Header Ads Widget

ರಂಗಭೂಮಿ ರಂಗ ಶಿಕ್ಷಣ ಮಕ್ಕಳ ನಾಟಕೋತ್ಸವ ಸಮಾರೋಪ

ಉಡುಪಿ : ನಾಟಕ, ಯಕ್ಷಗಾನ, ನೃತ್ಯ ಮೊದಲಾದ ಕಲಾ ಕೌಶಲಗಳನ್ನು ಮಕ್ಕಳಿಗೆ ಕಲಿಸಿದರೆ ಅವರ ಶೈಕ್ಷಣಿಕ ಪ್ರಗತಿಗೆ ತೊಡಕಾಗುತ್ತದೆ ಎಂಬ ಆತಂಕ ಪಡುವುದು ಅಗತ್ಯವಿಲ್ಲ. ರಂಗ ಶಿಕ್ಷಣ ಮಕ್ಕಳ ಪ್ರಗತಿಗೆ ಪೂರಕವಾಗಲಿದೆ ಎಂಬುದನ್ನು ಹೆತ್ತವರು ಅರಿತುಕೊಳ್ಳಬೇಕು ಎಂದು ಖ್ಯಾತ ರಂಗ ಕರ್ಮಿ ಡಾ.ಜೀವನರಾಮ್ ಸುಳ್ಯ ಹೇಳಿದರು.

ಅವರು ರಂಗಭೂಮಿ ಉಡುಪಿ ವತಿಯಿಂದ ಹಮ್ಮಿಕೊಂಡ ಶಾಲಾ ಮಕ್ಕಳಿಗೆ ರಂಗ ಶಿಕ್ಷಣ ಅಭಿಯಾನದ ಅಂಗವಾಗಿ ಎಂಜಿಎo ಕಾಲೇಜಿನ ನೂತನ ರವೀಂದ್ರ ಮಂಟಪದಲ್ಲಿ ಹಮ್ಮಿಕೊಂಡ ರಂಗಶಿಕ್ಷಣ ಮಕ್ಕಳ ನಾಟಕೋತ್ಸವದ ಸಮಾರೋಪದಲ್ಲಿ ಮಾತನಾಡಿದರು.

ಶಾಲಾ ಕಾಲೇಜುಗಳ ವಾರ್ಷಿಕೋತ್ಸದಲ್ಲಿ ಸಾಮಾನ್ಯವಾಗಿ ನಡೆಯುತ್ತಿದ್ದ ನಾಟಕಗಳು ಇಂದು ನಾನಾ ಕಾರಣಗಳಿಂದಾಗಿ ಬಹುತೇಕ ನಿಂತೇ ಹೋಗಿವೆ. ಇದು ಮಕ್ಕಳಿಗಾದ ನಷ್ಟ. ರಂಗ ಚಟುವಟಿಕೆ ಎಂಬುದು ಒಡೆಯುವ ಕಾರ್ಯ ಅಲ್ಲ, ಬದಲಿಗೆ ಅದು ಕಟ್ಟುವ ಕಾರ್ಯ. ಜಾತಿ, ಮತ,ವರ್ಗ ಬೇಧ ಎಲ್ಲಾ ಮರೆತು ಒಂದಾಗುವುದು ರಂಗಭೂಮಿಯಲ್ಲಿ ಮಾತ್ರ ಎಂದ ಅವರು ಸರಕಾರ ಇಂತಹ ಉತ್ತಮ ಕಾರ್ಯಗಳಿಗೆ ಕೈಜೋಡಿಸಬೇಕು. ರಾಜ್ಯದ ಎಲ್ಲಾ ಶಾಲಾ ಕಾಲೇಜುಗಳಲ್ಲಿ ರಂಗ ಶಿಕ್ಷಣವನ್ನು ಆರಂಭಿಸಲು ಸಹಕರಿಸಬೇಕು ಎಂದು ಮನವಿ ಮಾಡಿದರು.

ಸಾಂಸ್ಕೃತಿಕವಾಗಿ ತೊಡಗಿಸಿಕೊಂಡ ಮಕ್ಕಳಿಗೆ ಭವಿಷ್ಯದಲ್ಲಿ ಉತ್ತಮ ಸ್ಥಾನಮಾನಗಳು ಲಭಿಸುವುದು ಖಂಡಿತ. ರಂಗಭೂಮಿ ಮೂಲಕವೂ ಡಾಕ್ಟರೇಟ್ ಪದವಿಯನ್ನು ಪಡೆಯಬಹುದು ಎಂಬುದಕ್ಕೆ ನಾನೇ ಉದಾಹರಣೆ. ಹೀಗಾಗಿ ನಾಟಕ ಎಂದಾಕ್ಷಣ ಮಕ್ಕಳು, ಹೆತ್ತವರು ಕೀಳರಿಮೆ ಬೆಳೆಸಿಕೊಳ್ಳುವುದು ಬೇಡ. ಮಕ್ಕಳ ರಂಗ ಶಿಕ್ಷಣಕ್ಕೆ ಪ್ರೋತ್ಸಾಹ ನೀಡಿ, ಈ ಮೂಲಕ ಅವರ ಸರ್ವಾಂಗೀಣ ಅಭಿವೃದ್ಧಿಗೆ ಪ್ರೇರಕರಾಗಿ ಎಂದು ಅವರು ಹೆತ್ತವರಿಗೆ ಕರೆ ನೀಡಿದರು.

