ರಫ್ತು ವಿಭಾಗದಲ್ಲಿ ಮಹತ್ವದ ಸಾಧನೆ ಮಾಡಿರುವ ಟೊಯೋಟಾ ಕಿರ್ಲೋಸ್ಕರ್ ಮೋಟಾರ್ (ಟಿಕೆಎಂ) ಸಂಸ್ಥೆಗೆ ಇತ್ತೀಚೆಗೆ ನವದೆಹಲಿಯಲ್ಲಿ ನಡೆದ 54ನೇ ಇಇಪಿಸಿ ಇಂಡಿಯಾ ನ್ಯಾಷನಲ್ ಎಕ್ಸ್ ಪೋರ್ಟ್ ಅವಾರ್ಡ್ಸ್ ಸಮಾರಂಭದಲ್ಲಿ ‘ಸ್ಟಾರ್ ಪರ್ಫಾರ್ಮರ್ ಪ್ರಶಸ್ತಿ’ ನೀಡಿ ಗೌರವಿಸಲಾಗಿದೆ. ಈ ಪ್ರಶಸ್ತಿಯನ್ನು 2021-22ನೇ ಸಾಲಿನ ದೊಡ್ಡ ಉದ್ಯಮ ವಿಭಾಗದಲ್ಲಿ ಇಂಜಿನ್‌ಗಳು ಮತ್ತು ಭಾಗಗಳು ಕೆಟಗರಿ ಅಡಿಯಲ್ಲಿ ಕಂಪನಿಯ ಅತ್ಯುತ್ತಮ ರಫ್ತು ಸಾಧನೆಗೆ ನೀಡಲಾಗಿದೆ.
ಪ್ರತಿಷ್ಠಿತ ಇಇಪಿಸಿ ಇಂಡಿಯಾ ನ್ಯಾಷನಲ್ ಎಕ್ಸ್ ಪೋರ್ಟ್ ಅವಾರ್ಡ್ಸ್ ಭಾರತದ ಎಂಜಿನಿಯರಿಂಗ್ ರಫ್ತು ಕ್ಷೇತ್ರದಲ್ಲಿ ಅಸಾಧಾರಣ ಸಾಧನೆಗಳನ್ನು ಮಾಡುವ ಕಂಪನಿಗಳನ್ನು ಗುರುತಿಸಿ ಗೌರವಿಸುತ್ತದೆ. ಈ ಕಂಪನಿಗಳ ಆವಿಷ್ಕಾರ, ಶ್ರೇಷ್ಠತೆ ಮತ್ತು ವಿದೇಶಿ ವ್ಯಾಪಾರಕ್ಕೆ ನೀಡಿರುವ ಗಣನೀಯ ಕೊಡುಗೆಗಳನ್ನು ಸಂಭ್ರಮಿಸಲಾಗುತ್ತದೆ. ಎಂಜಿನಿಯರಿಂಗ್ ಎಕ್ಸ್ ಪೋರ್ಟ್ ಪ್ರಮೋಷನ್ ಕೌನ್ಸಿಲ್ (ಇಇಪಿಸಿ) ಆಫ್ ಇಂಡಿಯಾ ಆಯೋಜಿಸಿದ್ದ ಈ ಕಾರ್ಯಕ್ರಮದಲ್ಲಿ ಭಾರತ ಸರ್ಕಾರದ ವಾಣಿಜ್ಯ ಮತ್ತು ಕೈಗಾರಿಕೆ, ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ರಾಜ್ಯ ಸಚಿವರಾದ ಶ್ರೀ. ಜಿತಿನ್ ಪ್ರಸಾದ, ಇಇಪಿಸಿ ಇಂಡಿಯಾದ ಕಾರ್ಯನಿರ್ವಾಹಕ ನಿರ್ದೇಶಕ ಮತ್ತು ಕಾರ್ಯದರ್ಶಿ ಶ್ರೀ. ಅಧೀಪ್ ಮಿತ್ರ, ಇಇಪಿಸಿ ಇಂಡಿಯಾ ಚೇರ್ ಮನ್ ಶ್ರೀ. ಪಂಕಜ್ ಚಡ್ಡಾ ಮತ್ತು ಇಇಪಿಸಿ ಇಂಡಿಯಾ ಪ್ರಾದೇಶಿಕ ಅಧ್ಯಕ್ಷ (ಉತ್ತರ ಪ್ರದೇಶ) ಶ್ರೀ. ಪ್ರದೀಪ್ ಕುಮಾರ್ ಅಗರವಾಲ್ ಉಪಸ್ಥಿತರಿದ್ದರು.
