ಯುವಜನತೆಯಲ್ಲಿ ಕೆಚ್ಚು ತುಂಬಿದ ಧೀಮಂತ ಸ್ವಾಮಿ ವಿವೇಕಾನಂದ
ಯುವಕರ ಪಾಲಿನ ಸ್ಫೂರ್ತಿಯ ಚಿಲುಮೆ, ಭವ್ಯ ಭಾರತದ ಹೆಮ್ಮೆಯ ಪುತ್ರ ಸ್ವಾಮಿ ವಿವೇಕಾನಂದರು ಜನಿಸಿದ ಪುಣ್ಯ ದಿನವಿಂದು. ಈ ದಿನವನ್ನು ರಾಷ್ಟ್ರೀಯ ಯುವ ದಿನವನ್ನಾಗಿ ಆಚರಿಸಲಾಗುತ್ತದೆ. ಯುವ ಜನತೆಗೆ ಸ್ಫೂರ್ತಿಯ ಚಿಲುಮೆಯಂತಿದ್ದ ವಿವೇಕಾನಂದರ ಚಿಂತನೆ, ಸಂದೇಶಗಳು ಎಂದೆಂ ದಿಗೂ ಪ್ರಸ್ತುತ ಅವರ ಸಂದೇಶವನ್ನು ಜಾರಿ ತಂದರೆ ಖಂಡಿತವಾಗಿಯೂ ದೇಶ ಮತ್ತಷ್ಟು ಅಭಿವೃದ್ಧಿ ಯಾಗಲು ಸಾಧ್ಯ.
ಯುವಕರ ಅಗಾಧ ಶಕ್ತಿ, ಸೃಜನಶೀಲತೆ, ಕ್ರಿಯಾಶೀಲತೆ ಮತ್ತು ಅವರ ಸಹಜ ಪ್ರಜ್ಞೆಯನ್ನು ಗುರುತಿಸಿ, ಗೌರವಿಸಿ, ಗುರುತರ ಗುರಿಯತ್ತ ಕೊಂಡೊಯ್ಯುವ ಪ್ರಕ್ರಿಯೆಗೆ ಪ್ರಭೆ ತಂದ ವಿಶಿಷ್ಟ ದಿನವಾದ ಇಂದು ನಾವೆಲ್ಲರೂ ಹೊಸ ಪ್ರತಿಜ್ನೆ ಮಾಡಿ ನಮ್ಮ ಬದುಕು ರಾಷ್ಟ್ರಕ್ಕಾಗಿ ಸಮಪಿ೯ತವಾಗಬೇಕು.
ಸ್ವಾಮಿ ವಿವೇಕಾನಂದರು 1863ರ ಜ.12ರಂದು ಕೋಲ್ಕತಾದಲ್ಲಿ ಜನಿಸಿದರು. ಮೂಲ ಹೆಸರು ನರೇಂದ್ರನಾಥ ದತ್ತ. ಅವರ ತಂದೆ ವಿಶ್ವನಾಥ ದತ್ತ ಮತ್ತು ತಾಯಿ ಭುವನೇಶ್ವರಿ ದೇವಿ. ವಿಶ್ವನಾಥ ದತ್ತರು ಯಶಸ್ವಿ ವಕೀಲ, ಸಮಾಜದಲ್ಲಿ ಅತ್ಯಂತ ಪ್ರಭಾವಿ. ಅವರ ತಾಯಿ ಸಜ್ಜನ ದೈವಭಕ್ತೆ. ಇಂಥ ಪರಿಸರದಲ್ಲಿ ಬೆಳೆದ ನರೇಂದ್ರನಿಗೆ ಸಹಜವಾಗಿ ವೈಚಾರಿಕ ಮತ್ತು ಆಧ್ಯಾತ್ಮಿಕ ಪ್ರಜ್ಞೆ ಮೂಡಿ, ಸಮಾಜದ ಅಂಧತೆಯನ್ನು ನಿವಾರಿಸಿ, ವಿವೇಕಾನಂದವನ್ನು ಸೃಷ್ಟಿಸುವ ಮಹಾಹಂಬಲ ಸ್ಫುರಿಸಿದ್ದು ಭಾರತದ ಭಾಗ್ಯ.
