ಉಡುಪಿ : ಕಳೆದೆರೆಡು ತಿಂಗಳಿನಿಂದ ವೃದ್ಧಾಪ್ಯ ಪಿಂಚಣಿ ಬಾರದೆ ವೃದ್ಧ ದಂಪತಿ ಅನ್ನ ಆಹಾರಕ್ಕೂ ಪರದಾಡುವಂತಾಗಿದ್ದು, ತಮ್ಮನ್ನು ಅನಾಥಾಶ್ರಮಕ್ಕೆ ಸೇರಿಸುವಂತೆ ಗೋಗೆರೆದ ಪ್ರಸಂಗ ನಡೆದಿದೆ. ಸಮಾಜ ಸೇವಕ ವಿಶು ಶೆಟ್ಟಿ ಅವರು ಈ ದಂಪತಿಯ ನೆರವಿಗೆ ಧಾವಿಸಿ ತನ್ನಿಂದಾದ ನೆರವನ್ನು ನೀಡಿ ಸಂತೈಸಿ ಮಾನವೀಯತೆ ಮೆರೆದಿದ್ದಾರೆ.
ಪಡುಬಿದ್ರೆ ಹೆಜಮಾಡಿಯ ಪಡುಕರೆಯ ನಿವಾಸಿಗಳಾದ ಜನಾರ್ದನ ಆಚಾರ್ ಹಾಗೂ ಲೀಲಾವತಿ ವೃದ್ಧ ದಂಪತಿ ಕಡುಬಡತನದಲ್ಲಿ ಜೀವನ ನಡೆಸುತ್ತಿದ್ದು, ಜೀವನ ನಿರ್ವಹಣೆಗಾಗಿ ಸರಕಾರ ನೀಡುವ ವೃದ್ಧಾಪ್ಯ ವೇತನವನ್ನೇ ಅವಲಂಬಿಸಿದ್ದಾರೆ. ಆದರೆ ಕಳೆದೆರಡು ತಿಂಗಳಿನಿಂದ ಪಿಂಚಣಿ ಬಾರದೆ ದಂಪತಿ ಕಂಗಲಾಗಿದ್ದು, ವಿಶು ಶೆಟ್ಟಿ ಅವರಲ್ಲಿ ತಮ್ಮನ್ನು ಯಾವುದಾದರೂ ಅನಾಥಾಶ್ರಮವನ್ನು ಸೇರಿಸುವಂತೆ ಗೋಗರೆದಿದ್ದಾರೆ.
ನಮ್ಮ ಮನೆಯಲ್ಲಿ ಆಹಾರ ತಯಾರಿಸಲು ಬೇಕಾದ ವ್ಯವಸ್ಥೆಯಿಲ್ಲ. ಕಟ್ಟಿಗೆ ಮೂಲಕ ಅಡುಗೆ ಮಾಡಿದರೆ ಗಂಡನಿಗೆ ಅಸ್ತಮಾ ಕಾಯಿಲೆಯಿದ್ದು, ಹೊಗೆ ಸೇವನೆ ಮಾಡಿದರೆ ದಮ್ಮುಉಂಟಾಗುತ್ತಿದೆ. ಹೀಗಾಗಿ ಸರಕಾರ ನೀಡುವ ಉಚಿತ ಅಡುಗೆ ಅನಿಲ ಸೌಲಭ್ಯ ನೀಡಲು ಸಹಕರಿಸಬೇಕು ಎಂದು ಮನವಿ ಮಾಡಿದ್ದಾರೆ. ನಾನು ಕೂಡಾ ವೃದ್ಧಾಪ್ಯದಿಂದಾಗಿ ಅನಾರೋಗ್ಯ ಪೀಡಿತಳಾಗಿದ್ದು, ಅಂಗವಿಕಲತೆ ಕೂಡಾ ಹೊಂದಿದ್ದೇನೆ. ಹೀಗಾಗಿ ಔಷಧವಿಲ್ಲದೆ ದಿನದೂಡಲು ಸಾಧ್ಯವಿಲ್ಲ.
