ಉಡುಪಿಯ ಕಲ್ಪನಾ ಟಾಕೀಸ್ ಬಳಿ ಮುಖ್ಯ ರಸ್ತೆಯಲ್ಲಿ ಸಾರ್ವಜನಿಕರಿಗೆ ಹಲ್ಲೆ ನಡೆಸಿ ತಪ್ಪಿಸಿಕೊಂಡು ಓಡಿ ಹೋಗುತ್ತಿದ್ದ ಮಾನಸಿಕ ಅಸ್ವಸ್ಥ ಯುವಕನನ್ನು ಸಮಾಜ ಸೇವಕ ವಿಶು ಶೆಟ್ಟಿ ಅವರು ಸಾರ್ವಜನಿಕರ ಸಹಾಯದಿಂದ ರಕ್ಷಿಸಿ ಬಾಳಿಗಾ ಆಸ್ಪತ್ರೆಗೆ ದಾಖಲಿಸಿದ್ದು, ಇದೀಗ ಗುಣಮುಖನಾದ ಆತನನ್ನು ಗುರುವಾರ ಆತನ ಹುಟ್ಟೂರು ಕೋಲ್ಕತ್ತಕ್ಕೆ ರೈಲಿನ ಮೂಲಕ ಕಳುಹಿಸಿಕೊಟ್ಟು ನೈಜ ಮಾನವೀಯತೆ ಮೆರೆದಿದ್ದಾರೆ.
ಈ ಮಾನಸಿಕ ಅಸ್ವಸ್ಥ ಯುವಕ ಕೊಲ್ಕತ್ತದ ಸತೀಂದರ್ ಸಿಂಗ್, ಗುಣಮುಖನಾಗಿ ಆಸ್ಪತ್ರೆ ಸಿಬ್ಬಂದಿಗಳಿಗೆ ತನ್ನ ಕುಟುಂಬದ ವಿಳಾಸವನ್ನು ನೀಡಿ ಊರಿಗೆ ಹೋಗುವ ಇಚ್ಛೆಯನ್ನು ವ್ಯಕ್ತ ಪಡಿಸಿದ್ದಾನೆ. ಆತ ನೀಡಿದ ಮಾಹಿತಿಯನ್ನು ಅನುಸರಿಸಿ ದೂರವಾಣಿ ಕರೆಯ ಮೂಲಕ ಆತನ ಪತ್ನಿಯನ್ನು ಸಂಪರ್ಕಿಸಿ ಮಾಹಿತಿ ನೀಡಲಾಗಿದೆ. ಆದರೆ ಪತ್ನಿಗೆ ಚಿಕ್ಕ ಮಕ್ಕಳಿರುವುದರಿಂದ ಆಕೆ ಉಡುಪಿಗೆ ಬರಲು ಅಸಹಾಯಕತೆ ವ್ಯಕ್ತ ಪಡಿಸಿದ್ದು, ಗಂಡನನ್ನು ರೈಲಿನ ಮೂಲಕ ಕೊಲ್ಕತ್ತಕ್ಕೆ ಕಳುಹಿಸಿಕೊಡುವಂತೆ ಮನವಿ ಮಾಡಿದ್ದಾರೆ. ಅದರಂತೆ ವಿಶು ಶೆಟ್ಟಿ ಅವರು ಸತಿಂದರ್ ಸಿಂಗ್‌ನನ್ನು ಮಂಗಳೂರು ರೈಲ್ವೆ ನಿಲ್ದಾಣಕ್ಕೆ ಕರೆದೊಯ್ದು, ಅಲ್ಲಿಂದ ಕೊಲ್ಕತ್ತಕ್ಕೆ ಸಾಗುವ ರೈಲಿನಲ್ಲಿ ಕಳುಹಿಸಿಕೊಟ್ಟಿದ್ದಾರೆ.
ಹುಟ್ಟೂರಿಗೆ ತೆರಳುವ ಸಂದರ್ಭದಲ್ಲಿ ಬರಿಗೈಯಲ್ಲಿ ಹೇಗೆ ತೆರಳಲಿ ಎಂದು ದು:ಖಿಸುತ್ತಿದ್ದ ಸತಿಂದರ್ ಸಿಂಗ್‌ಗೆ ರೈಲು ಟಿಕೇಟು ಜೊತೆಗೆ ರೂ.7500/- ನೀಡಿ ವಿಶು ಶೆಟ್ಟಿ ಸಹಕರಿಸಿದ್ದಾರೆ. ಅಲ್ಲದೆ ಆಸ್ಪತ್ರೆಯ ಚಿಕಿತ್ಸೆಯ ವೆಚ್ಚ ರೂ.9600/- ಗಳಾಗಿದ್ದು, ದಾನಿ ಗಿರೀಶ್ ಅವರು ರೂ.7,೦೦೦/- ನೀಡಿದ್ದರೆ, ಉಳಿದ ಮೊತ್ತವನ್ನು ವಿಶು ಶೆಟ್ಟಿ ಅವರೇ ಭರಿಸಿದ್ದಾರೆ. ವಿಶು ಶೆಟ್ಟಿ ಅವರ ಈ ಮಾನವೀಯ ಕಳಕಳಿಗೆ ಅಪಾರ ಪ್ರಶಂಸೆ ವ್ಯಕ್ತವಾಗಿದೆ.