*ಏಳಿರಿ, ಎಚ್ಚರಗೊಳ್ಳಿರಿ, ಗುರಿ ಮುಟ್ಟುವವರೆಗೂ ನಿಲ್ಲದಿರಿ' :- ಯುವಕರೆಂದರೆ ವಿವೇಕಾನಂದರಿಗೆ ಪಂಚಪ್ರಾಣ. ಯುವ ಶಕ್ತಿಯ ನಿರ್ವಿವಾದಿತ ಸಂಕೇತವಾಗಿ ಬೆಳೆದವರು ಸ್ವಾಮಿ ವಿವೇಕಾನಂದರು. ಯುವಕರಲ್ಲಿ ಹುರುಪು- ಹುಮ್ಮಸ್ಸು ತುಂಬಿ, ಅವರ ಸರ್ವೋನ್ನತಿಗೆ ಹೊಸ ಭಾಷ್ಯವನ್ನೇ ಬರೆದರು.
ಯುವಕರನ್ನು ಉದ್ದೇಶಿಸಿ ಅವರು ಹೇಳಿದ 'ಏಳಿರಿ, ಎಚ್ಚರಗೊಳ್ಳಿರಿ, ಗುರಿ ಮುಟ್ಟುವವರೆಗೂ ನಿಲ್ಲದಿರಿ' ಎಂಬ ಸಂದೇಶವನ್ನು ಕೇಳದ ಭಾರತೀಯರೇ ಇಲ್ಲ. ಇದನ್ನು ನಾವು ನಿರಂತರ ನೆನೆದು ಇತರರ ಜೊತೆಗೆ ಹಂಚಿಕೊಂಡಿದ್ದೇವೆ. ಜೀವನದಲ್ಲಿ ಗುರಿಯಿಟ್ಟುಕೊಂಡು ಸಾಧನೆಯ ಹಾದಿಯಲ್ಲಿ ಮುನ್ನುಗ್ಗುತ್ತಿರುವ ಯುವ ಸಮುದಾಯ ತಮಗೆ ಎದುರಾದ ಸಂಕಷ್ಟಗಳಿಗೆ, ಎಡರು-ತೊಡರುಗಳಿಗೆ ಬೆದರದೆ 'ಧೈರ್ಯಂ ಸರ್ವತ್ರ ಸಾಧನಂ' ಎಂದರಿತು ಗುರಿ ತಲುಪಬೇಕು.
ಅಸಹಾಯಕರಾಗಿ ಆತ್ಮಹತ್ಯೆಯಂಥ ಹೀನ ಕಾರ್ಯಕ್ಕೆ ಕೈಹಾಕಬಾರದು. ಭಾರತವು ವಿಶ್ವದಲ್ಲಿಯೇ ಅತ್ಯಂತ ಹೆಚ್ಚು ಯುವ ಜನಾಂಗವನ್ನು ಹೊಂದಿರುವ ದೇಶ, ಮುಂದಿನ ಶತಮಾನ ಅದು ಭಾರತದ್ದೆ ಏಕೆಂದರೆ ಉಳಿದ ರಾಷ್ಟ್ರಗಳಲ್ಲಿ ಯುವಕರ ಸಂಖ್ಯೆ, ಅತ್ಯಂತ ಕಡಿಮೆ ಇದೆ.
