Header Ads Widget

ಕೈಲಾಸ ಕಾಣ ಬನ್ನಿ ಭವದೊಳಗೆ....

ಮನದ ಪುಷ್ಕರಣಿಯಲಿ ಮಿಂದೆದ್ದು

ಶಿವನ ಧ್ಯಾನದೊಳಿರಲು ಕೈಲಾಸವ ಕಾಣ ಬನ್ನಿ

ಮಾನಸ ಸರೋವರದಲಿ ಮಿಂದೆದ್ದು ಕೈಲಾಸವ ಕಾಣ ಬನ್ನಿ

ತ್ರೈಲೋಕ ಸಂಚಾರಿ ಇವನು..

ಕೈಲಾಸದಲಿ‌ ಸತೀ ತಾಂಡವನಾಡುವ

ಬ್ರಹ್ಮಾಂಡದೊಳು ತ್ರಿಪುರ ತಾಂಡವನಾಡುವ

ಮಸಣದೊಳು ಆನಂದ ತಾಂಡವನಾಡುವ..

ಕೈಲಾಸ ಕಾಣ ಬನ್ನಿ ಭವದೊಳಗೆ..


ಮಸಣದಲಿ ಮನೆ ಮಾಡಿದಾತನಿಗೆ

ಮರಣದ ಭಯವೇನು...?

ಮರಣವನು ಕಂಡವನಿಗೆ ಶಿವನೊಲಿವನೆ ಎನ್ನದಿರಿ..

ಬೂದಿಯಲಿ ಮಿಂದವನು..,

ಬುರುಡೆಯನು‌ ಧರಿಸಿದವನು.. ಗಜಚರ್ಮಾಂಬರನಿವನು ..

ಲೋಕ ಡೊಂಕಿಗೆ ಢಮರುಗ ಭಾರಿಸುವನು

ಬಡಿದೆಚ್ಚರಿಸುತ‌...

ಮನುಜರ ಲೊಳಲೊಟ್ಟೆಯ ಬದುಕಿನ

ವಿಷಪ್ರಾಶನಕೆ ಕೊರಳಾಗುವನು..

ಕೈಲಾಸ ಕಾಣ ಬನ್ನಿ ಭವದೊಳಗೆ..


ಶಿವನು ತ್ರಿಲೋಕದೊಡೆಯನು...

ಸ್ವತಂತ್ರ ಸೇನಾನಿಯೂ

ಕೈಲಾಸದಲಿ ಸಂಗಾತಿಯು 

ಮಸಣದಲಿ ಸಂಭವಾಮಿ

ಭುವಿಯ ಭಕುತರ ಕಾಯುವವನು

ಮಸಣವನೂ ಕಾಯುವನೆಂದರೆ‌ ಅತೀತನೇ.. 

ಸತಿ ಶಿವಾನಿಯೂ ಕೇಳಿದ್ದೂ ಅತಿ ವಿಷಯವಲ್ಲ

ಅವನು ಹೇಳಿದ್ದು ಅತಿಶಯವಲ್ಲ

 ಆತ್ಮಾನುಸಂಧಾನದ ಉತ್ತರ..!


ಮಸಣವನು ಕಾಯುವುದು ಭಕುತರ ಆತ್ಮ ಕಾದಂತೆ...

ಆತ್ಮವನು ಕಾದರೆ ಪರಮಾತ್ಮ ಒಲಿದಂತೆ..!


ಹೆಣವನು ಸುಟ್ಟು ತನ್ನವರೆಲ್ಲ ಬಿಟ್ಟು ಹೋದೆಡೆ 

ಒಂಟಿ ಆತ್ಮಕೆ ಆತ್ಮೀಯರು ಯಾರು?

ಶಿವನು ತಾನೆ....

ಆತ್ಮವನು ಪೊರೆಯುವನು.. ಅಧ್ಯಾತ್ಮವನು ತರೆಯುವನು

ಶಿವನು ಮಸಣದೊಳಿರಲು 

ಮೃತವು ಅಮೃತವಾಯಿತು...!

ಕೈಲಾಸ ಕಾಣ ಬನ್ನಿ ಭವದೊಳಗೆ..


ರಭಸದಲಿ ಹರಿದ ಗಂಗೆಯನು ಜಟೆಯೊಳಗೆ 

ಬಿಗಿ ಬಂಧದೊಳಿರಿಸಲು

ಭುವಿಗೆ ಹರಿಯಬಿಟ್ಟನು ಸಲೀಲವಾಗಿ ನಿಧಾನಿಸಿ ನಿಧಾನಿಸಿ

ತನಗಲ್ಲದಿರೆ ಭವದ ಭಕುತರ ಬದುಕಿಗಿರಲಿ

ಮನದ ರೋಷಕೆ ತಣ್ಣನೆಯ ಅನುಭಾವದ ಹರಿವಿರಲೆಂದು

ಕೈಲಾಸ ಕಾಣ ಬನ್ನಿ ಭವದೊಳಗೆ..


ಲೋಕ ನಡುಗಿಸುವ ಕಾಲ್ಗುಣಿತ ಅವನದು

ಲಯ ತಪ್ಪಿದರೆ ಲಯಗೊಳಿಸುವ ರುದ್ರನವನು

ಮರೆಯದಿರು ಮಾನವ ನಿನೊಳಗಿನ ವೈರಿಗಳಿಗೆ ತಾಂಡವವನಾಡಿಸುನು

ಲೌಕಿಕದೊಳು ಪಾರಮಾರ್ಥಿಕ ಪಥಿಕನಾಗು

ಕೈಲಾಸ ಕಾಣ ಬನ್ನಿ ಭವದೊಳಗೆ...


~ಉಮೇಶ್ ‌ಆಚಾರ್ಯ, ಉಡುಪಿ