Header Ads Widget

ಸುಜಯೀಂದ್ರರಿಗೆ ಅಲೆವೂರಾಯ ಪುರಸ್ಕಾರ

“ಕಲೆ ಸಾಹಿತ್ಯ ಮಾನವನಿಗೆ ಸಂಸ್ಕಾರವನ್ನು ಕಲಿಸುತ್ತದೆ. ಔಪಚಾರಿಕ ಶಿಕ್ಷಣದಿಂದಾಗಿ ಇವತ್ತು ಮಕ್ಕಳು ಹೊರದೇಶಗಳಿಗೆ ಹೋಗಿ ಕೇವಲ ಹಣ ಮಾಡುವ ಯೋಚನೆಯಲ್ಲಿದ್ದಾರೆ. ಭಾರತೀಯ ಜೀವನ ಮೌಲ್ಯ, ಪರಂಪರೆಯನ್ನು ಉಳಿಸಿ ಬೆಳೆಸುವಲ್ಲಿ ಯಕ್ಷಗಾನದ ಪಾತ್ರ ಹಿರಿದಾದುದು. ಅದರಲ್ಲೂ ಮಕ್ಕಳಿಗೆ ಯಕ್ಷಗಾನವನ್ನು ಕಲಿಸಿದರೆ ಪುರಾಣದ ಜೀವನ ಮೌಲ್ಯಗಳನ್ನು ಅರಿಯಲು ಸಹಕಾರಿಯಾಗುತ್ತದೆ. ಸಾಲಿಗ್ರಾಮ ಮಕ್ಕಳ ಮೇಳದ ಸುಜಯೀಂದ್ರರು ಅಂತಹ ಕಾರ್ಯದಲ್ಲಿ ತಮ್ಮನ್ನು ತೊಡಗಿಸಿಕೊಂಡವರು. ಇಂದಿನ ಗೌರವ ಪುರಸ್ಕಾರ ಅಭಿನಂದನೀಯ” ಎಂದು ಕನ್ನಡ ಸಾಹಿತ್ಯ ಪರಿಷತ್ತಿನ ಮಾಜಿ ರಾಜ್ಯಾಧ್ಯಕ್ಷ ಹರಿಕೃಷ್ಣ ಪುನರೂರು ಹೇಳಿದರು.

ಮಂಗಳೂರಿನ ಅಲೆವೂರಾಯ ಪ್ರತಿಷ್ಠಾನವು ಫೆಬ್ರುವರಿ ೨೨ ರಂದು ಮಂಗಳೂರಿನ ಮಂಗಳಾ ದೇವಿ ದೇವಸ್ಥಾನದ ರಾಜಾಂಗಣದಲ್ಲಿ ಆಯೋಜಿಸಿದ ಮೂರು ದಿನಗಳ ‘ಯಕ್ಷ ತ್ರೀವೇಣಿ’ ಮತ್ತು ೮ ನೇ ವರ್ಷದ ಪ್ರಶಸ್ತಿ ಪ್ರದಾನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಮಂಗಳಾ ದೇವಿ ದೇವಳದ ಪ್ರಧಾನ ಮೊಕ್ತೇಸರರಾದ ಅರುಣ್ ಐತಾಳ್ ಕಾಯ್ರಕ್ರಮವನ್ನು ದೀಪ ಬೆಳಗಿಸಿ ಉದ್ಘಾಟಿಸಿದರು. ಇದೇ ಸಂದರ್ಭ ಸಾಲಿಗ್ರಾಮ ಮಕ್ಕಳ ಮೇಳದ ನಿರ್ದೇಶಕ ಉಪನ್ಯಾಸಕ ಎಚ್. ಸುಜಯೀಂದ್ರ ಹಂದೆಯವರಿಗೆ ಅಲೆವೂರಾಯ ಪ್ರತಿಷ್ಠಾನವತಿಯಿಂದ ಗೌರವ ಪ್ರಶಸ್ತಿ ಪ್ರದಾನ ಮಾಡಲಾಯಿತು.

ಉಪನ್ಯಾಸಕ ಬಾಲಕೃಷ್ಣ ಶೆಟ್ಟಿ, ಯಕ್ಷ ಕಲಾ ಸಾಹಿತಿ ಜನಾರ್ದನ ಹಂದೆ, ಕಲಾವಿದ ಮಾಂಬಾಡಿ ವೇಣುಗೋಪಾಲ, ಪ್ರತಿಷ್ಠಾನದ ಮಧು ಅಲೆವೂರಾಯ ಉಪಸ್ಥಿತರಿದ್ದರು.

ಸಂಘಟಕ, ಕಲಾವಿದ ವರ್ಕಾಡಿ ರವಿ ಅಲೆವೂರಾಯ ಸ್ವಾಗತಿಸಿದರು. ಸುಧಾಕರ ಪೇಜಾವರ ಕಾರ್ಯಕ್ರಮ ನಿರ್ವಹಿಸಿದರು.