ಜೀವನಕ್ಕೆ ಸ್ಪಷ್ಟ ಗುರಿಯಿರಲಿ :- ಸ್ವಾಮಿ ವಿವೇಕಾನಂದರು ತಮ್ಮ ಯೌವನವನ್ನು ಸಾತ್ವಿಕ ಮಾರ್ಗದಲ್ಲಿ ಸಾಗಿಸಿದರು. ಪ್ರತಿ ಸಮಸ್ಯೆಯನ್ನು ಕೂಲಂಕಷವಾಗಿ ಪರಾಂಬರಿಸುತ್ತ, ಪ್ರಶ್ನಿಸುತ್ತ ಅದಕ್ಕೆ ತಕ್ಕ ಪರಿಹಾರವನ್ನು ಕಂಡುಕೊಂಡರು. ತಾರುಣ್ಯದಲ್ಲಿಯೇ ಅತ್ಯಂತ ಆಳವಾದ ಅಧ್ಯಯನ ಮಾಡಿ ಧರ್ಮ, ಶಾಸ್ತ್ರ, ತತ್ವಜ್ಞಾನ, ಸಂಸ್ಕೃತಿ ಮತ್ತು ರಾಷ್ಟ್ರೀಯತೆ ಕುರಿತು ಧ್ಯಾನಿಸಿದರು.
ಅವುಗಳನ್ನು ತಮ್ಮ ಬದುಕಿನ ಭಾಗವಾಗಿಸಿಕೊಳ್ಳಲು ಕಾರ್ಯತತ್ಪರರಾದರು. ಅನೇಕ ವರ್ಷಗಳವರೆಗೆ ದೇಶ ಪರ್ಯಟನ ಮಾಡಿದರು. ಪ್ರಪಂಚವನ್ನೂ ಸುತ್ತಿದರು. ತಮಗೆ ತಿಳಿಯದ ವಿಷಯದ ಬಗ್ಗೆ ಬಲ್ಲವರ ಜತೆಗೆ ದೀರ್ಘವಾಗಿ ಚರ್ಚಿಸಿ ತಮ್ಮ ದ್ವಂದ್ವಗಳನ್ನು ನಿವಾರಿಸಿಕೊಳ್ಳುತ್ತಿದ್ದರು.
ಮುಂದೆ ಅಮೆರಿಕದ ಶಿಕಾಗೋ ನಗರದಲ್ಲಿ ನಡೆದ ವಿಶ್ವಧರ್ಮ ಸಮ್ಮೇಳನದಲ್ಲಿ ಭಾಗವಹಿಸಿ ಭಾರತೀ ಯತೆಯ ಭವ್ಯ ಪರಂಪರೆಯನ್ನು ಇಡೀ ಜಗತ್ತಿಗೆ ಅರಿವಾಗುವಂತೆ ಅನಾವರಣ ಮಾಡಿದರು. ಕಾಮ-ಕ್ರೋಧ-ಮೋಹ-ಮದ-ಮತ್ಸರಗಳು ಯುವಕರ ಜೀವನದ ಕಲೆಗಳಾಗಬಾರದು ಎನ್ನುತ್ತಿದ್ದರು ವಿವೇ ಕಾನಂದರು. ಸಾಮಾಜಿಕ ಜಾಲತಾಣಗಳಲ್ಲಿ ಕಾಲಹರಣ ಮಾಡುತ್ತ, ಲೈಕುಗಳನ್ನು ಎಣಿಸುತ್ತ ಕಾಲಹರಣ ಮಾಡುವುದೇ ಮಹತ್ತರವಾಗದೇ ಜೀವನದಲ್ಲಿ ಸ್ಪಷ್ಟ ಗುರಿಗಳನ್ನಿರಿಸಿಕೊಂಡು ಹೆಜ್ಜೆ ಇರಿಸಬೇಕು.ಇಲ್ಲವಾದಲ್ಲಿ ನಮ್ಮ ಜನ್ಮಕ್ಕೆ ಸಾಥ೯ಕತೆ ಸಿಗಲಾರದು.
