ಮೈಕ್ರೋ ಫೈನಾನ್ಸ್ ಕಂಪನಿಗಳ ಕಿರುಕುಳಕ್ಕೆ ಬೇಸತ್ತ ಮಹಿಳೆಯರು ಇದೀಗ ಮಾಂಗಲ್ಯ ಸರ ಉಳಿಸಿ ಅಭಿಯಾನ ಎಂಬ ವಿನೂತನ ಅಭಿಯಾನ ಒಂದನ್ನು ಆರಂಭಿಸಿದ್ದಾರೆ. ಇದರ ಭಾಗವಾಗಿ ಅವರು ಇದೀಗ ಸ್ವತಃ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಗೃಹ ಸಚಿವ ಜಿ ಪರಮೇಶ್ವರ್ ಅವರಿಗೆ ಪೋಸ್ಟ್ ಮೂಲಕ ತಾಳಿ ಸರ ರವಾನಿಸುವ ಮೂಲಕ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ಸಿಎಂ ಹಾಗೂ ಗೃಹ ಸಚಿವರಿಗೆ ಮಹಿಳೆಯರಿಂದ ಮಾಂಗಲ್ಯ ಪೋಸ್ಟ್!
ಮೈಕ್ರೋಫೈನಾನ್ಸ್ ಕಂಪನಿಗಳ ಹಾವಳಿ ಹೆಚ್ಚಾಗಿದ್ದು ಕೆಲವು ಊರುಗಳಲ್ಲಿ ಜನರು ಮನೆಯನ್ನೇ ಬಿಟ್ಟು ಓಡಿ ಹೋಗುವ ಸ್ಥಿತಿ ನಿರ್ಮಾಣವಾಗಿತ್ತು. ಈ ಹಿನ್ನೆಲೆಯಲ್ಲಿ ಸಿಎಂ ಸಿದ್ದರಾಮಯ್ಯನವರು ಮೈಕ್ರೋಫೈನಾನ್ಸ್‌ಗಳ ಕಿರುಕುಳ ಸಲ್ಲಿಸುವುದಿಲ್ಲ. ಅಂಥವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಸಿದ್ದರು. ಅದರ ಹೊರತಾಗಿಯೂ ರಾಜ್ಯದ ಹಲವೆಡೆ ಮೈಕ್ರೋಫೈನಾನ್ಸ್ ಸಿಬ್ಬಂದಿ ಕಿರುಕುಳ ಮುಂದುವರೆದಿತ್ತು. ಈ ಹಿನ್ನೆಲೆಯಲ್ಲಿ ರೊಚ್ಚಿಗೆದ್ದಿರುವ ಮಹಿಳೆಯರು ಸಿಎಂ ಸಿದ್ದರಾಮಯ್ಯ ಹಾಗೂ ಗೃಹ ಸಚಿವ ಜಿ ಪರಮೇಶ್ವರ್ ವಿರುದ್ಧ ವಿನೂತನ ಅಭಿಯಾನ ಒಂದನ್ನು ಆರಂಭಿಸಿದ್ದಾರೆ.
ರಾಯಚೂರು ಮಹಿಳೆಯರಿಂದ ಗೃಹ ಸಚಿವರಿಗೆ ಮಾಂಗಲ್ಯ ಪೋಸ್ಟ್!
ಹಾವೇರಿಯಲ್ಲಿ ಮೈಕ್ರೋ ಫೈನಾನ್ಸ್ ನವರ ಕಿರುಕುಳಕ್ಕೆ ಪತಿ ಬಲಿಯಾಗಿದ್ದು, ಮಾಂಗಲ್ಯ ಉಳಿಸದ ಆಡಳಿತ ವ್ಯವಸ್ಥೆಯ ವಿರುದ್ಧ ಮಾಂಗಲ್ಯ ಸರವನ್ನೇ ಗೃಹ ಮಂತ್ರಿಗೆ ಪೋಸ್ಟ್ ಮಾಡಿರುವ ನೊಂದ ಮಹಿಳೆ ಸರ್ಕಾರ ವಿರುದ್ಧ ವಿನೂತನ ಅಭಿಯಾನ ಆರಂಭಿಸಿದ್ದಾರೆ. ರಾಯಚೂರು ಜಿಲ್ಲೆಯ ಮಾನವಿ ತಾಲ್ಲೂಕಿನಲ್ಲಿ ಕಪಗಲ್‌ನಲ್ಲಿ ಇತ್ತೀಚೆಗೆ 30 ವರ್ಷದ ಶರಣಬಸವ ಎಂಬಾತ ಮೈಕ್ರೋಫೈನಾನ್ಸ್ ಕಿರುಕುಳಕ್ಕೆ ಬೇಸತ್ತು ಆತ್ಮಹತ್ಯೆ ಮಾಡಿಕೊಂಡಿದ್ದನು.
ಪತಿ ಸಾವಿಗೆ ನ್ಯಾಯ ನೀಡುವಂತೆ ಮನವಿ!