ಅರೆಹೊಟ್ಟೆಯಲ್ಲಿಯೇ ದಿನ ಕಳೆಯುತ್ತಿದ್ದೇವೆ. ನಮಗೆ ಅನಾಥಾಶ್ರಮ ಸೇರಲು ಮನಸ್ಸಿಲ್ಲ. ಆದರೆ ಯಾವುದೇ ಮೂಲಭೂತ ಸೌಕರ್ಯವಿಲ್ಲದೆ ಜೀವನ ನಡೆಸುವುದಾದರೂ ಹೇಗೆ ? ಸಮಾಜ, ಹಾಗೂ ಸಂಬಂಧಪಟ್ಟ ಇಲಾಖೆಗಳು ನಮ್ಮ ಸಂಕಷ್ಟಕ್ಕೆ ಸ್ಪಂದಿಸಬೇಕು ಎಂದು ಲೀಲಾವತಿ ಆಗ್ರಹಿಸಿದ್ದಾರೆ.
ಮಾನವೀಯತೆ ಮರೆದ ವಿಶು ಶೆಟ್ಟಿ: ವೃದ್ಧ ದಂಪತಿಯ ಪರಿಸ್ಥಿತಿಯನ್ನು ಕಂಡು ಮನನೊಂದ ವಿಶು ಶೆಟ್ಟಿ ಅವರು, ಒಂದು ತಿಂಗಳಿಗೆ ಸಾಕಾಗುವಷ್ಟು ಆಹಾರ ಸಾಮಾಗ್ರಿಗಳು ಹಾಗೂ ಔಷಧಿಗಳನ್ನು ನೀಡಿ ಮಾನವೀಯತೆ ಮರೆದಿದ್ದಾರೆ. ನೀವು ಮನಸಿಲ್ಲದ ಮನಸ್ಸಿನಿಂದ ಆಶ್ರಮ ಸೇರುವುದು ಬೇಡ, ಧೈರ್ಯ ದಿಂದಿರಿ ಎಂದು ದಂಪತಿಯಲ್ಲಿ ಆತ್ಮ ವಿಶ್ವಾಸ ತುಂಬಿದ್ದಾರೆ. ಈ ದಂಪತಿಗೆ ನೆರವಾಗ ಬಯಸುವವರು ದೂ...ಸಂಖ್ಯೆ 9632998923ನ್ನು ಸಂಪರ್ಕಿಸಬಹುದು.
ಈ ವೃದ್ಧ ದಂಪತಿಗೆ ಮಕ್ಕಳಿಲ್ಲ. ಹೀಗಾಗಿ ಸಂಧ್ಯಾಕಾಲದಲ್ಲಿ ಅವರನ್ನು ನೋಡಿಕೊಳ್ಳುವವರಿಲ್ಲ. ವೃದ್ಧಾಪ್ಯದ ಸಹಜ ಆರೋಗ್ಯ ಸಂಬಂಧಿ ಕಾಯಿಲೆಗಳಿಂದ ದಂಪತಿ ಹೈರಣಾಗಿದ್ದಾರೆ. ಇವರಿಗೆ ಸರಕಾರದ ಸೌಲಭ್ಯಗಳು ದೊರೆಯುವಂತೆ ಕಾಪು ತಹಶೀಲ್ದಾರ್ ಅವರು ತುರ್ತು ಕ್ರಮಕೈಗೊಳ್ಳಬೇಕು. ಅಲ್ಲದೆ ಸಂಬಂಧಪಟ್ಟ ಇಲಾಖೆಗಳು, ಹಿರಿಯ ನಾಗರಿಕ ಸಹಾಯವಾಣಿ ಕೂಡಾ ಸ್ಪಂದಿಸಬೇಕು.