ರಂಗಭೂಮಿ ಉಡುಪಿ ಅಧ್ಯಕ್ಷ ಡಾ. ತಲ್ಲೂರು ಶಿವರಾಮ ಶೆಟ್ಟಿ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿ, ಮಕ್ಕಳಲ್ಲಿ ನಾಟಕಗಳ ಬಗ್ಗೆ ಆಸಕ್ತಿ ಮೂಡಬೇಕು. ಈ ಮೂಲಕ ಭವಿಷ್ಯದಲ್ಲಿ ನಾಟಕಗಳಿಗೆ ಕಲಾವಿದರು, ಪ್ರೇಕ್ಷಕರ ಕೊರತೆಯಾಗಬಾರದು ಎಂಬ ಉದ್ದೇಶದಿಂದ ಆಯ್ದ ೧೨ ಶಾಲೆಗಳಲ್ಲಿ ರಂಗ ಶಿಕ್ಷಣ ನೀಡುವ ಯೋಜನೆ ಹಮ್ಮಿಕೊಳ್ಳಲಾಗಿದೆ. ಅಲ್ಲದೆ ಕಾಲೇಜು ಮಕ್ಕಳಿಗೆ ರಂಗಭಾಷೆ ಎಂಬ ಕಾರ್ಯಕ್ರಮದಡಿ ರಂಗಭೂಮಿಯ ಪರಿಚಯವನ್ನು ಮಾಡಿಕೊಡಲಾಗುತ್ತಿದೆ. ನಮ್ಮ ಪ್ರಯತ್ನಕ್ಕೆ ಉತ್ತಮ ಸ್ಪಂದನೆ ವ್ಯಕ್ತವಾಗಿರುವುದು ಸಂತೋಷ ತಂದಿದೆ. ಮುಂದೆ ಈ ಯೋಜನೆಯನ್ನು ಇನ್ನಷ್ಟು ಶಾಲಾ ಕಾಲೇಜುಗಳಿಗೆ ವಿಸ್ತರಿಸಬೇಕು ಎನ್ನುವ ಚಿಂತನೆ ಇದೆ ಎಂದರು.

ಕಲಾ ಪ್ರೋತ್ಸಾಹಕ ರಮೇಶ್ ಕಾಂಚಾನ್, ಉದ್ಯಮಿ ಸಚ್ಚಿದಾನಂದ ನಾಯಕ್ ಹಾಗೂ ಬಿಇಓ ಡಾ.ಯಲ್ಲಮ್ಮ ಸಂದರ್ಭೋಚಿತವಾಗಿ ಮಾತನಾಡಿದರು.

ಉದ್ಯಮಿ ಸಾಧು ಸಾಲಿಯಾನ್, ರಂಗಭೂಮಿ ಪ್ರಧಾನ ಕಾರ್ಯದರ್ಶಿ ಪ್ರದೀಪ್‌ಚಂದ್ರ ಕುತ್ಪಾಡಿ, ಉಪಾಧ್ಯಕ್ಷರುಗಳಾದ ರಾಜಗೋಪಾಲ್ ಬಲ್ಲಾಳ್, ಭಾಸ್ಕರ ರಾವ್ ಕಿದಿಯೂರು ಉಪಸ್ಥಿತರಿದ್ದರು.

ಕಾರ್ಯಕ್ರಮದಲ್ಲಿ ರಂಗಶಿಕ್ಷಣ ಆರಂಭಿಸಿದ ಶಾಲಾ ಕಾಲೇಜುಗಳ ಮುಖ್ಯಸ್ಥರು, ಕಾರ್ಯಕ್ರಮ ಸಂಯೋಜಕರನ್ನು ಗೌರವಿಸಲಾಯಿತು. ರಂಗ ಶಿಕ್ಷಣ ಪಡೆದ ಮಕ್ಕಳಿಗೆ ಪ್ರಮಾಣ ಪತ್ರ ವಿತರಿಸಲಾಯಿತು.

ಅಮಿತಂಜಲಿ ಕಿರಣ್ ಹಾಗೂ ರವಿರಾಜ್ ನಾಯಕ್ ಕಾರ್ಯಕ್ರಮ ನಿರೂಪಿಸಿದರು. ರಂಗ ಶಿಕ್ಷಣ ಅಭಿಯಾನದ ಸಂಚಾಲಕ ವಿದ್ಯಾವಂತ ಆಚಾರ್ಯ ಸ್ವಾಗತಿಸಿದರು.

ಕಾರ್ಯಕ್ರಮದಲ್ಲಿ ರಂಗ ಶಿಕ್ಷಣ ಪಡೆಯುತ್ತಿರುವ 7 ಪ್ರೌಡ ಶಾಲೆ ವಿದ್ಯಾರ್ಥಿಗಳಿಂದ ನಾಟಕಗಳು ಪ್ರಸ್ತುತಿ ಗೊಂಡವು. ಪ್ರಸ್ತುತ ಶಾಲಾ ಕಾಲೇಜುಗಳಲ್ಲಿ ರಂಗ ಶಿಕ್ಷಣ ಆರಂಭಿಸುವ ರಂಗಭೂಮಿ ಉಡುಪಿ ಸಂಸ್ಥೆಯ ಈ ಮಹತ್ವಾಕಾಂಕ್ಷೆಯ ಲ್ಲಿ ಉಡುಪಿಯ 12 ಪ್ರೌಢ ಶಾಲೆ ಗಳು ಕೈಜೋಡಿಸಿವೆ.