ಬದುಕಲು ಸುವರ್ಣಾವಕಾಶಗಳಿವೆ! ;- ಈ ಪ್ರಪಂಚ ಬಹು ದೊಡ್ಡದು. ಇಲ್ಲಿ ಎಲ್ಲರೂ ಸುಖ, ಸಂತೋಷ ಮತ್ತು ಸಂಭ್ರಮದಿಂದ ಬದುಕಲು ಸುವರ್ಣಾವಕಾಶಗಳಿವೆ. ಹೇಗೆ ಸ್ವಾಮಿ ವಿವೇಕಾನಂದರು ತಮ್ಮ ಜ್ಞಾನದ ಪರಿಧಿಯನ್ನು ವಿಸ್ತರಿಸುತ್ತಾ ಹೋದರೋ ಹಾಗೆ ಯುವಕರು ಬೇರೆ ಬೇರೆ ಕ್ಷೇತ್ರಗಳ ಜ್ಞಾನ ಸಂಪಾದಿಸಬೇಕು. ವಿವಿಧ ಕೌಶಲಗಳನ್ನು ಕಲಿತು, ಯೋಗ್ಯತೆ ಹೆಚ್ಚಿಸಿಕೊಳ್ಳಬೇಕು. ಕೌಟುಂಬಿಕ, ಸಾಮಾಜಿಕ, ಔದ್ಯೋಗಿಕ, ಸಾರ್ವತ್ರಿಕ ಮತ್ತು ವೈಯಕ್ತಿಕ ಕ್ಷೇತ್ರಗಳಲ್ಲಿಶ್ರೇಷ್ಠತೆಗೆ ಬೇಕಾಗಿರುವ ಕೌಶಲಗಳನ್ನು ಪಡೆದುಕೊಳ್ಳಬೇಕು.
ಕಾಲಹರಣ ಮಾಡದೆ, ಕಾರ್ಯಕ್ಷಮತೆಯ ಮನೋಭಾವನ್ನು ಬೆಳೆಸಿಕೊಳ್ಳಬೇಕು. ಬದುಕು ಸುಂದರ ವಾಗಲು ನಿರಂತರ ಕಲಿಕೆ, ಸತತ ಪರಿಶ್ರಮ, ಸಮಯೋಚಿತ ಪ್ರಜ್ಞೆ, ಪ್ರಾಮಾಣಿಕತೆ, ಪಾರದರ್ಶಕತೆ ಯನ್ನು ರೂಢಿಸಿಕೊಳ್ಳಬೇಕು. ರಚನಾತ್ಮಕ ಕಾರ್ಯಗಳಲ್ಲಿ ತೊಡಗಿಸಿಕೊಂಡು ಸಮೃದ್ಧ ಬದುಕನ್ನು ಕಟ್ಟಿಕೊಂಡರೆ ಯೌವನಕ್ಕೆ ಬಹು ದೊಡ್ಡ ಗೌರವ ಸಿಕ್ಕಂತಾಗುತ್ತದೆ. ನಮ್ಮ ಕೌಟುಂಬಿಕ , ಸಾಮಾಜಿಕ ಮತ್ತು ಉದ್ಯೋಗ ಜೀವನ ಉತ್ತಮಗೊಳಿಸಲು ಪರಿಶ್ರಮ ಮತ್ತು ಗುರಿ ಅಗತ್ಯ'
ತಮ್ಮತನವೆಂಬ ಅಸ್ಮಿತೆ :- ನುಡಿದಂತೆ ಬದುಕಬೇಕು. ಮತ್ತೊಬ್ಬರನ್ನು ಅನಾಯಾಸವಾಗಿ ಅನು ಕರಿಸುವುದಕ್ಕಿಂತ, ಬೇಕಾದರೆ ಅನುಸರಿಸುವ ಕುಶಲಮಾರ್ಗವನ್ನು ಬೆಳೆಸಿಕೊಳ್ಳಬೇಕು. ಎಂಥ ಕಠಿಣ ಪರಿಸ್ಥಿತಿ ಬಂದರೂ ಸಮಾಧಾನ, ಸದ್ವಿನಯ, ಸದ್ಭಾವದಿಂದ ತಮ್ಮತನದ ಸಂರಕ್ಷಣೆ ಮಾಡಿಕೊಳ್ಳ ಬೇಕು.
