ಗಂಗೊಳ್ಳಿ : “ಕನ್ನಡ ನಾಡು ಕಂಡ ಅತ್ಯದ್ಭುತ ಕವಿ ಕುಮಾರವ್ಯಾಸ. ಕನ್ನಡ ನೆಲದ ಮನೆ ಮನಗಳಲ್ಲಿ ಭಾರತ ಕತೆಯನ್ನು ನೆಲೆಯಾಗುವಂತೆ, ಆಪ್ತವಾಗುವಂತೆ ಮಾಡಿದ ಧೀಮಂತ ಕವಿ. ಮಹಾ ಭಾರತ ಕಥಾ ವಸ್ತುವನ್ನು ಭಾಮಿನಿ ಷಟ್ಪದಿಯಲ್ಲಿ ರಚಿಸಿ, ಅದನ್ನು ಕೃಷ್ಣ ಕತೆಯೆಂದು ಸಾರಿದವನು. ಕುವೆಂಪು ಅವರು ಹೇಳುವಂತೆ ಕಲಿಯುಗದಲ್ಲೂ ದ್ವಾಪರವನ್ನು ಕಟ್ಟಿಕೊಟ್ಟವನು.
ವ್ಯಾಸ ರಚಿತ ಭಾರತದ ಮುಂದೆ ತಾನು ಕುಮಾರವ್ಯಾಸನೆಂದು ಹೇಳಿಕೊಳ್ಳುವಲ್ಲಿ ನಾರಣಪ್ಪನ ವಿನಯ ಸಂಪನ್ನತೆ ಎದ್ದು ಕಾಣುತ್ತದೆ. ನಾಡಿನ ಮೂಲೆ ಮೂಲೆಗಳ ವಿದ್ವಾಂಸರನ್ನೂ, ಜನ ಸಾಮಾನ್ಯ ರನ್ನೂ ತನ್ನ ಕಾವ್ಯ ಸೊಬಗಿನಿಂದ ಬೆರಗುಗೊಳಿಸುತ್ತಾ ಒಂದರ್ಥದಲ್ಲಿ ಕನ್ನಡದ ಭಾಷಾ ಏಕೀಕರಣ ವನ್ನು ಸಾಧಿಸಿದ ಕವಿ” ಎಂದು ಕರ್ನಾಟಕ ಗಮಕ ಕಲಾ ಪರಿಷತ್ತು ಕುಂದಾಪುರ ಘಟಕದ ಅಧ್ಯಕ್ಷ ಎಚ್. ಸುಜಯೀಂದ್ರ ಹ0ದೆ ಹೇಳಿದರು.
ಗಂಗೊಳ್ಳಿಯ ಸರಸ್ವತಿ ವಿದ್ಯಾಲಯ ಕನ್ನಡ ಮಾಧ್ಯಮ ಪ್ರೌಢ ಶಾಲೆಯಲ್ಲಿ ಕರ್ನಾಟಕ ಗಮಕ ಕಲಾ ಪರಿಷತ್ತು ಕುಂದಾಪುರ ಘಟಕದ ಆಯೋಜನೆಯಲ್ಲಿ ನಡೆದ ಕುಮಾರವ್ಯಾಸ ಸ್ಮೃತಿ ಮತ್ತು ಗಮಕ ಕಲಾ ಪ್ರಾತ್ಯಕ್ಷಿಕೆಯ ಸಂದರ್ಭ ಸುಜಯೀಂದ್ರ ಹಂದೆ ಮಾತನಾಡಿದರು.
ಸರಸ್ವತಿ ವಿದ್ಯಾಲಯ ಕನ್ನಡ ಮಾಧ್ಯಮ ಪ್ರೌಢ ಶಾಲೆಯ ಮುಖ್ಯೋಪಾಧ್ಯಾಯ ಗೋಪಾಲ ದೇವಾಡಿಗ ಅವರು ಅಧ್ಯಕ್ಷತೆವಹಿಸಿದ್ದರು. ಮುಖ್ಯ ಅಭ್ಯಾಗತರಾಗಿದ್ದ ಗಂಗೊಳ್ಳಿ ಜಿ.ಎಸ್. ವಿ.ಎಸ್. ಅಸೋಸಿಯೇ ಷನ್ ಅಧ್ಯಕ್ಷರಾದ ಡಾ. ಕಾಶೀನಾಥ ಪೈ ಶುಭ ಹಾರೈಸಿದರು.
ವಿದ್ಯಾರ್ಥಿಗಳಿಗಾಗಿ ಗಮಕಿ ಕುಮಾರಿ ಕಾವ್ಯ ಹಂದೆ ಕುಮಾರವ್ಯಾಸನ ಕರ್ಣ ಭೇದನ ಪ್ರಸಂಗದ ಕಾವ್ಯ ಭಾಗವನ್ನು ವಿವಿಧ ರಾಗಗಳಲ್ಲಿ ಪ್ರಾತ್ಯಕ್ಷಿಕೆ ನಡೆಸಿದರು. ಸುಜಯೀಂದ್ರ ಹಂದೆ ವ್ಯಾಖ್ಯಾನ ನೀಡಿದರು.
ಕಛೇರಿಯ ಪ್ರಬಂಧಕರಾದ ಶ್ರೀಧರ ಗಾಣಿಗ ಸ್ವಾಗತಿಸಿ, ಅಧ್ಯಾಪಕ ಆದಿನಾಥ ಕಿಣಿ ಕಾರ್ಯಕ್ರಮ ನಿರೂಪಿಸಿದರು.