ಉಡುಪಿ: ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಯಾದ ಪ್ರಧಾನಮಂತ್ರಿ ವಿಶ್ವಕರ್ಮ ಯೋಜನೆ ಅನುಷ್ಠಾನವನ್ನು ತೀವ್ರಗೊಳಿಸಲು ಮತ್ತು ಫಲಾನುಭವಿಗಳಿಗೆ ಸಾಲ ಸೌಲಭ್ಯಗಳನ್ನು ನೀಡಲು ಸಂಸದ ಕೋಟ ಶ್ರೀನಿವಾಸ ಪೂಜಾರಿಯವರು ರಜತಾದ್ರಿ, ಕಚೇರಿಯಲ್ಲಿ ಜಿಲ್ಲಾ ಮಟ್ಟದ ಅಧಿಕಾರಿಗಳ ಜೊತೆ ಸುಧೀರ್ಘ ಸಭೆ ನಡೆಸಿದರು.
ಆಯ್ಕೆಯಾದ ೬,೭೩೨ ಫಲಾನುಭವಿಗಳ ಫೈಕಿ ೪,೮೬೪ ಮಂದಿ ತರಬೇತಿ ಪಡೆದಿದ್ದು, ಇನ್ನುಳಿದ ಅರ್ಜಿದಾರರಿಗೆ ತರಬೇತಿ ಕೇಂದ್ರಗಳನ್ನು ಸಮರ್ಪಕಗೊಳಿಸಲು ಮತ್ತು ಪ್ರತಿಯೊಬ್ಬ ತರಬೇತಿ ಪಡೆದ ವ್ಯಕ್ತಿಗಳಿಗೆ ಸಾಲ ಸೌಲಭ್ಯ ಒದಗಿಸಲು ಸಂಸದ ಕೋಟ ಸೂಚನೆ ನೀಡಿದರು.
ಟೈಲರಿಂಗ್, ಕ್ಷೌರಿಕರು, ಬುಟ್ಟಿ ತಯಾರಕರು, ಮರಗೆಲಸ ಮಾಡುವವರು, ಚಿನ್ನ ಬೆಳ್ಳಿ ಕೆಲಸಗಾರರು, ಮೇಸ್ತಿಗಳು, ಮಡಿಕೆ ತಯಾರಕರು, ಶಿಲ್ಪಕಲಾಕಾರರು ಮುಂತಾದ ೧೮ ಸಾಂಪ್ರಾದಾಯಿಕ ಕುಲಕಸುಬು ಗಳಿಗೆ ತರಬೇತಿ ನೀಡಿ ಮತ್ತು ಉತ್ತಮ ಗುಣಮಟ್ಟದ ಟೂಲ್ ಕಿಟ್‌ಗಳನ್ನು ಒದಗಿಸಿ, ಸಕಾಲದಲ್ಲಿ ಸಾಲ ಸೌಲಭ್ಯ ಒದಗಿಸುವುದು ಈ ಯೋಜನೆಯ ಉದ್ದೇಶವಾಗಿದ್ದು, ಉಡುಪಿ ಜಿಲ್ಲೆಯಲ್ಲಿ ಶೀಘ್ರ ಅನುಷ್ಠಾ ನಕ್ಕೆ ಸಹಕರಿಸಬೇಕೆಂದು ಸಂಸದ ಕೋಟ ಸೂಚಿಸಿರುತ್ತಾರೆ.
ಸಭೆಯಲ್ಲಿ ಜಿಲ್ಲಾ ಕೌಶಲ್ಯ ಅಭಿವೃದ್ಧಿ ಅಧಿಕಾರಿ ಶ್ರೀ ಶ್ರೀನಿವಾಸ ರಾವ್, ಸಹಾಯಕ ನಿರ್ದೇಶಕರು, ಕೈಗಾರಿಕಾ ಇಲಾಖೆ ಶ್ರೀ ಸೀತಾರಾಮ ಶೆಟ್ಟಿ, ಲೀಡ್ ಬ್ಯಾಂಕ್ ಮ್ಯಾನೇಜರ್ ಶ್ರೀ ಹರೀಶ್, ಹಾಗೂ ಕೇಂದ್ರ ಸರ್ಕಾರದ ವಿಶ್ವಕರ್ಮ ಅನುಷ್ಠಾನ ಸಮಿತಿಯ ನಾಮ ನಿರ್ದೇಶಿತ ಸದಸ್ಯರಾದ ಶ್ರೀ ಶ್ರೀನಿಧಿ ಹೆಗ್ಡೆ ಹಾಗೂ ಶ್ರೀ ಸುರೇಂದ್ರ ಪಣಿಯೂರು ರವರು ಹಾಜರಿದ್ದರು.