ಮಹಾತ್ಮಾ ಗಾಂಧಿ ಪ್ರೌಢಶಾಲೆ ಸಾಹೇಬರಕಟ್ಟೆ ಇದರ 2024 25 ನೇ ಸಾಲಿನ ಬಹುಮಾನ ವಿತರಣಾ ಸಮಾರಂಭ ಹಾಗೂ ವಾರ್ಷಿಕ ಪ್ರತಿಭಾ ದಿನಾಚರಣೆಯು ಇತ್ತೀಚೆಗೆ ಜರಗಿತು. ಕಾಜ್ರಳ್ಳಿಯ ಶ್ರೀವನದುರ್ಗಾಪರಮೇಶ್ವರಿ ದೇವಸ್ಥಾನದ ಮೊಕ್ತೇಸರರು ಹಾಗೂ ಶಾಲಾಭಿವೃದ್ಧಿ ಸಮಿತಿಯ ಉಪಾಧ್ಯಕ್ಷ ಶ್ರೀ ಅಲ್ತಾರು ನಿರಂಜನ ಹೆಗ್ಡೆಯವರು ದೀಪ ಬೆಳಗಿಸಿ ಸಭಾಕಾರ್ಯಕ್ರಮ ಉದ್ಘಾಟಿಸಿ " ಗ್ರಾಮೀಣ ಪರಿಸರದಲ್ಲಿ ಇದ್ದುಕೊಂಡು ಆರ್ಥಿಕವಾಗಿ ಹಿಂದುಳಿದ ಮಕ್ಕಳು ಹೆಚ್ಚಾಗಿ ಕಲಿಯುತ್ತಿರುವ ಈ ಶಾಲೆಯಲ್ಲಿ ಶೈಕ್ಷಣಿಕವಾಗಿ ಸಹಪಠ್ಯ ಚಟುವಟಿಕೆಗಳಲ್ಲಿ ಹಾಗೂ ಆಟೋಟ ಸ್ಪರ್ಧೆಗಳಲ್ಲಿ ಜಿಲ್ಲೆ ಹಾಗೂ ರಾಜ್ಯಮಟ್ಟದಲ್ಲಿ ಕೀರ್ತಿ ಪಡೆಯುತ್ತಿರುವುದು ಸಂಸ್ಥೆಯ ಪಾಲಿಗೆ ಹೆಮ್ಮೆಯೇ ಸರಿ ಇಂತಹ ಇನ್ನಷ್ಟು ಪ್ರತಿಭೆಗಳು ಸದಾ ಹೊರಹೊಮ್ಮುತ್ತಿರಲಿ" ಎಂದು ಶುಭ ಹಾರೈಸಿದರು
ಅಭ್ಯಾಗತರಾಗಿ ಶಾಲಾ ಅಭಿವೃದ್ಧಿ ಸಮಿತಿಯ ಸದಸ್ಯ ವೈ ಸಂಕಯ್ಯ ಶೆಟ್ಟಿ ಯಡ್ತಾಡಿ, ಉದ್ಯಮಿ ವಿಶ್ವನಾಥ ಶೆಟ್ಟಿ ಸಾಹೇಬರಕಟ್ಟೆ, ಮಂಜುನಾಥ ಆಚಾರ್ಯ ಯಡ್ತಾಡಿ, ಮಾಧವ ಹೆಗಡೆ ಮಧುವನ, ಶಾಲಾ ಆಡಳಿತ ಮಂಡಳಿಯ ಸದಸ್ಯರಾದ ಶ್ರೀ ರಮೇಶ್ ಶಿರಿಯಾರ, ಹಳೆ ವಿದ್ಯಾರ್ಥಿ ಸಂಘದ ಕಾರ್ಯದರ್ಶಿ ಎಂ ರವೀಂದ್ರನಾಥ ಕಿಣಿ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಸಮಾರಂಭದ ಅಧ್ಯಕ್ಷತೆಯನ್ನು ಶಾಲಾ ಅಭಿವೃದ್ಧಿ ಸಮಿತಿಯ ಕಾರ್ಯದರ್ಶಿ ಪ್ರಸಾದ್ ಶೆಟ್ಟಿ ಕೊಳ್ಕೆಬೈಲ್ ಇವರು ವಹಿಸಿದ್ದರು. ಪಠ್ಯ ಸಹಪಠ್ಯ ಚಟುವಟಿಕೆಗಳು ಹಾಗೂ ಕ್ರೀಡಾ ಸ್ಪರ್ಧೆಗಳ ವಿಜೇತರಿಗೆ ಬಹುಮಾನಗಳನ್ನು ವಿತರಿಸಲಾಯಿತು. ವಿಶೇಷವಾಗಿ ಜಿಲ್ಲೆ ಹಾಗೂ ರಾಜ್ಯಮಟ್ಟವನ್ನು ಪ್ರತಿನಿಧಿಸಿದ ಸಂಸ್ಥೆಯ ವಿದ್ಯಾರ್ಥಿಗಳಾದ ಕುಮಾರಿ ಪವಿತ್ರ , ಹುಲಿಗೆಪ್ಪ, ಪುನೀತ್ ಹಾಗೂ ಆಕಾಶ್ ಎ ಶೆಟ್ಟಿ ಇವರೆಲ್ಲರನ್ನು ಶಾಲಾ ವತಿಯಿಂದ ಗೌರವಿಸಲಾಯಿತು.
ಶಿಕ್ಷಕ ಗಣೇಶ ನಾಯಕ್ ಸ್ವಾಗತಿಸಿ, ಡೈಸಿ ಡಿ ಸಿಲ್ವ ವಂದಿಸಿದರು. ಶಿಕ್ಷಕರಾದ ಸುಬ್ರಹ್ಮಣ್ಯ ಯಶೋಧ ಹಾಗೂ ಗೀತಾ ಬಹುಮಾನ ವಿಜೇತರ ಯಾದಿಯನ್ನು ವಾಚಿಸಿದರು. ಮುಖ್ಯ ಶಿಕ್ಷಕ ಸತೀಶ್ ನಾಯ್ಕ್ ಶಾಲಾ ವಾರ್ಷಿಕ ವರದಿ ಮಂಡಿಸಿದರು. ದೈಹಿಕ ಶಿಕ್ಷಣ ಶಿಕ್ಷಕ ವಿಜಯ್ ಕುಮಾರ್ ಶೆಟ್ಟಿ ಕಾರ್ಯಕ್ರಮ ನಿರ್ವಹಿಸಿದರು. ಬೋಧಕ ಬೋಧಕೇತರ ಸಿಬ್ಬಂದಿಗಳ ಸಹಕಾರದೊಂದಿಗೆ ಸಭಾ ಕಾರ್ಯಕ್ರಮದ ಬಳಿಕ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ಜರಗಿದವು.