Header Ads Widget

ದುಡಿದ‌ ಹಣದಲ್ಲಿ‌ ಸಮಾಜ, ದೇವಸ್ಥಾನಕ್ಕೆ ಅಲ್ಪಭಾಗ ಮೀಸಲಿಡಿ~ ಕೃಷ್ಣಮೂರ್ತಿ‌ ಮಂಜ‌

ಮಂದಾರ್ತಿ: ಹಬ್ಬ ಹರಿದಿನಗಳಲ್ಲಿ ನಾವೆಲ್ಲ ಒಂದಾಗುವ ಸಂಪ್ರದಾಯವನ್ನು ನಾವು ಮುಂದುವರಿಸಿ ಕೊಂಡು ಹೋಗಿ ನಮ್ಮ‌ ಸಂಸ್ಕ್ರತಿಯನ್ನು ಉಳಿಸಿಕೊಳ್ಳ ಬೇಕು.‌ದುಡಿದ ಒಂದು ಭಾಗವನ್ನು ಸಮಾಜ ಸೇವೆ ಮತ್ತು ಧಾರ್ಮಿಕ‌ ಕಾರ್ಯಕ್ರಮಗಳಿಗೆ ಮೀಸಲಿಡಿ ಎಂದು ಹೋಟೆಲ್ ಉದ್ಯಮಿ ಮಾರಣಕಟ್ಟೆ ಕೃಷ್ಣಮೂರ್ತಿ ಮಂಜ  ಹೇಳಿದರು.


ಮಂದಾರ್ತಿಯಲ್ಲಿ ಅವರು ಶನಿವಾರ ನಮಸ್ತೆ ಭಾರತ್ ಟ್ರಸ್ಟ್ ವತಿಯಿಂದ ನಡೆದ ಸಂಕೀರ್ತನ ಮಂದಾರ್ತಿ ರಾಷ್ಟ್ರಮಟ್ಟದ ಕುಣಿತ ಭಜನಾ ಸ್ಪರ್ಧೆಗೆ ಚಾಲನೆ ನೀಡಿ ಮಾತನಾಡಿದರು. ಟಿ.ವಿ, ಮೊಬೈಲ್ ಇರದ ಕಾಲದಲ್ಲಿ ಚಿಮಣಿ‌ ದೀಪದ‌ ಬೆಳಕಿನಲ್ಲಿಯೇ ಎಲ್ಲರೂ ಒಂದಾಗಿ ಭಜನೆ ಮಾಡುವ‌ ಸಂಪ್ರದಾಯ ಇತ್ತು. 


ಆದರೆ ಮಾದಕ ದ್ರವ್ಯಕ್ಕಿಂತಲೂ ಅಪಾಯಕಾರಿಯಾದ ಮೊಬೈಲ್ ನಿಂದ ಇಂದು ಎಲ್ಲವನ್ನೂ ಮರೆತಿದ್ದೇವೆ. ಭಜನಾ‌ ಸಂಸ್ಕೃತಿಯನ್ನು ನಾವು ಬೆಳೆಸಬೇಕು.‌ಇಂತಹ ಸಂಘಟನೆಗಳ ಕಾರ್ಯ ನಿಜಕ್ಕೂ ಶ್ಲಾಘನೀಯ ಎಂದರು.


ಮುಖ್ಯ ಭಾಷಣ ಮಾಡಿದ ಕಲ್ಲಡ್ಕ ಪ್ರಭಾಕರ ಭಟ್ ದೇವರೊಂದಿಗೆ ನೇರ ಸಂಪರ್ಕ ಭಜನೆಯ ಮೂಲಕ ಆಗುತ್ತದೆ. ‌ದೇವರು ದೇಶದ ಆರಾಧನೆಯನ್ನು ಮಾಡುವ ಬಗ್ಗೆ ನಮ್ಮ ಮುಂದಿನ‌ ಪೀಳಿಗೆಗೆ ತಿಳಿಸಿಕೊಡ ಬೇಕಾಗಿದೆ. ಹಣಕ್ಕೋಸ್ಕರ ಭಜನಾ ಸಂಪ್ರದಾಯ ಬೆಳೆಯದೇ ದೇವರ ಮೇಲಿನ‌ ಭಕ್ತಿಯ ಸ್ವರೂಪದ ಚಿಂತನೆಯನ್ನು ಮೂಡಿಸುವಂತಾಗಬೇಕು.‌ನಮ್ಮ ಸಂಸ್ಕೃತಿ, ಧರ್ಮವನ್ನು ನೆನಪಿಸುವ ಕಾರ್ಯವನ್ನು ಸಂಕೀರ್ತನ ಮಂದಾರ್ತಿ ಮಾಡಿದೆ ಎಂದರು.