ಎಫ್‌ಓಬಿ (ಫ್ರೀ ಆನ್ ಬೋರ್ಡ್) ರಫ್ತು ಮೌಲ್ಯ, ಗಳಿಸಿದ ನಿವ್ವಳ ವಿದೇಶಿ ವಿನಿಮಯ ಮತ್ತು ಉತ್ಪನ್ನ ಶ್ರೇಣಿಯಂತಹ ಪ್ರಮುಖ ಸಾಧನೆಯ ಮಾನದಂಡಗಳ ಆಧಾರದಲ್ಲಿ ಟಿಕೆಎಂ ಈ ಪ್ರಶಸ್ತಿ ಗಳಿಸಿದೆ. 2021-22ರಲ್ಲಿ ಟಿಕೆಎಂ ಎಂಜಿನ್‌ಗಳು ಮತ್ತು ಭಾಗಗಳ ರಫ್ತಿನಲ್ಲಿ ಶೇ.39ರಷ್ಟು ಅಭಿವೃದ್ಧಿಯನ್ನು ದಾಖಲಿಸಿದ್ದು, ಜಾಗತಿಕ ಪೂರೈಕೆ ಸರಪಳಿಯಲ್ಲಿನ ತನ್ನ ಸ್ಥಾನವನ್ನು ಮತ್ತಷ್ಟು ಗಟ್ಟಿಗೊಳಿಸಿದೆ. ಈ ಪ್ರಶಸ್ತಿಯು ಉತ್ತಮ ಗುಣಮಟ್ಟದ ಉತ್ಪಾದನೆ, ಜಾಗತಿಕ ಸ್ಪರ್ಧಾತ್ಮಕತೆ ಮತ್ತು ಸ್ಥಿರ ರಫ್ತು ಬೆಳವಣಿಗೆಯನ್ನು ಸಾಧಿಸುವ ನಿಟ್ಟಿನಲ್ಲಿ ಸಾಗುತ್ತಿರುವ ಟಿಕೆಎಂನ ಪ್ರಯತ್ನಗಳಿಗೆ ದೊರಕಿದ ಗೆಲುವಾಗಿದೆ.
ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಟೊಯೋಟಾ ಕಿರ್ಲೋಸ್ಕರ್ ಮೋಟಾರ್‌ನ ಹಣಕಾಸು ಮತ್ತು ಆಡಳಿತ ವಿಭಾಗದ ಕಾರ್ಯನಿರ್ವಾಹಕ ಉಪಾಧ್ಯಕ್ಷ ಮತ್ತು ನಿರ್ದೇಶಕರಾದ ಶ್ರೀ. ಜಿ. ಶಂಕರ,* “ಈ ಪ್ರಶಸ್ತಿಯು ಟೊಯೋಟಾ ಕಿರ್ಲೋಸ್ಕರ್ ಮೋಟಾರ್‌ನ ಗುಣಮಟ್ಟ, ಆವಿಷ್ಕಾರ ಮತ್ತು ಜಾಗತಿಕ ಆಟೋಮೊಬೈಲ್ ರಫ್ತು ವಿಭಾಗದಲ್ಲಿ ಭಾರತದ ಪಾತ್ರವನ್ನು ಹೆಚ್ಚುಗೊಳಿಸಲು ಕಂಪನಿ ನೀಡುತ್ತಿರುವ ಅತ್ಯುತ್ತಮ ಕೊಡುಗೆಗೆ ಸಾಕ್ಷಿಯಾಗಿದೆ. ರಾಷ್ಟ್ರ ಮಟ್ಟದಲ್ಲಿ ಎಂಜಿನಿಯರಿಂಗ್ ಶ್ರೇಷ್ಠತೆ ಮತ್ತು ಜಾಗತಿಕ ಸ್ಪರ್ಧಾತ್ಮಕತೆಯನ್ನು ಸಾಕಾರಗೊಳಿಸುವ ನಿಟ್ಟಿನಲ್ಲಿ ನಾವು ನಡೆಸುತ್ತಿರುವ ನಮ್ಮ ಅವಿರತ ಪ್ರಯತ್ನಗಳನ್ನು ಗುರುತಿಸಿರುವುದು ನಿಜಕ್ಕೂ ದೊಡ್ಡ ಗೌರವವಾಗಿದೆ. ಈ ಮನ್ನಣೆಗಾಗಿ ಇಇಪಿಸಿ ಇಂಡಿಯಾಗೆ ನಾವು ಹೃತ್ಪೂರ್ವಕ ಧನ್ಯವಾದಗಳನ್ನು ಅರ್ಪಿಸುತ್ತೇವೆ ಮತ್ತು ರಫ್ತು ಯೋಜನೆಗಳನ್ನು ಮತ್ತಷ್ಟು ಬಲಪಡಿಸುವ ಮೂಲಕ ಅಂತರರಾಷ್ಟ್ರೀಯ ಮಾರುಕಟ್ಟೆಗಳಲ್ಲಿ ಬಲವಾದ ಉಪಸ್ಥಿತಿಯನ್ನು ಹೆಚ್ಚಿಸುವ ನಮ್ಮ ಬದ್ಧತೆಯನ್ನು ಮುಂದುವರೆಸುತ್ತೇತ್ತೇವೆ” ಎಂದು ಹೇಳಿದರು.