ಈ ಸೇವಾ ಕಾರ್ಯದಲ್ಲಿ ಸಾಮಾಜಿಕ ಕಾರ್ಯಕರ್ತ ಹರೀಶ್ ಉದ್ಯಾವರ ನೆರವಾದರು.
ಪ್ರಕರಣದ ಹಿನ್ನಲೆ : ಉಡುಪಿಯಲ್ಲಿ ಭಯದ ವಾತಾವರಣ ಸೃಷ್ಟಿಸಿದ್ದ ಸತಿಂದರ್ ಸಿಂಗ್ ದುಡಿಮೆಗಾಗಿ ಉಡುಪಿಗೆ* ಆಗಮಿಸಿ, ಮಾನಸಿಕ ಅಸ್ವಸ್ಥತೆಗೆ ಒಳಗಾಗಿದ್ದ, ಈತನ ಉಪಟಳ ತಾಳಲಾದರೆ ಸಾರ್ವಜನಿಕರು ಪೊಲೀಸರಿಗೆ ದೂರು ನೀಡಿದ್ದರು. ಪೊಲೀಸರ ವಿನಂತಿಯ ಮೇರೆಗೆ ವಿಶು ಶೆಟ್ಟಿ ಅವರು ಕಾರ್ಯಾಚರಣೆ ನಡೆಸಿ ಆತನನ್ನು ಬಾಳಿಗಾ ಆಸ್ಪತ್ರೆಗೆ ದಾಖಲಿಸಿದ್ದಾರೆ. ರಕ್ಷಣಾ ಸಮಯದಲ್ಲಿ ಆತ ಕಬ್ಬಿಣದ ತುಂಡೊಂದನ್ನು ನುಂಗಲು ವಿಫಲ ಪ್ರಯತ್ನ ನಡೆಸಿದ್ದ. ಅಲ್ಲದೆ ಆಸ್ಪತ್ರೆಗೆ ಕರೆದುಕೊಂಡು ಹೋಗುವ ಸಮಯದಲ್ಲಿ ನನ್ನನ್ನು ಬಿಡಿ, ನಾನು ಆತ್ಮಹತ್ಯೆ ಮಾಡಿಕೊಳ್ಳುತ್ತೇನೆ ಎಂದೆಲ್ಲಾ ಪ್ರಲಾಪಿಸುತ್ತಿದ್ದ.
ಮಾನಸಿಕ ಅಸ್ವಸ್ಥತೆ ಬಗ್ಗೆ ಜಾಗೃತಿ ಮೂಡಿಸಿ :
ಕಳೆದ 35 ವರ್ಷಗಳಿಂದ ತಾನು ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡಿದ್ದು, ಬೀದಿಪಾಲಾದ, ಮಾನಸಿಕ ಅಸ್ವಸ್ಥತೆಗೆ ಒಳಗಾದ ನೂರಾರು ಮಂದಿಯನ್ನು ರಕ್ಷಿಸಿ, ಅವರಿಗೆ ಪುನರ್ಜನ್ಮ ನೀಡುವ ಕಾರ್ಯ ಮಾಡುತ್ತಿದ್ದೇನೆ. ಇಂತಹ ಮಂದಿಗೆ ಸೂಕ್ತ ಪುನರ್ವಸತಿ ಕಲ್ಪಿಸುವ ಯಾವುದೇ ಸರಕಾರಿ ಕೇಂದ್ರಗಳು ಉಡುಪಿಯಲ್ಲಿಲ್ಲ. ಹೀಗಾಗಿ ಇದೊಂದು ದೊಡ್ಡ ಸಮಸ್ಯೆಯಾಗಿ ಮಾರ್ಪಟ್ಟಿದೆ. ಜೊತೆಗೆ ಮಾನಸಿಕ ಅಸ್ವಸ್ಥರನ್ನು ಸಮಾಜ ಯಾವ ರೀತಿ ನಡೆಸಿಕೊಳ್ಳಬೇಕು ಎಂಬುದರ ಬಗ್ಗೆ ಜಿಲ್ಲಾಡಳಿತ, ಇಲಾಖೆಗಳು ಸೂಕ್ತ ಮಾಹಿತಿಯನ್ನು ಜನ ಸಾಮಾನ್ಯರಿಗೆ ಒದಗಿಸುವ ಕಾರ್ಯ ಮಾಡಬೇಕು. ಈ ಮೂಲಕ ಸಂಭಾವ್ಯ ದುರಂತಗಳನ್ನು ತಪ್ಪಿಸಬೇಕು. 112ಸೇವೆಯಡಿ ತುರ್ತು ಸಂದರ್ಭದಲ್ಲಿ ಮಹಿಳೆಯರು, ಮಕ್ಕಳನ್ನು ರಕ್ಷಿಸಿ ಕರೆದೊಯ್ಯಲು ಅವಕಾಶ ಮಾಡಿಕೊಡಬೇಕು ಎಂದು ವಿಶು ಶೆಟ್ಟಿ ಜಿಲ್ಲಾಡಳಿತಕ್ಕೆ ಮನವಿ ಮಾಡಿದ್ದಾರೆ.