ಕಾರ್ಕಳ : ಪ್ರಸ್ತುತ ಕಾಲಘಟ್ಟದಲ್ಲಿ ಅಕ್ಷರ ಜ್ಞಾನದ ಜೊತೆಗೆ ನಾಟಕಗಳು ವಿದ್ಯಾರ್ಥಿಗಳಿಗೆ ಮತ್ತು ಯುವಕರ ಬದುಕಿಗೆ ದಾರಿದೀಪವಾಗುತ್ತವೆ ಮತ್ತು ಮುಂದಿನ ಪೀಳಿಗೆಗೆ ಬಹುಮುಖ್ಯ ಪಾತ್ರ ವಹಿಸುತ್ತವೆ ಎಂದು ಕಾರ್ಕಳ ಭುವನೇಂದ್ರ ಕಾಲೇಜಿನ ಪ್ರಾಂಶುಪಾಲ ಡಾ.ಮಂಜುನಾಥ ಕೋಟ್ಯಾನ್ ಹೇಳಿದರು.
ಅವರು ಕಾರ್ಕಳದ ಕೋಟಿ ಚೆನ್ನಯ ಥೀಂ ಪಾರ್ಕ್ ನ ಬಯಲು ರಂಗಮ೦ದಿರದಲ್ಲಿ ಯಕ್ಷ ರಂಗಾ ಯಣ ಕಾರ್ಕಳ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಉಡುಪಿ ಜಿಲ್ಲೆ ಇವರ ಆಶ್ರಯದಲ್ಲಿ ನಡೆದ ಮೂರು ದಿನದ ಮಕರಾಯನ ನಾಟಕೋತ್ಸವವನ್ನು ಜಂಬೆ ವಾದ್ಯ ಬಾರಿಸುವುದರ ಮೂಲಕ ಉದ್ಘಾ ಟಿಸಿ ಮಾತನಾಡುತ್ತಿದ್ದರು.
ನಾಟಕ, ಭಾಷೆ, ಕನ್ನಡ ಹಾಗೂ ಸಂಸ್ಕೃತಿಗಳನ್ನು ಬದುಕಲ್ಲಿ ಅಳವಡಿಸಿಕೊಳ್ಳಬೇಕು. ನಾಟಕಗಳು ವ್ಯಕ್ತ-ಅವ್ಯಕ್ತ, ದೃಶ್ಯ- ಅದೃಶ್ಯ ಮತ್ತು ಶ್ರಾವ್ಯ-ಅಶ್ರಾವ್ಯವನ್ನು ಉದ್ದೀಕರಿಸುತ್ತವೆ. ಇಂದಿನ ಯುವಕರು ಪಠ್ಯದ ಹೊರತು ಯೋಚಿಸಿ, ಕನ್ನಡ ನಾಟಕಗಳನ್ನು ನೋಡಿ ಮನದಟ್ಟು ಮಾಡಿಕೊಂಡರೆ ಸಮಾಜಕ್ಕೆ ಉತ್ತಮ ಪ್ರಜೆಯಾಗುವುದರಲ್ಲಿ ಸಂಶಯವೇ ಇಲ್ಲ ಎಂದ ಅವರು, ಯು.ಆರ್.ಅನಂತಮೂರ್ತಿ ಮತ್ತು ಗಿರೀಶ್ ಕಾರ್ನಾಡ್ ನಂತಹ ವ್ಯಕ್ತಿಗಳು ಕೂಡ ನಾಟಕ ರಂಗವನ್ನು ಪ್ರೊತ್ಸಾಹಿಸುವುದರ ಜೊತೆಗೆ ನಾಟಕಗಳ ಕುರಿತು ಬಹಳ ಆಸಕ್ತಿ ಹೊಂದಿದ್ದರು ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಯಕ್ಷ ರಂಗಾಯಣದ ನಿರ್ದೇಶಕ ಬಿ.ಆರ್.ವೆಂಕಟರಮಣ ಐತಾಳ ಮಾತನಾಡಿ, ಯಕ್ಷಗಾನದ ಜೊತೆಗೆ ನಾಟಕಗಳು ಕೂಡ ಜೀವನದಲ್ಲಿ ಜ್ಞಾನವನ್ನು ನೀಡುತ್ತವೆ. ಈ ನಾಟಕೋತ್ಸವದಲ್ಲಿ ಬಹಳಷ್ಟು ಜನ ಉತ್ತರ ಕರ್ನಾಟಕದ ಕಲಾವಿದರು ಭಾಗವಹಿಸಿದ್ದಾರೆ ಹಾಗೂ ಅವರು ತಮ್ಮ ಜವಾರಿ ಭಾಷೆಯ ವಿಡಂಬನೆಯನ್ನು ಅರ್ಥೈಸಲಿದ್ದಾರೆ. ನಾಟಕಗಳನ್ನು ನೋಡುವ ಮೂಲಕ ಕಲಾವಿದರಿಗೆ ಪ್ರೋತ್ಸಾಹ ನೀಡಬೇಕು ಎಂದರು.
ಕಾರ್ಯಕ್ರಮದಲ್ಲಿ ನಿರ್ದಿಗಂತ ಸಂಸ್ಥೆಯ ವ್ಯವಸ್ಥಾಪಕ ಗಣೇಶ್ ಭೀಮನಕೋಟೆ ಉಪಸ್ಥಿತರಿದ್ದರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕಿ ಮತ್ತು ಯಕ್ಷ ರಂಗಾಯಣದ ವಿಶೇಷ ಕರ್ತವ್ಯಾಧಿಕಾರಿ ಪೂರ್ಣಿಮಾ ಸ್ವಾಗತಿಸಿ, ನಿವೃತ್ತ ಶಿಕ್ಷಕ ವಸಂತ ನಿರೂಪಿಸಿ ವಂದಿಸಿದರು.
ತಿಂಡಿಗೆ ಬಂದ ತುಂಡೇ ರಾಯ, ಮಾಲತಿ ಮಾಧವ ಹಾಗು ಅಂಕದಪರದೆ ಈ ಮೂರೂ ನಾಟಕಗಳು ಪೇಕ್ಷಕರನ್ನು ಹಿಡಿದಿಟ್ಟುಕೊಳ್ಳುವಲ್ಲಿ ಯಶಸ್ವಿಯಾಯಿತು.
ಪೇಕ್ಷಕರ ಅಂಬೋಣ: :
* ಬಹಳ ಸುಂದರವಾದ ನಾಟಕಗಳು, ಹಾಡುಗಳು, ನಟನೆ ಮತ್ತು ಮಧುರವಾದ ಮಾತುಗಳು ಬಹಳ ಇಷ್ಟವಾಯಿತು. ನಾನು ಮೂರೂ ನಾಟಕವನ್ನು ನೋಡಿ ಖುಷಿ ಪಟ್ಟೆ~ ವೀಕ್ಷತ್ ಕಾರ್ಕಳ.
* ಪಾತ್ರಗಳು ಸನ್ನಿವೇಶಗಳು ಧ್ವನಿ, ಬಣ್ಣ, ವೇಷ ಅಭಿನಯದ ಮೂಲಕ ನಾಟಕಾಸಕ್ತರ ಮನ ಗೆದ್ದಿವೆ~ ಉಮೇಶ್ ರಾವ್ , ನೀರೆಬೈಲೂರು.