'ಚಲನಚಿತ್ರ ನಾಯಕ'ರು ಆದರ್ಶಪುರುಷರಾಗುವುದಕ್ಕಿಂತ 'ಚರಿತ್ರನಾಯಕ'ರು ಆದಶ೯ರು ನಮಗೆ: ಸ್ವಾಮಿ ವಿವೇಕಾನಂದರು ಜಗತ್ತಿನ ವಿವಿಧ ದೇಶಗಳನ್ನು ಸುತ್ತಿದರು. ಭಾರತೀಯತೆ ಮತ್ತು ಸನಾತನತೆಯ ಕುರಿತು ಪ್ರಖರವಾಗಿ, ನಿಖರವಾಗಿ ಮಾತನಾಡಿದರು. ಯಾವುದೇ ದೇಶದಲ್ಲಿದ್ದಾಗಲೂ ತಮ್ಮತನ ಮಾರಿಕೊಳ್ಳಲಿಲ್ಲ. ತಮ್ಮ ದಿರಿಸು, ಆಹಾರ, ಆಚಾರ, ವಿಚಾರ, ಮಾತೃಭೂಮಿಯ ಅನನ್ಯತೆ ಮತ್ತು ಅದಮ್ಯತೆಯ ಕುರಿತು ಪ್ರವಚನಗಳನ್ನು ನೀಡಿದರು.
ನಿರ್ಮಾಣವಾಗಲಿ ರಾಜಮಾರ್ಗ," - ಸ್ವಾಮಿ ವಿವೇಕಾನಂದರು ಬದುಕಿದ್ದು ಕೇವಲ 39 ವರ್ಷ 5 ತಿಂಗಳು, 22 ದಿವಸ. ಆದರೆ ಆ ಮಹಾನ್ ಸಂತ ಇಲ್ಲಿ ಬಿಟ್ಟು ಹೋಗಿದ್ದು ಸಹಸ್ರಾರು ಯುಗಗಳವರೆಗೂ ಉಳಿದು ಬೆಳೆಯಬಲ್ಲ ಅಧ್ಯಾತ್ಮಿಕ ಔನ್ನತ್ಯದ ಮೌಲ್ಯಗಳು. ಅವರು ಆಗಿನ ಕಾಲಕ್ಕಿಂತ ಈಗ ಇನ್ನೂ ಹೆಚ್ಚು ಪ್ರಭಾವ ಬೀರುತ್ತಿದ್ದಾರೆ ಮತ್ತು ಅಷ್ಟೇ ಪ್ರಸ್ತುತರೂ ಆಗಿದ್ದಾರೆ. ಅದು ಆ ಸಂತನ ವರ್ಣಿಸಲಾಗದ ತಾಕತ್ತು. ತಂತ್ರಜ್ಞಾನವನ್ನು ಲೀಲಾಜಾಲವಾಗಿ ಬಳಸುವ, ಸಾಮಾಜಿಕ ಜಾಲತಾಣದಲ್ಲಿ ಪ್ರತಿದಿನ, ಪ್ರತಿಕ್ಷಣ ಹೊಸತನ್ನು ಸೃಷ್ಟಿಸಿ ಜಿಜ್ಞಾಸೆ ಮೂಡಿಸುವ ಯುವಕರನ್ನು ಸರಿಯಾದ ಮಾರ್ಗದಲ್ಲಿ ನಡೆ ಯಿರಿ ಎಂದು ಹೇಳುವುದಕ್ಕಿಂತ, ಅವರು ಅರಿತು, ಬೆರೆತು ಬೆಳೆಯಲು ಸರಿಯಾದ ಮಾರ್ಗಗಳನ್ನು ನಿರ್ಮಿಸಿಕೊಡಬೇಕಾಗಿದ್ದು ಸಮಾಜ ಮತ್ತು ಜವಾಬ್ದಾರಿಯುತ ಸರಕಾರಗಳ ಆದ್ಯತೆ.