ಪತಿಯ ಸಾವಿಗೆ ನ್ಯಾಯ ನೀಡುವಂತೆ ಮಾಂಗಲ್ಯ ಸರವನ್ನೇ ಗೃಹ ಮಂತ್ರಿ ಜಿ ಪರಮೇಶ್ವರ್ ಅವರಿಗೆ ಪೋಸ್ಟ್ ಮೂಲಕ ಕಳುಹಿಸಿದ ಮೃತನ ಪತ್ನಿ ಪಾರ್ವತಿ ಸರ್ಕಾರ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಮೈಕ್ರೋ ಫೈನಾನ್ಸ್ ಹೆಸರಲ್ಲಿ ಬ್ಯಾಂಕ್ ಗಳು ನಡೆಸ್ತಿರುವ ಅನ್ಯಾಯದ ವಿರುದ್ಧ ಬೇಸರ ವ್ಯಕ್ತಪಡಿಸಿದ್ದಾರೆ. 5 ಲಕ್ಷ ಸಾಲ ನೀಡಿದ್ದ ಮೈಕ್ರೋಫೈನಾನ್ಸ್ ನವರು ಪಡೆದ ಸಾಲಕ್ಕೆ ಬಡ್ಡಿ ಹಾಗೂ ಅಸಲು ಕಟ್ಟುವಂತೆ ಕಿರುಕುಳ ನೀಡಿದ್ದರು. ಹಗಲು ರಾತ್ರಿ ಕಾಡಿದ್ದರಿಂದ ಶರಣಬಸವ ಅವರು ಮನೆ ಬಿಟ್ಟು ಹೋಗಿದ್ದರು. ಕೊನೆಗೂ ಮನವೊಲಿಸಿ ಮನೆಗೆ ಕರೆತಂದಾಗ ಬಾಯಿಗೆ ಬಂದಂತೆ ಬೈದು ಮೈಕ್ರೋಫೈನಾನ್ಸ್ ಸಿಬ್ಬಂದಿ ಅವಮಾನಿಸಿದ್ದರಂತೆ.
ಸಮಯ ಕೇಳಿದರೂ ನೀಡದೇ ಮನಬಂದಂತೆ ಬೈದ ಪರಿಣಾಮ ಶರಣಬಸವ ಅವರು ಕ್ರಿಮಿನಾಶಕ ಸೇವಿಸಿ ಆತ್ಮಹತ್ಯೆಗೆ ಶರಣಾಗಿದ್ದರು. ಈ ಹಿನ್ನೆಲೆ ಪತಿಯ ಸಾವಿಗೆ ಸರ್ಕಾರವೇ ಹೊಣೆ ಎಂದು ಆರೊಪಿಸಿ ಗೃಹಮಂತ್ರಿ ಜಿ ಪರಮೇಶ್ವರ್ ಅವರಿಗೆ ಮಾಂಗಲ್ಯ ಸರ ಕಳುಹಿಸಿರುವ ಪತ್ನಿ ಪಾರ್ವತಿ ಸರ್ಕಾರದ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ.
ಹಾವೇರಿ ಮಹಿಳೆಯರಿಂದ ಸಿಎಂಗೆ ಮಾಂಗಲ್ಯ ಪೋಸ್ಟ್!
ಮಾಂಗಲ್ಯ ಉಳಿಸಿ ಅಭಿಯಾನ ಆರಂಭಿಸಿರುವ ಹಾವೇರಿ ಜಿಲ್ಲೆಯ ನೊಂದ ಮಹಿಳೆಯರು ಹಾಗೂ ರೈತ ಮುಖಂಡರು 'ಮಾಂಗಲ್ಯ ಸರ ಉಳಿಸಿ' ಎಂಬ ಅಭಿಯಾನದ ಮೂಲಕ ಹಾವೇರಿ ನಗರದ ಅಂಚೆ ಕಚೇರಿ ಮೂಲಕ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಮಾಂಗಲ್ಯ ಸರ ರವಾನೆ ಮಾಡಿದ್ದಾರೆ. ಮನೆ ಬಾಗಿಲಿಗೆ ಬಂದು ಮೈಕ್ರೋ ಫೈನಾನ್ಸ್ ಸಿಬ್ಬಂದಿ ಕಿರುಕುಳ ನೀಡುತ್ತಿದ್ದಾರೆ. ಮನೆಯಲ್ಲಿ ನೆಮ್ಮದಿಯಾಗಿ ಇರುವಂತಿಲ್ಲ ಎಂದು ನೊಂದ ಮಹಿಳೆಯರು ಆರೋಪಿಸಿದ್ದಾರೆ.
ಮನೆಗೆ ಬಂದರೆ ಇವರ ಕಿರುಕುಳ ಇವರು ಬಂದರೆ ಸುತ್ತಮುತ್ತಲಿನವರ ಕೇಳುವಂತಾಗಿದೆ. ಹೀಗಾಗಿ ಕಿರುಕುಳ ತಪ್ಪಿಸಿ, ಮಾಂಗಲ್ಯ ಉಳಿಸಿ ಎಂದು ಮಹಿಳೆಯರ ಒತ್ತಾಯಿಸಿ, ಎಸ್‌ಪಿ ಹಾಗೂ ಜಿಲ್ಲಾಧಿಕಾರಿಗಳಿಗೆ ಮಹಿಳೆಯರು ಮನವಿ ಸಲ್ಲಿಕೆ ಮಾಡಿದ್ದಾರೆ.