ನಮ್ಮದು ಬಹು ಸಂಸ್ಕೃತಿಯ ದೇಶ ಅಲ್ಲ.‌ಸಂಪ್ರದಾಯದ ದೇಶವಾಗಿದೆ. ತಾಯಿಯನ್ನು ಪ್ರೀತಿಸುವ ದೇಶವಾಗಿದೆ. ಹಿಂದೆ ಭಾರತದ ಮೇಲೆ  ಮುಸಲ್ಮಾನರು, ಕ್ರೈಸ್ತರ ದಾಳಿ ನಡೆದಿದ್ದರೂ,‌ ಹಿಂದೂ ಸಂಸ್ಕೃತಿ ನಮ್ಮ  ಮನೆ, ಕುಟುಂಬ, ತಾಯಿ, ದೇಶ ಸಮಾಜ ಎನ್ನುವ‌ ನಂಬಿಕೆಯಿಂದ   ಉಳಿದಿದೆ ಎಂದು ಹೇಳಿದರು.


ವಕ್ಫ ಹೆಸರಿನಲ್ಲಿ ನಮ್ಮ ಭೂಮಿ ಕಳೆದುಕೊಳ್ಳುತ್ತಿದ್ದೇವೆ. ಆದರೆ ಹಿಂದೂಗಳು ನಂಬಿರುವ‌ ನಮ್ಮ ತಾಯಿಯ ಜನ್ಮಭೂಮಿ‌ ವಕ್ಫ್ ಆಗುವುದಿಲ್ಲ. ಆಗಲು ಬಿಡುವುದಿಲ್ಲ ಎಂದು ಹೇಳಿದರು. ಬೆಂಗಳೂರಿನ ಎಂ.ಆರ್.ಜಿ ಸಮೂಹ ಸಂಸ್ಥೆಯ ಡಾ.ಪ್ರಕಾಶ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು.


ಬೆಳಗಾಂನ ಉದ್ಯಮಿ ಉದಯ ಕುಮಾರ ಶೆಟ್ಟಿ, ಮಲ್ಪೆಯ ಸಾಧು ಸಾಲಿಯಾನ್,‌ಮಂದಾರ್ತಿ ದೇವ ಸ್ಥಾನದ ಆಡಳಿತ ಮೊಕ್ತೇಸರ ಎಚ್. ಧನಂಜಯ ಶೆಟ್ಟಿ, ಅರ್ಚಕ ಶ್ರೀಪತಿ ಅಡಿಗ, ಬೆಂಗಳೂರಿನ ಉದ್ಯಮಿ ವಿಜಯನಾಥ ಹೆಗ್ಡೆ, ಎಚ್. ಶೇಡಿಕೊಡ್ಲು ವಿಠಲ್ ಶೆಟ್ಟಿ, ಪ್ರಶಾಂತ ಶೆಟ್ಟಿ‌ ವಂಡಾರು, ಕಾರವಾರದ ಸುನಿಲ್ ಸೋನಿ ಇದ್ದರು.


ನಮಸ್ತೆ ಭಾರತ್ ಟ್ರಸ್ಟ್ ನ ಪ್ರಮೋದ್ ಮಂದಾರ್ತಿ ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿದರು. ಪತ್ರಕರ್ತ ಕೆ.ಸಿ ರಾಜೇಶ್ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.