ಅವರಲ್ಲಿ ಧನಾತ್ಮಕ ಚಿಂತನೆ ಒಡಮೂಡಬೇಕಾದರೆ ಅವರಲ್ಲಿ ಸಮಾಜ ಮತ್ತು ಸರಕಾರಗಳ ಬಗ್ಗೆ ನಂಬಿಕೆ ಬರುವಂತಾಗಬೇಕು. ಶಾಲೆ-ಕಾಲೇಜುಗಳು ಅವರಿಂದ ಬರೀ ಫೀಜು ಕಿತ್ತುಕೊಳ್ಳುವ ಹಣ ಪಿಪಾಸುಗಳಾಗದೆ ಯುವಕರ ಸರ್ವಾಂಗೀಣ ಅಭಿವೃದ್ಧಿಗೆ 'ರಾಜಮಾರ್ಗ'ವಾಗಬೇಕು.
ಯುವ ಸಮುದಾಯದ ಶಕ್ತಿಯನ್ನು ಸರಿಯಾಗಿ ಬಳಸಿಕೊಳ್ಳಬೇಕು. ಅವರಿಗೆ ಕಲಿಯಲು ಉತ್ತಮ ಶಿಕ್ಷಣ ಸಂಸ್ಥೆಗಳನ್ನು ನಿರ್ಮಿಸಬೇಕು. ದುಡಿಯಲು ಉದ್ಯೋಗಾವಕಾಶಗಳನ್ನು ವಿಪುಲವಾಗಿ ಸೃಷ್ಟಿಸಬೇಕು. ಮಸ್ತಕಕ್ಕೊಂದು ಪುಸ್ತಕ ಓದುವ ಗೀಳು ಹಚ್ಚಿಸಬೇಕು. ಸ್ವಜನಶೀಲತೆಯಿಂದ ಧಕ್ಕೆಯಾಗದಂತೆ ಅವರ ಸೃಜನಶೀಲತೆಗೆ ಮುಕ್ತ ಪರಿಸರ ನಿರ್ಮಾಣ ಮಾಡಬೇಕು. ಯುವಕರನ್ನು ಬರಿ ಹೊಗಳಿ ಹೊನ್ನ ಶೂಲ ಕ್ಕೇರಿಸದೆ, ಸರಿಯಾದ ಮಾರ್ಗದರ್ಶನ ಮತ್ತು ಅವಕಾಶ ಕೊಟ್ಟರೆ ಅವರೂ ಯೋಗ್ಯವಾಗಿ ಬದುಕು ನಡೆಸುತ್ತಾರೆ. ಯುವ ಜನಾಂಗ "ಯೂಸ್ ಲೆಸ್ ಅಲ್ಲ ಬದಲಾಗಿ ಯೂಸಡ್ ಲೆಸ್ "
ದೇಶದಲ್ಲಿ ಹೊಸ ಬದಲಾವಣಿ ತರಬೇಕಾದರೆ, ನಾವೆಲ್ಲರೂ ಬದಲಾಗಬೇಕು ಇಲ್ಲವಾದಲ್ಲಿ ಬದಲಾವಣೆಯೇ ಬದಲಾಯಿಸುತ್ತದೆ. ಸ್ವಾಮೀಜಿಯ ಜನ್ಮದಿನದ ನೆನಪು ನಮ್ಮ ಬದುಕಿಗೆ ಹೊಸ ಭಾಷ್ಯ ಬರೆಯಲಿ.
✍🏼 ರಾಘವೇಂದ್ರ ಪ್ರಭು ಕವಾ೯ಲು