕರ್ತರ ಸಂಘದ ಪ್ರತಿನಿಧಿಗಳ ಸಭೆ ಮತ್ತು ಕಲ್ಪತರು ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಲಿದೆ ಎಂದು ಅವರು ಮಾಹಿತಿ ನೀಡಿದರು.
ಸುದ್ದಿಗೋಷ್ಠಿಯಲ್ಲಿ ಜಿಲ್ಲಾ ಸಂಘದ ಪ್ರಧಾನ ಕಾರ್ಯದರ್ಶಿ ನಝೀರ್ ಪೊಲ್ಯ, ಕೋಶಾಧಿಕಾರಿ ಉಮೇಶ್ ಮಾರ್ಪಳ್ಳಿ ಉಪಸ್ಥಿತರಿದ್ದರು