ಕಳೆದ ವರ್ಷದ ಇಇಪಿಸಿ ಇಂಡಿಯಾ ಸದರ್ನ್ ರೀಜನ್ ಎಕ್ಸ್ ಪೋರ್ಟ್ ಅವಾರ್ಡ್ ಕಾರ್ಯಕ್ರಮದಲ್ಲಿ ಕಂಪನಿಯ ಗಮನಾರ್ಹ ರಫ್ತು ಸಾಧನೆಯನ್ನು ಪ್ರಶಂಸಿಸಲಾಗಿತ್ತು. ಜೊತೆಗೆ ಟಿಕೆಎಂಗೆ ಎರಡು ಪ್ರತಿಷ್ಠಿತ ಪ್ರಶಸ್ತಿಗಳು ಲಭಿಸಿದ್ದವು. 2019-20ನೇ ಸಾಲಿನ ‘ಎಂಜಿನ್‌ಗಳು ಮತ್ತು ಟರ್ಬೈನ್ ಗಳು ಮತ್ತು ಅವುಗಳ ಭಾಗಗಳು - ದೊಡ್ಡ ಉದ್ಯಮ’ ವಿಭಾಗದ ಪ್ರಶಸ್ತಿ ಮತ್ತು 2020-21ನೇ ಸಾಲಿನ ಮರ್ಚೆಂಟ್ ಎಕ್ಸ್ ಪೋರ್ಟರ್ ಕೆಟಗರಿ ವಿಭಾಗದ ಉನ್ನತ ರಫ್ತುದಾರರಿಗಾಗಿ ‘ಗೋಲ್ಡ್ ಟ್ರೋಫಿ’ ಪ್ರಶಸ್ತಿ ಗಳಿಸಿತ್ತು.
ಟಿಕೆಎಂ ತನ್ನ ರಫ್ತು ವಿಭಾಗವನ್ನು ಅಭಿವೃದ್ಧಿಯತ್ತ ಮುನ್ನಡೆಸಲು ಬದ್ಧವಾಗಿದ್ದು, ಜಾಗತಿಕ ಮಟ್ಟದ ಉತ್ಪಾದನಾ ಸಾಮರ್ಥ್ಯಗಳನ್ನು ಬಳಸಿಕೊಂಡು ಭಾರತದ ಎಂಜಿನಿಯರಿಂಗ್ ಸಾಮರ್ಥ್ಯವನ್ನು ಜಾಗತಿಕ ವೇದಿಕೆಯಲ್ಲಿ ಉತ್ಕೃಷ್ಟಗೊಳಿಸುವ ಗುರಿಯನ್ನು ಹೊಂದಿದೆ. ‘ಮೇಕ್ ಇನ್ ಇಂಡಿಯಾ’ ಯೋಜನೆಯ ಬಲವಾದ ಪ್ರತಿಪಾದಕರಾಗಿರುವ ಕಂಪನಿಯು ಸ್ಥಳೀಕರಣವನ್ನು ಹೆಚ್ಚಿಸುವಲ್ಲಿ, ಪೂರೈಕೆ ಸರಪಳಿ ಪರಿಸರವನ್ನು ಬಲಪಡಿಸುವಲ್ಲಿ ಮತ್ತು ಉತ್ತಮ ಗುಣಮಟ್ಟದ ಎಂಜಿನಿಯರಿಂಗ್ ಉತ್ಪನ್ನಗಳ ರಫ್ತು ಮಾಡುವ ಮೂಲಕ ರಾಷ್ಟ್ರದ ಆರ್ಥಿಕ ಬೆಳವಣಿಗೆಗೆ ಕೊಡುಗೆ ನೀಡುವ ನಿಟ್ಟಿನಲ್ಲಿ ಕಾರ್ಯ ನಿರ್ವಹಿಸಲಿದೆ.